ಕಾಂಗ್ರೆಸ್ ಗ್ಯಾರಂಟಿಯನ್ನು ಬಿಜೆಪಿ ಕಾಪಿ ಮಾಡುತ್ತಿದೆ

KannadaprabhaNewsNetwork |  
Published : Mar 29, 2025, 12:32 AM IST
ಕಾಗೋಡು ತಿಮ್ಮಪ್ಪ ಉದ್ಘಾಟಿಸಿದರು | Kannada Prabha

ಸಾರಾಂಶ

ಸಾಗರ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯನ್ನು ಕಾಪಿ ಮಾಡಿ ದೇಶದಲ್ಲಿ ಬಿಜೆಪಿ ಅಧಿಕಾರ ಹಿಡಿಯುವ ಪ್ರಯತ್ನ ನಡೆಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಆರೋಪಿಸಿದರು.

ಸಾಗರ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯನ್ನು ಕಾಪಿ ಮಾಡಿ ದೇಶದಲ್ಲಿ ಬಿಜೆಪಿ ಅಧಿಕಾರ ಹಿಡಿಯುವ ಪ್ರಯತ್ನ ನಡೆಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಆರೋಪಿಸಿದರು.

ಇಲ್ಲಿನ ನಗರಸಭೆ ರಂಗಮಂದಿರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಗ್ಯಾರಂಟಿಯನ್ನು ನೀಡುವ ಮೂಲಕ ಬಡವರಲ್ಲಿ ಆರ್ಥಿಕ ಶಕ್ತಿ ತುಂಬುವ ಪ್ರಯತ್ನ ಮಾಡಿದೆ ಎಂದರು.ಗ್ಯಾರಂಟಿ ಯೋಜನೆಗಾಗಿ ರಾಜ್ಯ ಸರ್ಕಾರ ಪ್ರತಿವರ್ಷ ೫೬ ಸಾವಿರ ಕೋಟಿ ರು. ಖರ್ಚು ಮಾಡುತ್ತಿದೆ. ಒಂದು ನಯಾಪೈಸೆ ಕಮೀಷನ್ ಪಡೆದ ದಾಖಲೆ ಇಲ್ಲ. ಬಿಜೆಪಿಯುವರು ಯೋಜನೆ ಜಾರಿಗೆ ತರುವುದೇ ಶೇ.೪೦ ಕಮೀಷನ್ ಪಡೆಯಲು. ಗ್ಯಾರಂಟಿಯನ್ನು ನಂಬಿ ಮತದಾರರು ನಮ್ಮನ್ನು ಗೆಲ್ಲಿಸಿದ್ದಾರೆ. ಜನರ ವಿಶ್ವಾಸವನ್ನು ಕೊನೆಯವರೆಗೂ ಉಳಿಸಿ ಕೊಂಡು ಹೋಗುತ್ತೇವೆ ಎಂದರು.

ಬಡವರಿಗೆ ನೇರವಾಗಿ ಯೋಜನೆ ತಲುಪುತ್ತಿದೆ. ಹಿಂದಿನ ಸರ್ಕಾರ ೩೭ ಸಾವಿರ ಕೋಟಿ ಸಾಲ ಇರಿಸಿದ್ದರು. ಶಿಕ್ಷಣ ಇಲಾಖೆಯಲ್ಲಿ ೩ ಸಾ ವಿರ ಕೋಟಿ ರು. ಸಾಲ ಇರಿಸಿ ಹೋಗಿದ್ದರು. ಅದನ್ನೆಲ್ಲಾ ತೀರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಅಭಿವೃದ್ಧಿಗೆ ಎಲ್ಲ ಹಂತದಲ್ಲೂ ಹಣ ಬಿಡುಗಡೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.ಜಿಲ್ಲೆಯ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ೨೦ಕ್ಕೂ ಹೆಚ್ಚು ಸಭೆಗಳನ್ನು ನಡೆಸಲಾಗಿದ್ದು, ಇದರಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಸಹ ಪಾಲ್ಗೊಂಡು ಅಗತ್ಯ ಸಲಹೆ ನೀಡಿದ್ದಾರೆ. ಕೇಂದ್ರ ಸರ್ಕಾರವೂ ಮುಳುಗಡೆ ಸಂತ್ರಸ್ತರ ಸಮಸ್ಯೆ ಬಗೆಹರಿಸಲು ಪೂರಕವಾಗಿ ಸ್ಪಂದಿಸುತ್ತಿದೆ ಎಂದರು.

