ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಸಮಾವೇಶಗೊಂಡ ಪ್ರತಿಭಟನಾನಿರತರು, ಕಾಂಗ್ರೆಸ್ ನಂಬಿದ್ರೆ ಬೊಂಬು ಗ್ಯಾರಂಟಿ, ಖಜಾನೆ ಕಾಸಿಲ್ಲ, ಬರೀ ಸೌಂಡು ಮಾತ್ರ, ಡಿ.ಕೆ.ಶಿವಕುಮಾರ್ ಬಿಟ್ಟಿಘೋಷಣೆಗೆ ಬರವಿಲ್ಲ. ಜನರ ಕಿವಿಮೇಲೆ ಹೂವಿಟ್ಟ ಡಿ.ಕೆ.ಶಿವಕುಮಾರ್, ಬೊಕ್ಕಸ ಖಾಲಿ ಖಾಲಿ, ಡಿ.ಕೆ.ಸರ್ಕಾರ ದಿವಾಳಿ ಎಂಬಿತ್ಯಾದಿ ಘೋಷಣೆಗಳನ್ನು ಬರೆದಿದ್ದ ಭಿತ್ರಪತ್ರಗಳನ್ನು ಹಿಡಿದು ಮೆರವಣಿಗೆ ಹೊರಟರು. ಚಾಮರಾಜೇಶ್ವರ ಉದ್ಯಾನವನದ ಮುಂಭಾಗದಲ್ಲಿ ರಾಜ್ಯ ಸರ್ಕಾರ ಅಣಕು ಶವಯಾತ್ರೆ ಆರಂಭಿಸಿದರು. ಪೊಲೀಸರು ಅಣಕು ಶವ ವಶಪಡಿಸಿಕೊಳ್ಳಲು ಮುಂದಾದಾಗ ಪೊಲೀಸರು, ಪ್ರತಿಭಟನಾನಿರತರ ನಡುವೆ ತಳ್ಳಾಟ, ನೂಕಾಟ ನಡೆದು ಪೊಲೀಸರು ಅಣಕು ಶವ ವಶಕ್ಕೆ ಪಡೆದರು.
ನಂತರ ಭಿತ್ತಿಪತ್ರಗಳನ್ನು ಹಿಡಿದು ಪ್ರತಿಭಟನಾನಿರತರು ಭುವನೇಶ್ವರಿ ವೃತ್ತಕ್ಕೆ ತೆರಳಿ ಕೆಲಕಾಲ ಪ್ರತಿಭಟನೆ ನಡೆಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಅಕ್ರೋಶ ವ್ಯಕ್ತಪಡಿಸಿದರು.ವಿಧಾನ ಪರಿಷತ್ ಮಾಜಿ ಸದಸ್ಯ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ ಮಾತನಾಡಿ, ಸರ್ಕಾರದಲ್ಲಿ ಹಣವಿಲ್ಲದಿದ್ದರೂ ಸಹ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೋದ ಹೋದ ಕಡೆಯಲ್ಲಿ ಹೊಸ ಹೊಸ ಯೋಜನೆ ಜಾರಿ ಮಾಡುವ ಮೂಲಕ ರಾಜ್ಯದ ಜನತೆಗೆ ಮಂಕುಬೂದಿ ಎರಚುವ ಕೆಲಸ ಮಾಡಿದ್ದಾರೆ. ಖಜಾನೆಯಲ್ಲಿರುವ ಹಣಕ್ಕೆ ಹೋಲಿಕೆ ಮಾಡಿ ಹೊಸ ಹೊಸ ಯೋಜನೆಗಳನ್ನು ಘೋಷಣೆ ಮಾಡಬೇಕು. ರಾಜ್ಯದ ಜನರನ್ನು ತಪ್ಪುದಾರಿಗೆ ಎಳೆಯುವ ದಿಕ್ಕಿನಲ್ಲಿ ಕಾಂಗ್ರೆಸ್ ಸರ್ಕಾರ ಹೆಜ್ಜೆಯನ್ನು ಇಟ್ಟಿದೆ. ಇಂತಹ ಸರ್ಕಾರ ತೊಲಗಬೇಕು ಎಂದು ಆಗ್ರಹಿಸಿದರು.
ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ ಮಾತನಾಡಿ, ರಾಜ್ಯ ಸರ್ಕಾರದ ಖಾಲಿ ಖಜಾನೆ ವಿರುದ್ಧ ಬಿಜೆಪಿಯು ಇಡೀ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದೆ. ಈ ಸರ್ಕಾರ ಸಂಪೂರ್ಣವಾಗಿ ಸರ್ಕಾರಿ ನೌಕರರಿಗೆ ಸಂಬಳ ನೀಡುತ್ತಿಲ್ಲ. ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲ. ಸುಳ್ಳು ಸುಳ್ಳು ಆಶ್ವಾಸನೆ ಕೊಟ್ಟು ಜನರಿಗೆ ಮಣ್ಣು ಎರಚುವ ಕೆಲಸ ಮಾಡುತ್ತಿದ್ದಾರೆ. ಈ ಸರ್ಕಾರ ಜನರಿಗೆ ಖಾಲಿ ಚೊಂಬು ಕೊಡುತ್ತಿದೆ ಎಂದು ರಾಜ್ಯಾದ್ಯಂತ ಬಿಜೆಪಿ ವತಿಯಿಂದ ಪ್ರತಿಭಟನೆ ಮಾಡಲಾಗುತ್ತಿದೆ ಎಂದರು.
ಎಸ್ ಟಿ ಮೋರ್ಚಾದ ಜಿಲ್ಲಾಧ್ಯಕ್ಷ ಚಂದ್ರಶೇಖರ್, ಚಾಮುಲ್ ಮಾಜಿ ನಿರ್ದೇಶಕ ಶಶಿಕಿಲಗೆರೆ, ಆನಂದ್ ಭಗೀರಥ, ವೀರೇಂದ್ರ, ಮಹೇಶ್, ಮಂಜು,ರಾಶಿಕೃಷ್ಣ ಇತರರು ಭಾಗವಹಿಸಿದ್ದರು.