ರೈತರ ಬದುಕನ್ನು ಸರಿಪಡಿಸಲು ಬಿಜೆಪಿ-ಜೆಡಿಎಸ್‌ ಮೈತ್ರಿ: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ

KannadaprabhaNewsNetwork |  
Published : Apr 14, 2024, 01:46 AM IST

ಸಾರಾಂಶ

ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದು ವೈಯಕ್ತಿಕವಾಗಿ ನನಗೆ ಸ್ಥಾನಮಾನ ಸಿಗಲಿ ಎಂದಲ್ಲ. ಈ ನಾಡಿನ ರೈತರ ಬದುಕು ಹಸನಾಗಬೇಕು. ಬೆಳೆಗಳಿಗೆ ಲಾಭದಾಯಕ ಬೆಲೆ ಸಿಗುವ ಮೂಲಕ ರೈತರನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಬೇಕೆಂಬ ಉದ್ದೇಶದಿಂದ ಈ ಮಹಾಮೈತ್ರಿ ಮಾಡಕೊಳ್ಳಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ತಿಪಟೂರುಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದು ವೈಯಕ್ತಿಕವಾಗಿ ನನಗೆ ಸ್ಥಾನಮಾನ ಸಿಗಲಿ ಎಂದಲ್ಲ. ಈ ನಾಡಿನ ರೈತರ ಬದುಕು ಹಸನಾಗಬೇಕು. ಬೆಳೆಗಳಿಗೆ ಲಾಭದಾಯಕ ಬೆಲೆ ಸಿಗುವ ಮೂಲಕ ರೈತರನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಬೇಕೆಂಬ ಉದ್ದೇಶದಿಂದ ಈ ಮಹಾಮೈತ್ರಿ ಮಾಡಕೊಳ್ಳಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದರು. ಲೋಕಸಭಾ ಚುನಾವಣಾ ಪ್ರಚಾರದ ಹಿನ್ನೆಲೆಯಲ್ಲಿ ತಾಲೂಕಿನ ನೊಣವಿನಕೆರೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ವತಿಯಿಂದ ಶನಿವಾರ ನಡೆದ ರೋಡ್‌ ಶೋ ಹಾಗೂ ಬಹಿರಂಗ ಸಭೆಯಲ್ಲಿ ಮಾತನಾಡಿದರು. ರೈತರ ಜೀವನವಾಡಿ ಕೊಬ್ಬರಿ ಬೆಳೆ ಕಳೆದ ಎರಡು ವರ್ಷಗಳಿಂದ ಕುಸಿತಕಂಡಿದ್ದು, ಆರ್ಥಿಕ ಶಕ್ತಿ ಕುಗ್ಗಿದೆ.

ಕೇಂದ್ರ ಸರ್ಕಾರ 12 ಸಾವಿರ ರು.ನಂತೆ ನಾಫೆಡ್ ಮೂಲಕ ಕೊಬ್ಬರಿ ಕೊಂಡುಕೊಳ್ಳುತ್ತಿದೆ. ಮತ್ತೆ ಮೋದಿ ಪ್ರಧಾನಿಯಾಗಲಿದ್ದು, ಕೊಬ್ಬರಿಗೆ 18 ಸಾವಿರ ರು. ಕೊಡಿಸಲಾಗುವುದು. ನನಗೆ ಲೋಕಸಭೆಗೆ ನಿಲ್ಲಬೇಕೆಂಬು ಆಸೆ ಇರಲಿಲ್ಲ. ಮುಖಂಡರ ಒತ್ತಡಗಳ ಮೇಲೆ ಸ್ಪರ್ಧೆ ಮಾಡಿದ್ದೇನೆ. ರೈತರಿಗಾಗಿ ಹೊಸ ಕೃಷಿ ನೀತಿ ಅಳಸವಡಿಸಲು ಸ್ಪರ್ಧಿಸುತ್ತಿದ್ದು, ಆಯ್ಕೆ ಮಾಡಿದರೆ ರೈತರ ಪರ ಕೆಲಸ ಮಾಡುತ್ತೇವೆ ಎಂದರು.