ಜಿಲ್ಲಾ, ತಾಲೂಕು ಪಂಚಾಯ್ತಿ ಹಾಗೂ ಗ್ರಾಮ ಪಂಚಾಯ್ತಿ ಚುನಾವಣೆ ಅತಿ ಶೀಘ್ರದಲ್ಲಿ ನಡೆಸಲು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಕಾರ್ಯಕರ್ತರ ಕೈಯಲ್ಲಿ ಅಧಿಕಾರ ನೀಡಿದರೆ ಅಭಿವೃದ್ಧಿ ಕೆಲಸಗಳಿಗೆ ಇನ್ನಷ್ಟು ವೇಗ ಸಿಗುತ್ತದೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರನ್ನು ಗೆಲ್ಲಿಸಲು ವಿಶೇಷ ಪ್ರಯತ್ನ ನಡೆಸಲಾಗುತ್ತದೆ ಎಂದು ಹೇಳಿದರು. ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಬಿಜೆಪಿಯಲ್ಲಿ ಹಿಂದುತ್ವದ ಜಪ ಮಾಡುವ ಎಲ್ಲ ನಾಯಕರನ್ನೂ ಮೂಲೆಗುಂಪು ಮಾಡಲಾಗುತ್ತಿದೆ. ಯತ್ನಾಳ್ ಅವರು ಹಿಂದುತ್ವ ಹಿಂದುತ್ವ ಎಂದು ಜಪ ಮಾಡುತ್ತಿದ್ದರು. ಅವರನ್ನು ಉಚ್ಛಾಟಿಸಿದ್ದಾರೆ. ಬಜೆಟ್ನಲ್ಲಿ ಶೇ.೧ಕ್ಕಿಂತ ಕಡಿಮೆ ಅನುದಾನ ಅಲ್ಪಸಂಖ್ಯಾತರಿಗೆ ಘೋಷಣೆ ಮಾಡಿದರೆ ನಮ್ಮದು ಹಲಾಲ್ ಬಜೆಟ್ ಎನ್ನುವ ಬಿಜೆಪಿಯವರು ಪ್ರಧಾನಿ ನರೇಂದ್ರ ಮೋದಿಯವರು ಅಲ್ಪಸಂಖ್ಯಾತರಿಗೆ ರಂಜಾನ್ ಕಿಟ್ ಕೊಟ್ಟರೆ ಮೌನವಾಗಿದ್ದು ಯಾಕೆ ಎಂದು ಪ್ರಶ್ನಿಸಿದರು.

ಬಿಜೆಪಿಯವರು ಹಿಂದುತ್ವ ಹಿಂದುತ್ವ ಎಂದು ೬೬ ಸ್ಥಾನಕ್ಕೆ ಬಂದಿದ್ದಾರೆ. ಇದನ್ನೆ ಮುಂದುವರೆಸಿಕೊಂಡು ಬಂದರೆ ಮುಂದಿನ ಚುನಾವಣೆಯಲ್ಲಿ ೪೪ ಸ್ಥಾನಕ್ಕೆ ಇಳಿಯುತ್ತಾರೆ ಎಂದು ಭವಿಷ್ಯ ನುಡಿದರು.ಕ್ಷೇತ್ರ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ನಡೆದಿದೆ. ಹಿಂದಿನ ಶಾಸಕ ಹಾಲಪ್ಪನವರು ಆರ್‌ಎಸ್‌ಎಸ್ ನವರು, ಮೇಲ್ದರ್ಜೆಯವರು ಇರುವ ಕಡೆಗಳಲ್ಲಿ ರಸ್ತೆ ಮಾಡಿದ್ದಾರೆಯೆ ಹೊರತು ಹಿಂದುಳಿದವರು ಇರುವ ಕಡೆ ಯಾವುದೇ ರಸ್ತೆ ಮಾಡಿಲ್ಲ. ೧೫೦ ಮೀಟರ್ ಉದ್ದದ ೮೦೦ ರಸ್ತೆ ಮಾಡಿ ಅದನ್ನೆ ಅಭಿವೃದ್ಧಿ ಎನ್ನುತ್ತಿದ್ದಾರೆ. ಮುಂದಿನ ಮೂರು ವರ್ಷದಲ್ಲಿ ದುಪ್ಪಟ್ಟು ಅಭಿವೃದ್ಧಿ ಮಾಡಿ ತೋರಿಸುವುದಾಗಿ ಹೇಳಿದರು.ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಪಕ್ಷದ ತಾ.ಅಧ್ಯಕ್ಷ ಕಲಸೆ ಚಂದ್ರಪ್ಪ, ಸುಧೀರ್ ಕುಮಾರ್, ಬಿ.ಆರ್.ಜಯಂತ್, ಕಲಗೋಡು ರತ್ನಾಕರ್, ಎಲ್.ಚಂದ್ರಪ್ಪ, ಸುರೇಶಬಾಬು, ಸದ್ದಾಂ, ಅನಿತಾ ಕುಮಾರಿ, ಪ್ರಭಾವತಿ, ಉಷಾ ಎನ್. ಇನ್ನಿತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು