ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಗೆಲುವಿಗೆ ಶ್ರಮಿಸಿ: ಕೆ.ಎಂ.ತಿಮ್ಮರಾಯಪ್ಪ

KannadaprabhaNewsNetwork | Published : Feb 26, 2024 1:32 AM

ಸಾರಾಂಶ

ಹಿರಿಯೂರು ನಗರದ ನೆಹರೂ ಮೈದಾನದಲ್ಲಿರುವ ರೋಟರಿ ಸಭಾಂಗಣದಲ್ಲಿ ನಡೆದ ಎಂಟು ವಿಧಾನ ಸಭಾ ಕ್ಷೇತ್ರಗಳ ಪದಾಧಿಕಾರಿಗಳ, ಕಾರ್ಯಕರ್ತರ ಸಭೆಯಲ್ಲಿ ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಲೋಕಸಭಾ ಚುನಾವಣೆ ಮೈತ್ರಿ ಅಭ್ಯರ್ಥಿ ಗೆಲುವಿಗೆ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಹಿರಿಯೂರು

ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ನಮ್ಮ ಪಕ್ಷ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಚುನಾವಣೆ ಉಸ್ತುವಾರಿ ಹಾಗೂ ಪಾವಗಡ ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಅಭಿಪ್ರಾಯಪಟ್ಟರು.

