ಇಬ್ಬರು ಪಕ್ಷೇತರರು, ಇತರರಿಂದ ಅಧಿಕಾರಕ್ಕೆ ಏರಲು ಬಿಜೆಪಿ ವ್ಯೂಹ । ನಗರಸಭೆ ಗಾದಿಗೆ ಸದಸ್ಯರಿಗೆ ವಿಪ್ ನೀಡಲು ಬಿಜೆಪಿ ಚಿಂತನೆ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲನಗರಸಭೆಯಲ್ಲಿ ಅಧಿಕಾರ ಹಿಡಿಯಲು ಕಾಂಗ್ರೆಸ್ ತಂತ್ರಕ್ಕೆ ಬಿಜೆಪಿಯು ಸಹ ಪ್ರತಿತಂತ್ರ ಅನುಸರಿಸುತ್ತಿರುವ ಘಟನೆ ಬೆಳಕಿಗೆ ಬಂದಿದೆ .
31 ಸದಸ್ಯ ಬಲ ಹೊಂದಿರುವ ನಗರಸಭೆಯಲ್ಲಿ 13 ಬಿಜೆಪಿ, 12 ಕಾಂಗ್ರೆಸ್, 4ಪಕ್ಷೇತರರು, 2 ಬಿಎಸ್ಪಿ ಗೆಲುವು ಸಾಧಿಸಿದೆ. ಕಾಂಗ್ರೆಸ್ 4 ಮಂದಿ ಪಕ್ಷೇತರರು, ಬಿಎಸ್ಪಿ, ಸಂಸದರು, ಶಾಸಕರ ಮತ ಸೇರಿ ಅಧಿಕಾರಕ್ಕೆರಲು ಬೇಕಾಗುವ ಸಂಖ್ಯಾಬಲಕ್ಕಿಂತ (17) ಹೆಚ್ಚಿನ 20 ಸಂಖ್ಯಾಬಲ ದೊರಕಲಿದೆ. ಹಾಗಾಗಿ ಅಧಿಕಾರಕ್ಕೆರುವ ವಿಶ್ವಾಸ ಕಾಂಗ್ರೆಸ್ ಪಾಳಯದಲ್ಲಿದೆ. ಜತೆಗೆ ಬಿಜೆಪಿಯಲ್ಲಿ ನಾನಾ ಕಾರಣಗಳಿಗಾಗಿ ಮುನಿಸಿಕೊಂಡಿರುವ 4 ಮಂದಿಯನ್ನು ಕಾಂಗ್ರೆಸ್ ತನ್ನತ್ತ ಸೆಳೆದುಕೊಂಡಿರುವುದು ನಾನಾ ಚರ್ಚೆಗೂ ಗ್ರಾಸವಾಗಿದೆ.13 ಸಂಖ್ಯಾ ಬಲಹೊಂದಿರುವ ಬಿಜೆಪಿ ಸಹ ಪಕ್ಷೇತರರಿಬ್ಬರು ಹಾಗೂ ಬಿಎಸ್ಪಿಯ ಇಬ್ಬರನ್ನು ಸೆಳೆದು ಮ್ಯಾಜಿಕ್ ಸಂಖ್ಯೆ 17 ತಲುಪಿ ಅಧಿಕಾರಕ್ಕೆರಲು ತಂತ್ರಗಾರಿಕೆ ಆರಂಭಿಸಿದೆ. ಬಿಎಸ್ಪಿಯ ಇಬ್ಬರು ಸದಸ್ಯರು ಕಾಂಗ್ರೆಸ್ ಸಖ್ಯದಲ್ಲಿದ್ದು ಬಿಜೆಪಿಯತ್ತ ಮುಖಮಾಡುತ್ತಾರಾ ಎಂದು ಕಾದು ನೋಡಬೇಕಿದೆ.
