ಸೋಲಿನ ಭೀತಿಗೆ ಬಿಜೆಪಿಯಿಂದ ಸಮಾಜ ಒಡೆಯುವ ಕೆಲಸ

KannadaprabhaNewsNetwork |  
Published : May 01, 2024, 01:18 AM IST
ಅಅಅ | Kannada Prabha

ಸಾರಾಂಶ

ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೇ ಮಾಂಗಲ್ಯವನ್ನು ಕಿತ್ತು ಬೇರೆಯವರಿಗೆ ನೀಡಬೇಕಾಗುತ್ತದೆ ಎಂದು ಪ್ರಧಾನಿ ಕೀಳುಮಟ್ಟಕ್ಕಿಳಿದು ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಎಂದರೇ ನುಡಿದಂತೆ ನಡೆಯುವ ಪಕ್ಷ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ ಬಿಜೆಪಿ ವಿರುದ್ಧ ಕಿಡಿಕಾರಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೇ ಮಾಂಗಲ್ಯವನ್ನು ಕಿತ್ತು ಬೇರೆಯವರಿಗೆ ನೀಡಬೇಕಾಗುತ್ತದೆ ಎಂದು ಪ್ರಧಾನಿ ಕೀಳುಮಟ್ಟಕ್ಕಿಳಿದು ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಎಂದರೇ ನುಡಿದಂತೆ ನಡೆಯುವ ಪಕ್ಷ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ ಬಿಜೆಪಿ ವಿರುದ್ಧ ಕಿಡಿಕಾರಿದರು.

ಸವದತ್ತಿ ತಾಲೂಕಿನ ಇನಾಂಹೊಂಗಲದ ಸಿದ್ದಲಿಂಗೇಶ್ವರ ಪ್ರೌಢಶಾಲಾ ಮೈದಾನದಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದಿದೆ. 2014 ರಿಂದ ಕೇಂದ್ರದಲ್ಲಿ ಆಡಳಿತ ಹಿಡಿದಿರುವ ಬಿಜೆಪಿ ನಾಯಕರು, ಹಲವು ಭರವಸೆಗಳನ್ನು ನೀಡಿದ್ದರು. ಆದರೆ, ಒಂದೇ ಒಂದು ಭರವಸೆ ಈಡೇರಿಸಿಲ್ಲ ಎಂದು ದೂರಿದರು.2014ರಲ್ಲಿ ಚಿನ್ನದ ಬೆಲೆ ₹2700 ಇತ್ತು. 2024 ರಲ್ಲಿ ₹7 ಸಾವಿರ ಗಡಿ ದಾಟಿದೆ. ಅಗತ್ಯ‌‌ ವಸ್ತುಗಳ ಬೆಲೆ ಗಗನಕ್ಕೇರಿವೆ. ಜನ ಸಾಮಾನ್ಯರ ಬದುಕು ದುಸ್ತರವಾಗಿದೆ ಎಂದರು.

ಗೃಹಲಕ್ಷ್ಮಿ ಹಣ,‌ ಉಚಿತ ಬಸ್ ಪ್ರಯಾಸದಿಂದ ಮಹಿಳೆಯರು ಇಂದು ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ. ಕೇಂದ್ರ ಸರ್ಕಾರ ನಮ್ಮ ಪಾಲಿನ ಅಕ್ಕಿ ಕೊಡದಿದ್ದರೂ ಜನರಿಗೆ ನಾವು ಅದರ ಬದಲಿಗೆ ಹಣ ಕೊಡುತ್ತಿದ್ದೇವೆ. ನಮಗೆ ಅಕ್ಕಿ ಇಲ್ಲ‌ ಎಂದ ಕೇಂದ್ರ ಸರ್ಕಾರ, ಭಾರತ ರೈಸ್ ಹೆಸರಿನಲ್ಲಿ ಚುನಾವಣೆ ವೇಳೆ ₹29 ಗೆ ನೀಡುತ್ತಿದೆ. ಉಜ್ವಲ ಹೆಸರಿನಲ್ಲಿ ಗ್ಯಾಸ್ ಸಿಲಿಂಡರ್ ಕೊಟ್ಟು, ಬೆಲೆ ಜಾಸ್ತಿ ಮಾಡಲಾಯಿತು. ಇದೀಗ ಚುನಾವಣೆ ಬಂದ ಕಾರಣ ಸಿಲಿಂಡರ್ ಬೆಲೆ ಕಡಿಮೆ ಮಾಡಲಾಗಿದೆ ಎಂದು ಆರೋಪಿಸಿದರು.

ಬೆಳಗಾವಿ ಜಿಲ್ಲೆಯ ಯುವಕ, ಪ್ರೀತಿಯ ಮಂತ್ರಿಗಳ ಮಗ ಮೃಣಾಲ್‌ ಹೆಬ್ಬಾಳಕರ್ ಅವರನ್ನು ಬೆಂಬಲಿಸಿ, ಕಾಂಗ್ರೆಸ್ ಪಕ್ಷವನ್ನು, ರಾಜ್ಯ ಸರ್ಕಾರವನ್ನು ಬಲಪಡಿಸಬೇಕು ಎಂದು‌ ಮನವಿ ಮಾಡಿದರು.

