ಮಹೇಂದ್ರ ದೇವನೂರು
ಕನ್ನಡಪ್ರಭ ವಾರ್ತೆ ಮೈಸೂರುಆಡಳಿತಾರೂಢ ಕಾಂಗ್ರೆಸ್ ಸರ್ಕಾರದಲ್ಲಿ ನಡೆದಿದೆ ಎನ್ನಲಾದ ಹಗರಣಗಳ ವಿರುದ್ಧ ಸಿಡಿದೆದ್ದಿರುವ ಬಿಜೆಪಿ- ಜೆಡಿಎಸ್ ಮೈತ್ರಿ ಪಕ್ಷಗಳು ಕೈಗೊಂಡಿರುವ ಪಾದಯಾತ್ರೆ ಮೈಸೂರು ತಲುಪಿದ್ದು, ಕಾಂಗ್ರೆಸ್ ನಡೆಸಿದ ಜನಾಂದೋಲನ ಸಮಾವೇಶಕ್ಕೆ ಪ್ರತಿಯಾಗಿ ಸೇರಿಗೆ ಸೆವ್ವಾ ಸೇರು ನೀಡಲು ಸಿದ್ಧತೆ ನಡೆಸಿವೆ.
ಮುಡಾ ಹಗರಣ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಮತ್ತು ಪರಿಶಿಷ್ಟರಿಗೆ ಮೀಸಲಾದ ಅನುದಾನ ದುರ್ಬಳಕೆ ವಿರೋಧಿಸಿ ಬಿಜೆಪಿ ಮತ್ತು ಜೆಡಿಎಸ್ಪಕ್ಷಗಳ ನಾಯಕರು ಹಮ್ಮಿಕೊಂಡಿರುವ ರ್ಯಾಲಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಟೀಕಾಪ್ರಹಾರ ನಡೆಸಲು ಸಿದ್ಧರಾಗಿದ್ದಾರೆ.ಶನಿವಾರ ರಾತ್ರಿ 8 ಗಂಟೆ ವೇಳೆಗೆ ಪಾದಯಾತ್ರೆಯು ಮೈಸೂರು ಪ್ರವೇಶಿಸಿತು. ಬೇಗನೆ ಬಂದರೂ ನಗರದ ಹೊರ ವಲಯದ ಸಿದ್ಧಲಿಂಗಪುರದ ಬಳಿ ಪೊಲೀಸರು ಪಾದಯಾತ್ರೆ ತಡೆದರು.
ಮೈಸೂರಿನಲ್ಲಿ ಇನ್ನೂ ಕಾಂಗ್ರೆಸ್ ಸಮಾವೇಶ ಸಂಪನ್ನಗೊಳ್ಳದ ಹಿನ್ನೆಲೆಯಲ್ಲಿ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಬೆಂಬಲಿಗರು ಜಮಾವಣೆಗೊಂಡಿದ್ದರಿಂದ ಮುಂಜಾಗ್ರತ ಕ್ರಮವಾಗಿ ಪೊಲೀಸರು ಕೆಲಕಾಲ ತಡೆದಿದ್ದರು.ಕಾಂಗ್ರೆಸ್ ಆಯೋಜಿಸಿದ್ದ ಜನಾಂದೋಲನ ಸಮಾವೇಶ ನಡೆದ ವೇದಿಕೆಯಲ್ಲಿಯೇ ಬಿಜೆಪಿ ರ್ಯಾಲಿಯು ಶನಿವಾರ ನಡೆಯಲಿದ್ದು, ರಾಜ್ಯ ಮತ್ತು ಕೇಂದ್ರದ ಕೆಲವು ನಾಯಕರು ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಶುಕ್ರವಾರದ ಕಾಂಗ್ರೆಸ್ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಇತರ ನಾಯಕರು ನೀಡಿರುವ ಸಮಜಾಯಿಷಿ, ಸವಾಲಿಗೆ ಪ್ರತಿ ಸಾವಲು ಹಾಕಲು ದೋಸ್ತಿಗಳು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.ಒಂದೆಡೆ ರಾಜ್ಯ ಸರ್ಕಾರದ ಹಗರಣದ ವಿರುದ್ಧದ ಹೋರಾಟವಾದರೆ, ಮತ್ತೊಂದೆಡೆ ಡಿ.ಕೆ. ಶಿವಕುಮಾರ್ ಮತ್ತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಪ್ರತಿಷ್ಠೆ ಹಾಗೂ ಜಿದ್ದಿಗೆ ವೇದಿಕೆಯಾಗಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಪಕ್ಷ ನಾಯಕ ಆರ್. ಅಶೋಕ್, ಮಾಜಿ ಸಿಎಂಗಳಾದ ಬಿ.ಎಸ್. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಸಿ.ಟಿ. ರವಿ, ಡಾ. ಅಶ್ವಥ್ನಾರಾಯಣ್ ಸೇರಿದಂತೆ ಅನೇಕರು ಈ ರ್ಯಾಲಿಯಲ್ಲಿ ಪಾಲ್ಗೊಳ್ಳುವರು.
ನಮಸ್ಕರಿಸಿದ ನಿಖಿಲ್:ಬಳಿಕ ಆರಂಭವಾದ ಪಾದಯಾತ್ರೆ ಮೈಸೂರು ತಲುಪಿತು. ಈ ಮುಂಚೆಯೇ ವಿಪಕ್ಷ ನಾಯಕ ಆರ್. ಅಶೋಕ್ ಮೈಸೂರಿಗೆ ಆಗಮಿಸಿದ್ದರು. ಜೆಡಿಎಸ್ ನಾಯಕ ನಿಖಿಲ್ಕುಮಾರಸ್ವಾಮಿ ಮೈಸೂರಿಗೆ ಆಗಮಿಸುತ್ತಲೇ ಈಡುಗಾಯಿ ಹೊಡೆದು ಕಳೆಗೆ ಕುಳಿತು ನಮಸ್ಕರಿಸಿ ಪಾದಾರ್ಪಣೆ ಮಾಡಿದರು.
ಬಂದೋಬಸ್ತ್:ರ್ಯಾಲಿ ಹಿನ್ನೆಲೆಯಲ್ಲಿ ನಗರದಾದ್ಯಂತ ಸೂಕ್ತ ಬಂದೋಬಸ್ತ್ ಗೆ ಪೊಲೀಸರು ಮುಂದಾಗಿದ್ದಾರೆ. ನಾವೇನೂ ಕಡಿಮೆ ಇಲ್ಲ ಎಂಬಂತೆ ಸಾವಿರಾರು ಮಂದಿಯನ್ನು ಸೇರಿಸಿ, ಸರ್ಕಾರವನ್ನು ಎದರಿಸಲು ಉಭಯ ಪಕ್ಷಗಳು ಮುಂದಾಗಿವೆ. ಈ ಕಾರಣಕ್ಕೆ ನಗರದಲ್ಲಿ ಸೂಕ್ತ ಸಂಚಾರ ವ್ಯವಸ್ಥೆ ಮತ್ತು ಪೊಲೀಸ್ ಬಂದೋಬಸ್ತ್ಗೆ ನಗರ ಪೊಲೀಸ್ ಆಯುಕ್ತರು ಕ್ರಮಕೈಗೊಂಡಿದ್ದಾರೆ.