ಕಳೆದ 10 ವರ್ಷದಲ್ಲಿ ದೇಶದ ದೊಡ್ಡ ಉದ್ಯಮಿಗಳು ಮತ್ತಷ್ಟು ಶ್ರೀಮಂತರಾದಂತೆಲ್ಲಾ, ಭರ್ಜರಿ ಚಂದಾ, ದೇಣಿಗೆ ಸಂಗ್ರಹಿಸುತ್ತಾ ಬಿಜೆಪಿಯೂ ವಿಶ್ವದ ಅತಿ ದೊಡ್ಡ ಶ್ರೀಮಂತ ಪಕ್ಷವಾಗಿದೆ ಎಂದು ಪ್ರಿಯಾಂಕ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ದಾವಣಗೆರೆಯಲ್ಲಿ ವಾಗ್ಧಾಳಿ ನಡೆಸಿದ್ದಾರೆ.
ದಾವಣಗೆರೆ : ಕಳೆದ 10 ವರ್ಷದಲ್ಲಿ ದೇಶದ ದೊಡ್ಡ ಉದ್ಯಮಿಗಳು ಮತ್ತಷ್ಟು ಶ್ರೀಮಂತರಾದಂತೆಲ್ಲಾ, ಭರ್ಜರಿ ಚಂದಾ, ದೇಣಿಗೆ ಸಂಗ್ರಹಿಸುತ್ತಾ ಬಿಜೆಪಿಯೂ ವಿಶ್ವದ ಅತಿ ದೊಡ್ಡ ಶ್ರೀಮಂತ ಪಕ್ಷವಾಗಿದೆ. ಕಾಂಗ್ರೆಸ್ ಹಣವನ್ನು ಖರ್ಚನ್ನೇ ಮಾಡದಂತೆ ಖಾತೆಯನ್ನೇ ಬಂದ್ ಮಾಡಿಸಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.
ನಗರದ ಹೈಸ್ಕೂಲ್ ಮೈದಾನದಲ್ಲಿ ಶನಿವಾರ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, ಕೇವಲ ಹತ್ತೇ ವರ್ಷದಲ್ಲಿ ಬಿಜೆಪಿ ಶ್ರೀಮಂತ ರಾಜಕೀಯ ಪಕ್ಷವಾಗಿದೆ. ಬರೀ ಭಾರತಕ್ಕಷ್ಟೇ ಶ್ರೀಮಂತ ಪಕ್ಷವಾಗಿರದೇ, ವಿಶ್ವದಲ್ಲೇ ಅತ್ಯಂತ ಶ್ರೀಮಂತ ರಾಜಕೀಯ ಪಕ್ಷವಾಗಿ ಬಿಜೆಪಿ ಆಗಿದೆ. ಬಿಜೆಪಿ 7 ಸಾವಿರ ಕೋಟಿ ರು.ಗಳನ್ನು ಖರ್ಚು ಮಾಡಿದೆ ಎಂದರು.
ದೇಶದ ದೊಡ್ಡ ಉದ್ಯಮಿಗಳು, ಬಂಡವಾಳಶಾಹಿಗಳ ₹17 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ ಕೇಂದ್ರ ಸರ್ಕಾರವು ಗುಜರಾತ್‌ನಲ್ಲಿ ನಿರ್ಮಾಣ ಹಂತದ ಹೊಸ ಸೇತುವೆ ಕುಸಿತಕ್ಕೆ ಕಾರಣವಾಗಿದ್ದ ಗುತ್ತಿಗೆದಾರರಿಂದಲೇ ದೇಣಿಗೆ ಪಡೆದ ಪಕ್ಷ ಬಿಜೆಪಿ. ಕೋವಿಡ್ ಲಸಿಕೆ ಸಿದ್ಧಪಡಿಸಿದ ಕಂಪನಿಯಿಂದ ಹಣ ಪಡೆದಿದ್ದಾರೆ. ಎಲೆಕ್ಟ್ರೋಲ್ ಬಾಂಡ್ ಹೆಸರಿನಲ್ಲಿ ಉದ್ಯಮಿಗಳು, ಕಂಪನಿಗಳಿಂದ ದೇಣಿಗೆ ಮೇಲೆ ದೇಣಿಗೆಯನ್ನು ಪಡೆದು, ಬಿಜೆಪಿ ಶ್ರೀಮಂತ ಪಕ್ಷವಾಗಿದೆ ಎಂದು ಆರೋಪಿಸಿದರು.