ಸವದತ್ತಿ ಶಾಸಕ ವಿಶ್ವಾಸ್‌ ವೈದ್ಯ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳಕರ್ ಅವರನ್ನು ಬೆಂಬಲಿಸಿ ಈ‌ ಭಾಗದಲ್ಲಿ ಹೆಚ್ಚಿನ ಮತಗಳನ್ನು ನೀಡಬೇಕು. ಕ್ಷೇತ್ರದ ಸಮಸ್ಯೆ, ಸಾಮಾಜಿಕ ಸಮಸ್ಯೆಗಳನ್ನು ಅರಿತಿರುವ ವ್ಯಕ್ತಿಯಾಗಿದ್ದಾರೆ. 2014ರ ಚುನಾವಣೆಯಲ್ಲಿ ಪ್ರತಿಯೊಬ್ಬರ ಖಾತೆಗೆ ₹15 ಲಕ್ಷ ಹಾಕಲಾಗುವುದು, 2 ಕೋಟಿ‌‌ ಉದ್ಯೋಗ ನೀಡಲಾಗುವುದು ಎಂದು‌ ಹೇಳಿ ಜನರಿಗೆ ಮೋಸ ಮಾಡಿರುವ ಕೇಂದ್ರ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಕೋರಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಸಹಿವುಳ್ಳ ಗ್ಯಾರಂಟಿ ಕಾರ್ಡ್‌ಗಳನ್ನು ಹಂಚಿದ್ದೇವೆ. ವರ್ಷಕ್ಕೆ ಒಂದು‌ ಕುಟುಂಬಕ್ಕೆ ₹25 ಲಕ್ಷ ವಿಮೆ ನೀಡುವ ಯೋಜನೆ ಹೊಂದಿದ್ದೇವೆ. ಈ‌ ಗ್ರಾಮದಲ್ಲಿ ನನಗಿಂತ ಹೆಚ್ಚಿನ ಮತಗಳು ಕಾಂಗ್ರೆಸ್‌ಗೆ ಬೀಳಲಿವೆ ಎಂದರು.

ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮಾತನಾಡಿ, ಕಾಂಗ್ರೆಸ್ ಪಕ್ಷದ ರಾಜ್ಯ ಸರ್ಕಾರ ಉತ್ತಮವಾಗಿ ಕೆಲಸ ಮಾಡುತ್ತಿದೆ. ಬೆಳಗಾವಿ ಕ್ಷೇತ್ರದಲ್ಲಿ 20 ವರ್ಷಗಳ ನಂತರ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವ ಅವಕಾಶ ಸಿಕ್ಕಿದೆ. ಮೃಣಾಲ್‌ ಹೆಬ್ಬಾಳಕರ್ ಅವರನ್ನು ಆರಿಸಿ ಕಳುಹಿಸಿಕೊಡಬೇಕು ಎಂದು ವಿನಂತಿಸಿದರು.

ಇಂದಿರಾ ಗಾಂಧಿ ಇರುವಾಗ ಉಳುವವನೇ ಭೂಮಿಯ ಒಡೆಯ ಎಂದು ಘೋಷಿಸಿದರು. ಕಾಂಗ್ರೆಸ್ ಪಕ್ಷ ಬ್ಯಾಂಕ್‌ಗಳನ್ನು ರಾಷ್ಟ್ರೀಕರಣ ಮಾಡಿ, ಲೋನ್ ಮೇಳ ಮಾಡಿದರೇ, ಮೋದಿ ಸರ್ಕಾರ ಬ್ಯಾಂಕ್‌ಗಳನ್ನು ಖಾಸಗೀಕರಣ ಮಾಡುತ್ತಿದೆ. ಕಾಂಗ್ರೆಸ್ ಪಕ್ಷ ಮಾಡಿದ್ದ ದೇಶದ ಆಸ್ತಿಯನ್ನು ಬಿಜೆಪಿ ಮಾರಾಟ ಮಾಡುತ್ತಿದೆ ಎಂದು ಆರೋಪಿಸಿದರು.

ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ, ಪಕ್ಷ ಅಧಿಕಾರಕ್ಕೆ ಬಂದರೇ ರೈತರ ಬಾಳು ಹಸನಾಗುತ್ತದೆ. ಸಾಮಾಜಿಕ ಕಳಕಳಿ ಹೊಂದಿರುವ ನನ್ನ ಮಗ ನಿಮ್ಮ ಸೇವೆ ಮಾಡಲಿದ್ದಾನೆ ಎಂದು ಮನವಿ ಮಾಡಿದರು.

ಈ ವೇಳೆ ಬಸಯ್ಯ‌‌ ಹಿರೇಮಠ, ಸಂಗಪ್ಪ ಲಕ್ಕಣ್ಣವರ್, ಎಸ್.ಎಂ.ಫಕೀರಶೆಟ್ಟಿ, ರಾಮಣ್ಣ ತುರುಮರಿ, ಬಸಪ್ಪ ಅಳಗವಾಡಿ, ಕಿಟ್ಟು ಪಟ್ಟಣಶೆಟ್ಟಿ, ಬಸಪ್ಪ‌ ಕೊಪ್ಪದ್, ರಮೇಶ್ ಬ್ಯಾಡಸೂರ್ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.ಬಿಜೆಪಿ, ಜೆಡಿಎಸ್ ಪಕ್ಷದ ನಾಯಕರಿಗೆ ಈಗಾಗಲೇ ನಡುಕ ಉಂಟಾಗಿದೆ. ಸೋಲಿನ ಭೀತಿಯಿಂದ ಮೋದಿ ಅವರು ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಅನ್ಯ ಧರ್ಮದ ಬಗ್ಗೆ ಕೀಳು ಮಟ್ಟದ ಭಾಷಣ ಮಾಡಲಾಗುತ್ತಿದೆ.

-ಡಾ.ಎಂ.ಸಿ.ಸುಧಾಕರ, ಸಚಿವ.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...