ಕನ್ನಡಪ್ರಭ ವಾರ್ತೆ ಶಿವಮೊಗ್ಗ
2014ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಇದೀಗ ಏಳನೇ ಅಧಿಸೂಚನೆ ಹೊರಡಿಸಿರುವುದು ಮಲೆನಾಡಿನ ಜನರಲ್ಲಿ ಗೊಂದಲ ಹಾಗೂ ಆತಂಕಕ್ಕೆ ಕಾರಣವಾಗಿದೆ. ರೈತರು ಮತ್ತು ಸಾರ್ವಜನಿಕರ ಅಹವಾಲುಗಳನ್ನು ಆಲಿಸುವ ವ್ಯವಸ್ಥೆಯೇ ಇಲ್ಲದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗಾಜನೂರು ಗ್ರಾಪಂ ವ್ಯಾಪ್ತಿಯ 10 ರಿಂದ 15 ಗ್ರಾಮಗಳನ್ನು ಪರಿಸರ ಸೂಕ್ಷ್ಮ ವಲಯ (ಇಎಸ್‌ಎ) ಎಂದು ಗುರುತಿಸಿರುವುದು ಸ್ಥಳೀಯರ ಆತಂಕಕ್ಕೆ ಪ್ರಮುಖ ಕಾರಣವಾಗಿದೆ. ಈ ಪ್ರದೇಶದಲ್ಲಿ ಹಲವು ದಶಕಗಳಿಂದ ವಾಸವಾಗಿರುವ ರೈತರು ಹಾಗೂ ಸಾಗುವಳಿದಾರರ ಹಕ್ಕುಗಳನ್ನು ಮೊದಲು ಕೇಂದ್ರ ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.ಮುಳುಗಡೆ ಸಂತ್ರಸ್ತರನ್ನು ಅಂದಿನ ಸರ್ಕಾರವೇ 1963ರಲ್ಲಿ ಈ ಪ್ರದೇಶಗಳಿಗೆ ಪುನರ್ವಸತಿ ಕಲ್ಪಿಸಿತ್ತು. ಬಳಿಕದ ಸರ್ಕಾರಗಳು ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಗೆ ಸಂಬಂಧಿಸಿದ ಹಲವು ಕಾನೂನುಗಳನ್ನು ಜಾರಿಗೊಳಿಸಿ ದರೂ, ಇಲ್ಲಿನ ಜನರು ಸಂಕಷ್ಟಗಳ ನಡುವೆಯೇ ಬದುಕು ಕಟ್ಟಿಕೊಂಡಿದ್ದಾರೆ. ಇದೀಗ ಬ್ರಿಟಿಷರ ಕಾಲದ ಕಾನೂನಿನ ಆಧಾರದಲ್ಲಿ ಈ ಪ್ರದೇಶ ಅರಣ್ಯ ಇಲಾಖೆಗೆ ಸೇರಿದ್ದು ಎಂದು ಹೇಳಿ ಸಾಗುವಳಿದಾರರನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಡೆಯುತ್ತಿದೆ. ಮೊದಲು ರೈತರ ಹಕ್ಕುಗಳನ್ನು ಪ್ರತಿಷ್ಠಾಪಿಸಬೇಕು ಎಂದು ಆಗ್ರಹಿಸಿದರು.
ಹಾಲಿ ಸಾಗುವಳಿ ಮಾಡುತ್ತಿರುವ ರೈತರು ಹಾಗೂ ಸಾರ್ವಜನಿಕರನ್ನೇ ಆ ಪ್ರದೇಶದ ಕಾನೂನು ಬದ್ಧ ವಾರಸುದಾರರು ಎಂದು ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ಇಂದು ತೋಟದಕೆರೆಯಿಂದ: ಹಾಲ ಲಕ್ಕವಳ್ಳಿಯಿಂದ ಪ್ರಾರಂಭವಾದ ಪಾದಯಾತ್ರೆ ಕಡೇಕಲ್, ಕುಸ್ಕೂರು, ಯರಗನಾಳ್, ಸಂಜೆ 5ಕ್ಕೆ ಲಕ್ಕಿನಕೊಪ್ಪ ಸರ್ಕಲ್ ತಲುಪಿತು. ಸೆ.11 ರಂದು ಬೆಳಗ್ಗೆ 8.30ಕ್ಕೆ ತೋಟದಕೆರೆಯಿಂದ ಆರಂಭವಾಗುವ ಪಾದಯಾತ್ರೆ ಹುರಳಿಹಳ್ಳಿ, ಗಣಿದಾಳ್ ಮಾರ್ಗವಾಗಿ 11.30ಕ್ಕೆ ಉಂಬ್ಳೆ ಬೈಲು ತಲುಪಿ ಅಲ್ಲಿ ಸಾರ್ವಜನಿಕ ಸಭೆ ಏರ್ಪಡಿಸಲಾಗಿದೆ. ನಂತರ ಸಾರಿಗೆರೆ, ಕೈದೊಟ್ಲು, ಸಿದ್ದಮಾಜಿ ಹೊಸೂರು ಮಾರ್ಗವಾಗಿ ಲಿಂಗಾಪುರ ಬಳಿಕ ಸಂಜೆ 5.30ಕ್ಕೆ ಕಾಕನಹಸೂಡಿ ತಲುಪಲಿದೆ.