ವಿಶ್ವದ ಶ್ರೀಮಂತ ಪಕ್ಷವಾದ ಬಿಜೆಪಿಗೆ ಬಡವರು, ರೈತರು, ಮಹಿಳೆಯರ ಬಗ್ಗೆ ಕನಿಷ್ಠ ಕಾಳಜಿಯೂ ಇಲ್ಲ. ಒಂದು ಕಡೆ ಅಷ್ಟೊಂದು ಹಣ ಮಾಡಿದ್ದರೂ, ಬಡವರು, ಮಹಿಳೆಯರು, ರೈತರ ಕೈಯಲ್ಲಿ ಹಣ ಇಲ್ಲ. ರೈತರಿಗೆ ತಮ್ಮ ಮಕ್ಕಳ ಹಸಿವು ನೀಗಿಸುವ ಶಕ್ತಿಯೂ ಇಲ್ಲದಂತಾಗಿದೆ. ಕೇವಲ ₹10 ಸಾವಿರ ಸಾಲ ತೀರಿಸಲಾಗದೇ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ರೈತರ ಸಾಲ ಮನ್ನಾ ಮಾಡಲು ಆಸಕ್ತಿ ಇಲ್ಲದ ಸರ್ಕಾರ ಮಾತ್ರ ದೇಶದ ದೊಡ್ಡ ದೊಡ್ಡ ಉದ್ಯಮಿಗಳು, ಬಂಡವಾಳಶಾಹಿಗಳು, ತಮ್ಮ ಸ್ನೇಹಿತ ಉದ್ಯಮಿಗಳ ಸಾಲ ಮನ್ನಾ ಮಾಡುತ್ತಿದೆ ಎಂದು ಆಕ್ರೋಶ ಹೊರಹಾಕಿದರು.
ಪ್ರಧಾನಿ ನರೇಂದ್ರ ಮೋದಿ ಗಮನ ಯಾವ ಕಡೆಗಿದೆಯೆಂಬುದನ್ನು ಜನ ಗಂಭೀರವಾಗಿ ಆಲೋಚಿಸಬೇಕು. ಟಿವಿಗಳಲ್ಲಿ, ದೊಡ್ಡ ದೊಡ್ಡ ವೇದಿಕೆಗಳಲ್ಲಿ ನರೇಂದ್ರ ಮೋದಿ ಭವ್ಯ ಕಾರ್ಯಕ್ರಮ ಮಾಡುವುದನ್ನಷ್ಟೇ ಕಾಣುತ್ತೇವೆ. ಆದರೆ, ರೈತರು, ಬಡವರ ಬಳಿ ಹೋಗಿ, ಕಷ್ಟ ಆಲಿಸುವುದಂತೂ ಕಾಣುವುದೇ ಇಲ್ಲ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಬಡವರ ಕಲ್ಯಾಣದಂತಹ ಒಳ್ಳೆಯ ಮಾತುಗಳನ್ನಾಡುವ ಮೋದಿ ಬರೀ ತಮ್ಮ ಮಿತ್ರರಾದ ದೊಡ್ಡ ದೊಡ್ಡ ಆರೇಳು ಜನ ಉದ್ಯಮಿಗಳಿಗೆ ಸರ್ಕಾರಿ ಸ್ವಾಮ್ಯದ ಸಂಸ್ಥೆ, ಕಂಪನಿ, ಕೈಗಾರಿಕೆಗಳು, ನಿಲ್ದಾಣಗಳನ್ನು ಹಂಚಿಕೆ ಮಾಡುತ್ತಾರೆ ಎಂದು ಅವರು ದೂರಿದರು.