4 ಮಂದಿ ಬಿಜೆಪಿ ಸದಸ್ಯರು ಮುನಿಸಿಕೊಂಡಿದ್ದು ಅವರನ್ನು ಸಹ ವರಿಷ್ಠರು ಭೇಟಿಯಾಗಿ ಚರ್ಚಿಸಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿರುವ 4 ಮಂದಿ ಬಿಜೆಪಿ ಸದಸ್ಯರು ಸಹ ಪಕ್ಷ ಸೂಚಿಸುವ ಅಭ್ಯರ್ಥಿಗೆ ಮತ ಹಾಕುವುದಾಗಿ ಹೇಳಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆ ಕಾಂಗ್ರೆಸ್ ತಂತ್ರಕ್ಕೆ ಬಿಜೆಪಿ ಸೆ.5ರ ಚುನಾವಣೆಯಲ್ಲಿ ವಿಪ್ ನೀಡುವ ಮೂಲಕ ಅಧಿಕಾರಕ್ಕೇರಲು ಸರ್ಕಸ್ ಮಾಡುತ್ತಿದ್ದಾರೆ ಎನ್ನಲಾಗಿದೆ.ಇಬ್ಬರು ಕಾಂಗ್ರೆಸ್ ಸದಸ್ಯರನ್ನು ಸೆ.5ರ ಚುನಾವಣೆ ವೇಳೆ ಗೈರು ಹಾಜರಾಗುವಂತೆ ತಂತ್ರ ಪ್ರಯೋಗಿಸಿ ಬಿಜೆಪಿಯು ಅಧಿಕಾರಕ್ಕೇರುವ ತಂತ್ರ ಪ್ರಯೋಗಿಸಿದೆ ಎಂದು ಹೇಳಲಾಗಿದೆ. ನಾಗಸುಂದ್ರಮ್ಮ, ಜಗದೀಶ್ ಬಿಜೆಪಿಯಲ್ಲಿ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿ ಎನ್ನಲಾಗಿದೆ. ಅದೇ ರೀತಿ ಕಾಂಗ್ರೆಸ್‌ನಿಂದ ರೇಖಾ ರಮೇಶ್, ಪುಷ್ಪಲತಾ ಶಾಂತರಾಜು ಇಬ್ಬರ ನಡುವೆ ತೀವ್ರ ಪೈಪೋಟಿ ಇದ್ದು ಇಲ್ಲಿನ (ಕಾಂಗ್ರೆಸ್ ಪಾಳಯದ) ಭಿನ್ನಮತ ಪ್ಲಸ್ ಮಾಡಿಕೊಳ್ಳಲು ಬಿಜೆಪಿ ತಂತ್ರಗಾರಿಕೆ ಹಣೆದಿದೆ ಎನ್ನಲಾಗಿದೆ.
ಒಗ್ಗಟ್ಟು ಮೂಡಿಸಲು ಕಾಂಗ್ರೆಸ್ ಸಭೆಕಾಂಗ್ರೆಸ್ನಲ್ಲಿ ಒಡಕುಂಟಾದರೆ ಇದರ ಲಾಭ ಪಡೆಯಲು ಬಿಜೆಪಿ ತಂತ್ರಗಾರಿಕೆ ಹಣೆದಿದೆ ಎನ್ನಲಾಗಿದೆ. ಆದ್ದರಿಂದ ಶಾಸಕ ಎ.ಆರ್.ಕೖಷ್ಣಮೂರ್ತಿ, ಉಗ್ರಾಣ ನಿಗಮದ ಅಧ್ಯಕ್ಷ ಎಸ್ ಜಯಣ್ಣ, ಮಾಜಿ ಶಾಸಕ ನಂಜುಂಡಸ್ವಾಮಿ ಸೇರಿದಂತೆ ವರಿಷ್ಠರು ಕಾಂಗ್ರೆಸ್ ಪಕ್ಷದಲ್ಲಿ ಒಗ್ಗಟ್ಟು ಮೂಡಿಸುವ ಸಲುವಾಗಿ ಸಭೆ ನಡೆಸಿದ್ದು ಒಗ್ಗಟ್ಟು ಕಾಯ್ದುಕೊಳ್ಳುವಂತೆ ಸಂದೇಶ ರವಾನಿಸಿದ್ದಾರೆ. ಪಕ್ಷ ಸೂಚಿಸುವ ಅಭ್ಯರ್ಥಿಗೆ ಮತ ನೀಡಲು ಸೂಚಿಸಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಪಾಳಯದಲ್ಲಿ ಸಾಕಷ್ಟು ಗೊಂದಲನಗರಸಭೆ ಅದ್ಯಕ್ಷ ಸ್ಥಾನದ ವಿಚಾರದಲ್ಲಿ ಸಾಕಷ್ಟು ಗೊಂದಲಗಳು ಸದಸ್ಯರಲ್ಲಿ ಹುಟ್ಟುಕೊಂಡಿವೆ. ಯಾರನ್ನು ಅಧ್ಯಕ್ಷರನ್ನಾಗಿಸಬೇಕು ಎಂಬ ಸದಸ್ಯರ ಮಾಹಿತಿ ಸಂಗ್ರಹ ವಿಚಾರದಲ್ಲಿ ಕೆಲ ಕಾಂಗ್ರೆಸ್ ಸದಸ್ಯರ ನಡುವೆ ಗೊಂದಲ ಉಂಟಾಗಿದೆ. ಯಾರ ಹೆಸರು ಹೇಳಿದರೂ ಸಹ ಒಬ್ಬರ ವೈರತ್ವ ಕಟ್ಟಿಕೊಳ್ಳಬೇಕಾಗುತ್ತದೆ ಎಂದು ತಮ್ಮ ಆಪ್ತರೊಡನೆ ಸದಸ್ಯರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಉಳಿದಂತೆ ಇನ್ನು ಕೆಲ ಕಾಂಗ್ರೆಸ್ ಸದಸ್ಯರು, ನಾವು ಯಾರ ಹೆಸರನ್ನು ಸೂಚಿಸುವುದೂ ಬೇಡ, ವರಿಷ್ಠರು ಯಾರನ್ನಾದರೂ ಸೂಚಿಸಲಿ, ನಮಗೆ ಈ ಗೊಡವೆಯೇ ಬೇಡ ಎನ್ನುತ್ತಿದ್ದಾರೆ.