ನೀರಾವರಿ ಯೋಜನೆಗಳಿಗೆ ರಾಜ್ಯ ಸರ್ಕಾರ ಹಣ ನೀಡದೆ ಪ್ರಗತಿ ಸಾಧ್ಯವಾಗುತ್ತಿಲ್ಲ. ದೇವೇಗೌಡರ ಮಾರ್ಗದರ್ಶನದಲ್ಲಿ ಲೋಕಸಭೆಯಲ್ಲಿ ರಾಜ್ಯದ ಸಮಸ್ಯೆ ಬಗ್ಗೆ ಪ್ರಸ್ತಾಪ ಮಾಡುತ್ತೇನೆ. ನಿಮ್ಮ ಆಶೀರ್ವಾದ ನಮಗೆ ಬೇಕಿದೆ. ರೈತರ ಸಾಲಮನ್ನಾ, ಸೈಕಲ್ ವಿತರಣೆ, ಭಾಗ್ಯಲಕ್ಷ್ಮಿ ಯೋಜನೆ ಸೇರಿದಂತೆ ಹಲವಾರು ಜನಪರ ಯೋಜನೆ ಜಾರಿಗೆ ತಂದಿದ್ದೆವು. ಕಾಂಗ್ರೆಸ್‌ನ ಸುಳ್ಳು ಭರವಸೆಗೆ ಕಿವಿಗೊಡಬೇಡಿ. ೫ ಗ್ಯಾರಂಟಿಗಳನ್ನು ಜಾರಿಗೆ ತಂದು ಒಂದು ಲಕ್ಷದ 5 ಸಾವಿರ ಕೋಟಿ ರು.ಸಾಲ ಮಾಡಿದ್ದಾರೆ. ಅದನ್ನೆಲ್ಲಾ ನೀವೇ ತೀರಿಸಬೇಕು. ಕಾಂಗ್ರೆಸ್ ಪಕ್ಷ ಜನರ ಬದುಕನ್ನು ಸರಿಪಡಿಸುವ ಬದಲು ಭಿಕ್ಷುಕರನ್ನಾಗಿ ಮಾಡುತ್ತಿದೆ. ಈ ಬಾರಿ ತುಮಕೂರಿನಿಂದ ಮೈತ್ರಿ ಅಭ್ಯರ್ಥಿಯಾಗಿ ಸೋಮಣ್ಣ ಸ್ಪರ್ಧಿಸಿದ್ದು, ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸುವ ಜವಾಬ್ದಾರಿ ನಿಮ್ಮೆಲ್ಲರ ಮೇಲಿದೆ ಎಂದು ಹೇಳಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಮಾತನಾಡಿ, ಬಿಜೆಪಿ ಜೆಡಿಎಸ್ ಪಕ್ಷ ಒಗ್ಗಟಾಗುವ ಮೂಲಕ ಅಭ್ಯರ್ಥಿ ವಿ.ಸೋಮಣ್ಣನವರನ್ನು ಎರಡು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಬೇಕು. ಕಾರ್ಯಕರ್ತರು ಬೂತ್‌ಗಳಲ್ಲಿ ಅತ್ಯಧಿಕ ಮತಗಳನ್ನು ಬಿಜೆಪಿಗೆ ಕೊಡಿಸುವ ಮೂಲಕ ದೊಡ್ಡ ಗೆಲುವು ಸಾಧಿಸಬೇಕು. ಎಚ್.ಡಿ. ಕುಮಾರಸ್ವಾಮಿಯವರು ಸಹ ಚುನಾವಣಾ ಪ್ರವಾಸ ಮಾಡುತ್ತಿದ್ದು ೨೮ಕ್ಕೆ ೨೮ಕ್ಷೇತ್ರಗಳನ್ನು ಗೆಲ್ಲುತ್ತೇವೆ. ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲಿದ್ದು ಕಾಂಗ್ರೆಸ್ ಪಕ್ಷ ದಿಕ್ಕಾಪಾಲಾಗಿ ಹೋಗಲಿದೆ ಎಂದರು. ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ ಮಾತನಾಡಿ, ಜಿಲ್ಲೆ ಅಭಿವೃದ್ದಿಯಾಗಬೇಕಾದರೆ ನಿಮ್ಮ ಮತ ನಮಗೆ ಅವಶ್ಯಕವಾಗಿದ್ದು, ಸ್ಥಳೀಯ ಸಮಸ್ಯೆಗಳು ಏನೇ ಇದ್ದರೂ ನಾನು ಸ್ಪಂದಿಸುತ್ತೇನೆ. ಈ ಕ್ಷೇತ್ರದಲ್ಲಿ ಜನತಾದಳ, ಬಿಜೆಪಿ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡುತ್ತಿರುವುದು ನನಗೆ ಸಂತಸ ತಂದಿದೆ ಎಂದರು.

