ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ಜಿಲ್ಲಾ ಕೇಂದ್ರದಲ್ಲಿ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಫಲಾನುಭವಿಗಳಿಗೆ ತರಬೇತಿ ಕೇಂದ್ರ ಸ್ಥಾಪಿಸಬೇಕು ಎಂದು ಬಿಜೆಪಿ ಎಸ್‌ಸಿ ಮೋರ್ಚಾ ಮುಖಂಡರು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.ಈ ಸಂಬಂಧ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರಿಗೆ ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕುರುವಂಗಿ ವೆಂಕಟೇಶ್ ನೇತೃತ್ವದಲ್ಲಿ ಸೋಮವಾರ ಮನವಿ ಸಲ್ಲಿಸಲಾಯಿತು.ಬಳಿಕ ಮಾತನಾಡಿದ ಕುರುವಂಗಿ ವೆಂಕಟೇಶ್, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ವಿಶ್ವಕರ್ಮ ಯೋಜನೆ ಫಲಾನುಭವಿ ಗಳಿಗೆ ತರಬೇತಿ ಕೇಂದ್ರ ಸ್ಥಾಪಿಸಿ ಅನುಕೂಲ ಮಾಡಿಕೊಡಬೇಕು ಎಂದರು. ವಿಶ್ವಕರ್ಮ ಯೋಜನೆಯಲ್ಲಿ ವಿವಿಧ ಕುಶಲ ಕರ್ಮಿಗಳಡಿ ತಾಲೂಕು ಮತ್ತು ನಗರದ ನೂರಾರು ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದಾರೆ. ಆದರೆ, ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಕಡೂರು, ತರೀಕೆರೆ ಅಥವಾ ಅರಸೀಕೆರೆ ತಾಲೂಕಿಗೆ ಧಾವಿಸುವಂತೆ ಕರೆ ಬರುತ್ತಿದೆ ಎಂದು ಹೇಳಿದರು.
ಹೀಗಾಗಿ ಜಿಲ್ಲಾ ಕೇಂದ್ರದಲ್ಲಿ ತರಬೇತಿ ಕೇಂದ್ರ ಆರಂಭವಾಗದಿರುವ ಕಾರಣ ಅರ್ಜಿ ಸಲ್ಲಿಸಿರುವ ಫಲಾನುಭವಿಗಳಿಗೆ ತೀವ್ರ ಸಮಸ್ಯೆಯಾಗಿದೆ. ಜಿಲ್ಲಾಡಳಿತ ಶೀಘ್ರವೇ ಎಚ್ಚೆತ್ತುಕೊಂಡು ಜಿಲ್ಲಾ ಕೇಂದ್ರದಲ್ಲಿ ತರಬೇತಿ ಕೇಂದ್ರ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು. ಈ ವಿಷಯವಾಗಿ ಜಿಲ್ಲಾಡಳಿತ ವಿಳಂಬ ಧೋರಣೆ ಅನುಸರಿಸಿ ಫಲಾನುಭವಿಗಳಿಗೆ ತೊಂದರೆಯುಂಟಾದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಅನಿಯಮಿತವಾಗಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದರು.ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಎಸ್ಸಿ ಮೋರ್ಚಾ ಕಾರ್ಯದರ್ಶಿ ಸೀತಾರಾಮ ಭರಣ್ಯ, ಜಿಲ್ಲಾ ಉಪಾಧ್ಯಕ್ಷ ಕನಕರಾಜ್, ನಗರ ಮಂಡಲ ಉಪಾಧ್ಯಕ್ಷ ರೇವನಾಥ್, ಮಾಧ್ಯಮ ಸಹ ಪ್ರಮುಖ್ ಕೇಶವ, ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಕಾಶ್, ಸಹ ವಕ್ತಾರ ಹಂಪಯ್ಯ, ನಗರ ಎಸ್ಸಿ ಮೋರ್ಚಾ ಅಧ್ಯಕ್ಷ ಜಗದೀಶ್, ಮುಖಂಡರಾದ ಶೇಖರ್, ನರಸಿಂಹಮೂರ್ತಿ ಹಾಜರಿದ್ದರು.13 ಕೆಸಿಕೆಎಂ 3ಜಿಲ್ಲಾ ಕೇಂದ್ರದಲ್ಲಿ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಫಲಾನುಭವಿಗಳಿಗೆ ತರಬೇತಿ ಕೇಂದ್ರ ಸ್ಥಾಪಿಸಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರಿಗೆ ಸೋಮವಾರ ಬಿಜೆಪಿ ಎಸ್.ಸಿ. ಮೋರ್ಚಾದ ಮುಖಂಡರು ಮನವಿ ಸಲ್ಲಿಸಿದರು.