ವ್ಯವಸ್ಥೆ ದುರುಪಯೋಗಪಡಿಸಿ ಚುನಾವಣೆ ಗೆಲ್ಲುತ್ತಿದೆ ಬಿಜೆಪಿ: ಸಚಿವ ಸಂತೋಷ ಲಾಡ್‌

KannadaprabhaNewsNetwork | Published : Feb 6, 2025 12:15 AM

ಸಾರಾಂಶ

ಇಡಿ ಹಾಗೂ ಸಿಬಿಐ ಅಂತಹ ಸಂಸ್ಥೆಗಳನ್ನು ಬಳಸಿಕೊಂಡು ಚುನಾವಣೆ ಕೆಲಸ ಸಾಧಿಸುತ್ತಿದೆ. ಮತದಾರರ ಪಟ್ಟಿಯಲ್ಲಿ ಬದಲಾವಣೆ ಮಾಡಿ ಗೆಲ್ಲುತ್ತಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ರೀತಿಯ ಚುನಾವಣೆ ಬಹಳ ದಿನಗಳ ಕಾಲ ನಡೆಯುವುದಿಲ್ಲ ಎಂದು ಸಚಿವ ಸಂತೋಷ ಲಾಡ್‌ ಹೇಳಿದರು.

ಧಾರವಾಡ:

ಲೋಕಸಭೆ ಹಾಗೂ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಉತ್ತಮ ಆಡಳಿತದ ಪ್ರದರ್ಶನದಿಂದ ಗೆಲ್ಲುತ್ತಿಲ್ಲ. ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡು ಗೆಲ್ಲುತ್ತಿದೆ. ಇಡಿ ಹಾಗೂ ಸಿಬಿಐ ಅಂತಹ ಸಂಸ್ಥೆಗಳನ್ನು ಬಳಸಿಕೊಂಡು ಕೆಲಸ ಸಾಧಿಸುತ್ತಿದೆ. ಮತದಾರರ ಪಟ್ಟಿಯಲ್ಲಿ ಬದಲಾವಣೆ ಮಾಡಿ ಗೆಲ್ಲುತ್ತಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ರೀತಿಯ ಚುನಾವಣೆ ಬಹಳ ದಿನಗಳ ಕಾಲ ನಡೆಯುವುದಿಲ್ಲ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್‌ ಹೇಳಿದರು.

ದೆಹಲಿ ವಿಧಾನಸಭಾ ಚುನಾವಣೆ ವಿಚಾರವಾಗಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ಬಿಜೆಪಿಗಿಂತ ನಾವು ಹೆಚ್ಚು ಸ್ಥಾನ ಪಡೆಯುವುದು ವಾಸ್ತವ. ಕಾಂಗ್ರೆಸ್ಸಿಗೆ 4-5 ಸ್ಥಾನ ಬರುತ್ತವೆ ಎಂದಿದ್ದೇನೆ. ಅಂಕಿ-ಅಂಶಗಳ ಲೆಕ್ಕಾಚಾರದಲ್ಲಿ ಹೇಳಿದ್ದು, ರಾಹುಲ್ ಗಾಂಧಿಯವರ ತತ್ವ ಸಿದ್ಧಾಂತವನ್ನು ಜನರಿಗೆ ಮುಟ್ಟಿಸಬೇಕಿದೆ. ರಾಹುಲ್ ಗಾಂಧಿ ಪಾದಯಾತ್ರೆಯಾದ ಬಳಿಕ ಬಿಜೆಪಿಯವರ ಚಾರ್ ಸೌ ಪಾರ್ 240ಕ್ಕೆ ಬಂದು ನಿಂತಿದ್ದಾರೆ. ರಾಹುಲ್ ಅವರ ಪರಿಣಾಮ ಏನಿದೆ ಎನ್ನುವುದಕ್ಕೆ ಇದು ಸಾಕ್ಷಿ. ಖಂಡಿತವಾಗಿ ಬರುವ ದಿನಗಳಲ್ಲಿ ಹೆಚ್ಚು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ದೆಹಲಿ ಚುನಾವಣೆ ನಂತರ ಎಐಸಿಸಿ ಅಧ್ಯಕ್ಷ ಸ್ಥಾನ ಬದಲಾಗುತ್ತದೆ ಎಂಬ ಪ್ರಶ್ನೆಗೆ, ಅಂತಹ ಯಾವುದೇ ವಿಚಾರ ನನ್ನ ಗಮನಕ್ಕಿಲ್ಲ. ಆದರೆ, ಬಿಜೆಪಿ ಕಾರ್ಯಕರ್ತರು ನಿತೀನ್‌ ಗಡ್ಕರಿ ಅವರನ್ನು ಮುಂಚೂಣಿಗೆ ತರುವಂತೆ ಹೇಳುತ್ತಿದ್ದಾರೆ. ನರೇಂದ್ರ ಮೋದಿಯಿಂದ ರೂಪಾಯಿ ಮೌಲ್ಯ ಕುಸಿಯುತ್ತಿದೆ ಎನ್ನುತ್ತಿದ್ದಾರೆ. ದೇಶಪ್ರೇಮಿ ಬಿಜೆಪಿಗರೇ ಈ ರೀತಿ ಹೇಳುತ್ತಿದ್ದಾರೆ. ಮೋದಿ ವಿಶ್ವಗುರು ಸ್ಥಾನದಿಂದ ಕುಸಿದು ಹೋಗಿದ್ದಾರೆ ಎಂದರು.

ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷರಿಗೆ ₹ 50 ಸಾವಿರ ನೀಡುತ್ತಿರುವ ವಿಚಾರವಾಗಿ ಎಚ್‌.ಡಿ. ರೇವಣ್ಣರ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಲಾಡ್‌, ಸರ್ಕಾರದ ತೆರಿಗೆ ಹಣದಿಂದಲೇ ಅವರಿಗೆ ಕೊಡಲಾಗುತ್ತಿದೆ. ರೇವಣ್ಣರು ಸೇರಿದಂತೆ ಜನಪ್ರತಿನಿಧಿಗಳಿಗೆ ತೆರಿಗೆ ಹಣದಿಂದ ನೀಡುತ್ತಿರುವ ರೀತಿಯಲ್ಲಿಯೇ ಸಮಿತಿ ಅಧ್ಯಕ್ಷರಿಗೂ ಕೊಡುತ್ತಿದ್ದೇವೆ ಎಂದರು.

Share this article