ಕಲ್ಲಿದ್ದಲು, ಇಂಧನ, ಬಂದರು, ವಿಮಾನ ನಿಲ್ದಾಣ, ರೈಲ್ವೇ ನಿಲ್ದಾಣಗಳೆಲ್ಲವನ್ನೂ ತಮ್ಮ ಮಿತ್ರರಾದ ದೊಡ್ಡ ಉದ್ಯಮಿಗಳಿಗೆ ನರೇಂದ್ರ ಮೋದಿ ಹಂಚಿರುವುದೇ ಸಾಕ್ಷಿ. 6 ದಶಕದಲ್ಲಿ ಕಾಂಗ್ರೆಸ್ ಏನು ಮಾಡಿದೆಯೆಂದು ಪ್ರಶ್ನಿಸುವ ನರೇಂದ್ರ ಮೋದಿ ಈಗ ಏನು ತಮ್ಮ ಸ್ನೇಹಿತ ಉದ್ಯಮಿಗಳಿಗೆ ಹಂಚುತ್ತಿರುವ ಖಾಸಗಿ ವಲಯ, ಸಾರ್ವಜನಿಕ ವಲಯದ ಕೈಗಾರಿಕೆ, ಸಂಸ್ಥೆ, ಉದ್ಯಮಗಳನ್ನು ಕಾಂಗ್ರೆಸ್ ಪಕ್ಷವು ಜನರ ಶ್ರಮದಿಂದ ಕಟ್ಟಿತ್ತು. ಜನರ ಜೀವನಕ್ಕೆ ಭದ್ರತೆ, ಉದ್ಯೋಗ ಕಲ್ಪಿಸಿತ್ತೋ. ಅದನ್ನೇ ಉದ್ಯಮಪತಿ ಸ್ನೇಹಿತರಿಗೆ ಕೊಡುತ್ತಿರುವುದನ್ನು ಮರೆಯಬಾರದು ಎಂದು ಮಾತಿನ ಚಾಟಿ ಬೀಸಿದರು.
ಸಾರ್ವಜನಿಕ ವಲಯದ ಸಂಸ್ಥೆಗಳು ಉದ್ಯಮಪತಿಗಳ ಕೈಗೆ ಹೋದರೆ ಅದೆಲ್ಲವೂ ಖಾಸಗೀಕರಣವಾಗಿ ಮಿಸಲಾತಿಯೂ ಹೋಗುತ್ತದೆ. ಸಾರ್ವಜನಿಕ ವಲಯದ ಸಂಸ್ಥೆಗಳನ್ನು ತಮ್ಮ ಮಿತ್ರರಾದ ಉದ್ಯಮಿಗಳಿಗೆ ನೀಡುತ್ತಿರುವುದು ಬಹುದೊಡ್ಡ ಭ್ರಷ್ಟಾಚಾರವಾಗಿದೆ. ಜನರ ಸಂಪತ್ತು ಜನರ ಕಲ್ಯಾಣಕ್ಕೆ ಬಳಕೆಯಾಗಬೇಕಿತ್ತು. ಸರ್ಕಾರದ ಉದ್ದೇಶ ಸರಿಯಾಗಿದ್ದಿದ್ದರೆ ಈಗ ರಾಜ್ಯದಲ್ಲಿ ಆಗುತ್ತಿರುವಂತೆ ಕೇಂದ್ರ ಸರ್ಕಾರವೂ ಜನಪರ ಕಾರ್ಯಕ್ರಮ ತರಬೇಕಿತ್ತು. 10 ವರ್ಷ ಆಡಳಿತದ ನಂತರ ಯಾರನ್ನೇ ಕೇಳಿದರೂ ಕಷ್ಟ, ಸಮಸ್ಯೆಗಳು ಹೆಚ್ಚಾಗಿವೆ ಎಂಬ ಒಂದೇ ಉತ್ತರ ಬರುತ್ತದೆ ಎಂದು ಮೋದಿ ಸರ್ಕಾರದ ಕಾರ್ಯ ವೈಖರಿ ವಿರುದ್ಧ ಪ್ರಿಯಾಂಕ ಗಾಂಧಿ ಅಸಮಾಧಾನ ಹೊರ ಹಾಕಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜಿವಾಲಾ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪ, ಡಿ.ಜಿ.ಶಾಂತನಗೌಡ, ಶಿವಗಂಗಾ ವಿ.ಬಸವರಾಜ, ಕೆ.ಎಸ್.ಬಸವಂತಪ್ಪ, ಬಿ.ದೇವೇಂದ್ರಪ್ಪ, ಎಂ.ಪಿ.ಲತಾ ಮಲ್ಲಿಕಾರ್ಜುನ, ಮಾಜಿ ಸಚಿವ ಎಚ್.ಆಂಜನೇಯ, ಪಿ.ಟಿ.ಪರಮೇಶ್ವರ ನಾಯ್ಕ, ಕೆ.ಸಿ.ಕೊಂಡಯ್ಯ, ವಡ್ನಾಳ್ ರಾಜಣ್ಣ, ಸೈಯದ್ ಸೈಫುಲ್ಲಾ, ಡಿ.ಬಸವರಾಜ, ಎಚ್.ಎಸ್.ನಾಗರಾಜ, ನಲಪ್ಪಾಡ್ ಇತರರು ಇದ್ದರು.