ನಾನು ಯಾರಿಗೂ ಭರವಸೆ ನೀಡಿಲ್ಲ: ಶಾಸಕ:ನಾನು ನಗರಸಭೆ ಅದ್ಯಕ್ಷ ವಿಚಾರದಲ್ಲಿ ಯಾರಿಗೂ ಭರವಸೆ ನೀಡಿಲ್ಲ, ಗೊಂದಲ ಸೖಷ್ಟಿ ಹಿನ್ನೆಲೆ ಯಾರು ಅಧ್ಯಕ್ಷರಾಗಬೇಕು ಎಂಬುದನ್ನು ಜಿಲ್ಲೆಗೆ ಉಸ್ತುವಾರಿಯಾಗಿ ನೇಮಕಗೊಂಡ ಸುದರ್ಶನ್ ಅವರ ತೀರ್ಮಾನಕ್ಕೆ ಬಿಡಲಾಗುವುದು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.
ನಗರದಲ್ಲಿ ಮಾತನಾಡಿ, ಸೆ.4 ರಂದು ಜಿಲ್ಲಾ ಉಸ್ತುವಾರಿಗಳು ಆಗಮಿಸಿ ಎಲ್ಲಾ ಸದಸ್ಯರ ಅಭಿಪ್ರಾಯ ಪಡೆದು ಯಾರು ಅಧ್ಯಕ್ಷರಾಗಬೇಕು ಎಂಬುದನ್ನು ನಿರ್ಣಯಿಸಲಾಗುವುದು, ಸದಸ್ಯರ ಅಭಿಪ್ರಾಯವೇ ಕೊನೆಗೆ ಅಂತಿಮವಾಗುವ ಸಾಧ್ಯತೆಯೂ ಇದ್ದು ಜಿಲ್ಲಾ ಉಸ್ತುವಾರಿಗಳೇ ಸೆ.4ರಂದು ಯಾರು ಅಭ್ಯರ್ಥಿ ಎಂಬುದನ್ನು ಸ್ಪಷ್ಪಪಡಿಸುವರು, ಇಲ್ಲಿ ನನ್ನ ಪಾತ್ರವೇನೂ ಇಲ್ಲ, ಒಟ್ಟಾರೆ ಕಾಂಗ್ರೆಸ್ ಪಕ್ಷ ನಗರಸಭೆ ಚುಕ್ಕಾಣಿ ಹಿಡಿಯುದು ಖಚಿತ ಎಂದರು.ನಾನು ಬಿಜೆಪಿಗೆ ನಿಷ್ಠನಾಗಿದ್ದು, ಬಿಜೆಪಿ ಪಕ್ಷ ಯಾರನ್ನು ಅಭ್ಯರ್ಥಿ ಎಂದು ಸೂಚಿಸಿದರೂ ಸಹ ನಾವು ಮತ ಹಾಕಲು ಸಿದ್ಧರಿದ್ದೇವೆ, ಬಿಜೆಪಿ ಕರೆದ ಸಭೆಗೆ ನಾವು ಹೋಗಲು ಸಿದ್ಧರಿದ್ದೇವೆ.
ಜಿ.ಪಿ,ಶಿವಕುಮಾರ್, ಬಿಜೆಪಿ ನಗರಸಭಾ ಸದಸ್ಯ.ನಾವು ಶತಾಯ ಗತಾಯ ತಂತ್ರಗಾರಿಕೆ ಪ್ರಯೋಗಿಸಿ ಕೊಳ್ಳೇಗಾಲ ನಗರಸಭೆಯಲ್ಲಿ ಅಧಿಕಾರಕ್ಕೇರಲು ಕಾರ್ಯಪ್ರವೖತ್ತರಾಗಿದ್ದೇವೆ. ಸೆ.5ರಂದು ಅಧಿಕಾರ ಹಿಡಿಯುವ ವಿಶ್ವಾಸ ನಮಗಿದೆ. ಪಕ್ಷದಿಂದ ಅಂತರ ಕಾಯ್ದುಕೊಂಡ ಸದಸ್ಯರ ಜತೆ ವರಿಷ್ಠರು ಚರ್ಚಿಸಿದ್ದು ಅಧಿಕಾರ ಹಿಡಿಯುವ ವಿಶ್ವಾಸ ನನಗಿದೆ.
ಎನ್ ಮಹೇಶ್, ಮಾಜಿ ಸಚಿವ, ಬಿಜೆಪಿ ರಾಜ್ಯ ಉಪಾಧ್ಯಕ್ಷ.