ನಗರದ ನೆಹರೂ ಮೈದಾನದಲ್ಲಿರುವ ರೋಟರಿ ಸಭಾಂಗಣದಲ್ಲಿ ಭಾನುವಾರ ನಡೆದ ಲೋಕಸಭಾ ಚುನಾವಣೆ ಪ್ರಯುಕ್ತ ಪಕ್ಷ ಸಂಘಟಿಸುವ ಕುರಿತು ಮುಖಂಡರ, ಪದಾಧಿಕಾರಿಗಳ, ಕಾರ್ಯಕರ್ತರ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಮುಂಬರುವ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಎಂಟು ವಿಧಾನ ಸಭಾ ಕ್ಷೇತ್ರಗಳ ಪದಾಧಿಕಾರಿಗಳ, ಕಾರ್ಯಕರ್ತರ ಸಭೆ ನಡೆಸಿ ಚುನಾವಣೆಗೆ ಹೇಗೆ ಕೆಲಸ ಮಾಡ ಬೇಕು ಎಂಬ ಬಗ್ಗೆ ಚರ್ಚಿಸಲಾಗುತ್ತಿದೆ. ಬಿಜೆಪಿ ಜೊತೆ ಸೇರಿ ಚುನಾವಣೆ ನಡೆಸುವುದರಿಂದ ಎರಡೂ ಪಕ್ಷದ ಕಾರ್ಯಕರ್ತರು ಹೊಂದಾಣಿಕೆಯಿಂದ ಕೆಲಸ ಮಾಡಬೇಕಾಗುತ್ತದೆ. 2019ರ ಲೋಕಸಭಾ ಚುನಾವಣೆಯ ಕಹಿ ಘಟನೆಗಳನ್ನು ಮರೆತು ಈ ಚುನಾವಣೆ ಎದುರಿಸೋಣ. ರಾಜ್ಯದಲ್ಲಿ ಉತ್ತಮ ಫಲಿತಾಂಶ ಹೊರ ಹೊಮ್ಮಲು ನಮ್ಮ ಪಕ್ಷ ನಿರ್ಣಾಯಕ ಪಾತ್ರ ವಹಿಸಲಿದೆ. ಯಾವ ಗೊಂದಲ ಸೃಷ್ಟಿಸದೆ ಗೆಲುವಿನ ಕಡೆ ಗಮನ ಹರಿಸಿ. ಈ ತಾಲೂಕಿನಲ್ಲಿ ಜೆಡಿಎಸ್ ಪಕ್ಷ ಮೊದಲಿನಿಂದಲೂ ಸುಭದ್ರವಾಗಿದೆ. ಹಲವು ಬಾರಿ ಇಲ್ಲಿ ಪಕ್ಷ ಗೆದ್ದಿದೆ. ಹಾಗಾಗಿ ಪಕ್ಷಕ್ಕೆ ಉತ್ತಮ ನೆಲೆ ರೂಪಿಸುವುದು ಕಷ್ಟವೇನಲ್ಲ. ಎರಡೂ ಪಕ್ಷಗಳು ಸೇರಿರುವುದರಿಂದ ಎಲ್ಲರೂ ಒಗ್ಗೂಡಿ ಗೆಲುವಿನ ಗುರಿಯಿಟ್ಟುಕೊಂಡು ಕೆಲಸ ಮಾಡಬೇಕು ಎಂದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಜಯಣ್ಣ ಮಾತನಾಡಿ, ಪಕ್ಷ ಸಂಕಷ್ಟದಲ್ಲಿದೆ. ಲೋಕಸಭಾ ವ್ಯಾಪ್ತಿಯ 8 ಕ್ಷೇತ್ರಗಳಲ್ಲಿ ನಮ್ಮ ಶಾಸಕರಿಲ್ಲ.ಬಿಜೆಪಿ ಅಥವಾ ಜೆಡಿಎಸ್‌ನ ಯಾರೇ ಅಭ್ಯರ್ಥಿಯಾದರೂ ಗೆಲ್ಲಿಸಲೇಬೇಕಿದೆ. ಈಗಿರುವ ಸರ್ಕಾರ ಕುಡಿಯುವ ನೀರಿಗೂ ಸೆಸ್ ಹಾಕಿ ಬಿಟ್ಟಿ ಭಾಗ್ಯಕ್ಕೆ ಹಣ ಸುರಿಯುತ್ತಿದೆ. ದೇವಸ್ಥಾನಗಳ ಹಣ ಸರ್ಕಾರಕ್ಕೆ ತೆಗೆದು ಕೊಳ್ಳುತ್ತಾರೆ. ಮುಸ್ಲಿಂರಿಗೆ ಹತ್ತು ಸಾವಿರ ಕೋಟಿ ಹಾಕುತ್ತಾರೆ. ದೇವೇಗೌಡರು ಎಸ್‌ಟಿ ಸಮಾಜಕ್ಕೆ ಮೀಸಲಾತಿ ಕೊಡಿಸಿದರು. ಇದೀಗ ಕಾಡು ಗೊಲ್ಲರಿಗೂ ಎಸ್‌ಟಿ ಮೀಸ ಲಾತಿ ಕೊಡಿಸಲು ಪ್ರಯತ್ನಿಸುತ್ತಿದ್ದಾರೆ. ದೇವೇಗೌಡರ ಕಾರ್ಯ ಸಾಧನೆಗಳನ್ನು, ಅಭಿವೃದ್ಧಿ ಕಾರ್ಯಗಳನ್ನು, ನೀರಾವರಿ ಯೋಜನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡ ಬೇಕಾಗಿದೆ. ನಮ್ಮ ಜಿಲ್ಲೆಯಲ್ಲಿ ಪಕ್ಷ ಬಲವಾಗಿದ್ದು, ಈ ಕ್ಷೇತ್ರ ನಮಗೇ ಇರಲಿ ಎಂದು ಕೇಳಿದ್ದೇವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸುಮಾರು ಎರಡುವರೆ ಲಕ್ಷಕ್ಕೂ ಅಧಿಕ ಮತಗಳು ಪಕ್ಷಕ್ಕೆ ಬಂದಿವೆ. ಲಿಂಗಾಯತರು, ಕಾಡು ಗೊಲ್ಲರು ಸೇರಿದಂತೆ ಬಹಳಷ್ಟು ಸಮುದಾಯ ನಮ್ಮನ್ನು ಬೆಂಬಲಿಸಲಿವೆ. ಇಲ್ಲಿನ ಶಾಸಕರಿಗೆ ಅವರ ಪಕ್ಷದ ಕಾರ್ಯ ಕರ್ತರೇ ತಿರುಗಿ ಬಿದ್ದಿದ್ದಾರೆ. ಅಂತಹ ಸನ್ನಿವೇಶಗಳನ್ನು ನಮ್ಮವರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಜೆಡಿಎಸ್ ಪಕ್ಷದ ವಿಧಾನ ಸಭಾ ಚುನಾವಣೆ ಪರಾಭಾವ ಅಭ್ಯರ್ಥಿ ಎಂ.ರವೀಂದ್ರಪ್ಪ ಮಾತನಾಡಿ ದೇಶಕ್ಕೆ ಪ್ರಧಾನಿ ಕೊಟ್ಟಂತಹ ಪಕ್ಷ ನಮ್ಮದು. ನಾವು ಅನೇಕ ಜನಪರ ಕಾರ್ಯಕ್ರಮಗಳನ್ನು ಹಾಕಿಕೊಂಡು ರಾಜ್ಯ ಸುತ್ತಿದರೂ ಸಹ ನಮ್ಮ ಪಕ್ಷಕ್ಕೆ ವಿಧಾನಸಭಾ ಚುನಾವಣೆಯಲ್ಲಿ ಹಿನ್ನಡೆ ಆಯಿತು. ಕಾಂಗ್ರೆಸ್ ಪಕ್ಷದವರ ಬಿಟ್ಟಿ ಭಾಗ್ಯಗಳು ಜನರ ದಿಕ್ಕು ತಪ್ಪಿಸಿದವು. ರೈತರಿಗೆ, ದೀನ ದಲಿತರಿಗೆ, ಬಡವರಿಗೆ ಏನಾದರೂ ಉಪಯೋಗ ಆಗಿದ್ದರೆ ಅದಕ್ಕೆ ನಮ್ಮ ಪಕ್ಷ ಮತ್ತು ನಮ್ಮ ನಾಯಕರು ಕಾರಣ. ಮೋದೀಜಿಯವರೇ ಮುಂದಿನ ಪ್ರಧಾನಿಯಾಗಬೇಕಾದ ಅನಿವಾರ್ಯತೆ ಇದೆ. ಹಾಗಾಗಿ ಬೂತ್ ಮಟ್ಟದಲ್ಲಿ ನಮ್ಮ ಪಕ್ಷವನ್ನು ಬಲಪಡಿಸಿ ಮೈತ್ರಿ ಅಭ್ಯರ್ಥಿ ಗೆಲ್ಲಿಸುವ ಪ್ರಯತ್ನ ಮಾಡಬೇಕು ಕಾಂಗ್ರೆಸ್ ಪಕ್ಷವನ್ನು ಅತ್ಯಧಿಕ ಮತಗಳಿಂದ ಸೋಲಿಸುವುದೇ ಮೈತ್ರಿ ಕೂಟದ ಗುರಿಯಗಬೇಕು ಎಂದರು.

ಈ ಸಂದರ್ಭದಲ್ಲಿ ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷ ಡಿ.ಯಶೋಧರ್, ತಾಲೂಕು ಅಧ್ಯಕ್ಷ ಎನ್.ಹನುಮಂತರಾಯಪ್ಪ, ಮುಖಂಡರಾದ ಜೆಜೆ ಹಳ್ಳಿ ಮಂಜಣ್ಣ, ಶಿವಶಂಕರ ಮೂರ್ತಿ, ಬಸವರಾಜ್, ಗುಣ ಶೇಖರ್, ಜಲ್ದಪ್ಪ, ಎಂ.ಡಿ.ರಮೇಶ್, ಕೇಶವಮೂರ್ತಿ, ತಿಮ್ಮರಾಜ್, ಚಂದ್ರಪ್ಪ ಪಾವಗಡ, ಕರಿಯಪ್ಪ, ಟಿ.ವಿ.ಮೂರ್ತಿ, ಕಾಂತರಾಜ್, ಕೆ.ಚಿದಾನಂದ್, ಮಂಜಣ್ಣ ಮುಂತಾದವರು ಉಪಸ್ಥಿತರಿದ್ದರು.

Share this article