ಜೆಡಿಎಸ್ ಮುಖಂಡ ಕೆ.ಟಿ. ಶಾಂತಕುಮಾರ್ ಮಾತನಾಡಿದರು. ಮಾಜಿ ಸಚಿವ ಬಿ.ಸಿ.ನಾಗೇಶ್, ರಾಜ್ಯಸಭಾ ಸದಸ್ಯ ಜಗ್ಗೇಶ್, ಶಾಸಕರಾದ ಎಂ.ಟಿ. ಕೃಷ್ಣಪ್ಪ, ಮಸಾಲ ಜಯರಾಂ, ಜೆಡಿಎಸ್ ಜಿಲ್ಲಾಧ್ಯಕ್ಷ ಆಂಜನಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿ, ಮುಖಂಡರಾದ ಎಂ.ಡಿ. ಲಕ್ಷ್ಮೀನಾರಾಯಣ, ಜಕ್ಕನಹಳ್ಳಿ ಲಿಂಗರಾಜು, ಬಿಸ್ಲೇಹಳ್ಳಿ ಜಗದೀಶ್, ರೋಹಿತ್, ರಾಕೇಶ್, ಎನ್.ಸಿ. ರಮೇಶ್ ಸೇರಿದಂತೆ ಬಿಜೆಪಿ ಮತ್ತು ಜೆಡಿಎಸ್‌ನ ಕಾರ್ಯಕರ್ತರು ಇದ್ದರು.--------------------------------------------------------ಚುನಾವಣೆ ನಂತರ ಬಿಜೆಪಿ-ಜೆಡಿಎಸ್‌ ಮೈತ್ರಿ ಸರ್ಕಾರ..?

೨೦೦೬ರಲ್ಲಿ ಬಿಜೆಪಿ-ಜೆಡಿಎಸ್ ಹೊಂದಾಣಿಕೆಯಾಗಿದ್ದಾಗ ಬಿ.ಎಸ್. ಯಡಿಯೂರಪ್ಪನವರ ಜತೆಗೂಡಿ ಜನಪರ ಸರ್ಕಾರವನ್ನು ತಂದಿದ್ದೆವು. ಈಗ ರಾಜ್ಯಕ್ಕೆ ಅಂತಹ ಸರ್ಕಾರದ ಅವಶ್ಯಕತೆ ಇದೆ.

- ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪರ್ಸಿಯನ್‌ ಹೇರಿ ಕನ್ನಡ ಕೊಲೆ ಮಾಡಿದ ಟಿಪ್ಪು: ಸಿ.ಟಿ. ರವಿ
ಲೇಡಿಗೋಶನ್‌ : ಗುತ್ತಿಗೆದಾರರ ಬಾಕಿ ಮೊತ್ತ ಲೋಕ ಅದಾಲತ್‌ನಲ್ಲಿ ಇತ್ಯರ್ಥ