ಬೆಂಗಳೂರು: ಕಾಂಗ್ರೆಸ್ ಪಕ್ಷದ ಬೆನ್ನಲ್ಲೇ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಗಳು ಪ್ರಬಲ ಒಕ್ಕಲಿಗ ಸಮುದಾಯಕ್ಕೆ ಸೇರಿದ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.
ಬುಧವಾರ ಬೆಂಗಳೂರಿನ ವಿಜಯನಗರದಲ್ಲಿರುವ ಆದಿಚುಂಚನಗಿರಿ ಶಾಖಾಮಠಕ್ಕೆ ತೆರಳಿದ ಉಭಯ ಪಕ್ಷಗಳ ಅಭ್ಯರ್ಥಿಗಳು ಹಾಗೂ ಮುಖಂಡರು ಸ್ವಾಮೀಜಿಗಳ ಆಶೀರ್ವಾದ ಪಡೆದು ಕೆಲಹೊತ್ತು ಸಮಾಲೋಚನೆ ನಡೆಸಿದರು.
ಮೈತ್ರಿಕೂಟದ ಅಭ್ಯರ್ಥಿಗಳಾದ ಎಚ್.ಡಿ.ಕುಮಾರಸ್ವಾಮಿ, ವಿ.ಸೋಮಣ್ಣ, ಯದುವೀರ ಒಡೆಯರ್, ಶೋಭಾ ಕರಂದ್ಲಾಜೆ, ಡಾ.ಸಿ.ಎನ್.ಮಂಜುನಾಥ್, ತೇಜಸ್ವಿ ಸೂರ್ಯ, ಪಿ.ಸಿ.ಮೋಹನ್, ಡಾ.ಕೆ.ಸುಧಾಕರ್ ಹಾಗೂ ಮಲ್ಲೇಶ್ ಬಾಬು ಅವರಿದ್ದರು. ಜತೆಗೆ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಸಚಿವರಾದ ಜಿ.ಟಿ.ದೇವೇಗೌಡ, ಡಾ.ಸಿ.ಎನ್.ಅಶ್ವತ್ಥನಾರಾಯಣ, ಆರಗ ಜ್ಞಾನೇಂದ್ರ, ಕೆ.ಗೋಪಾಲಯ್ಯ, ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರೂ ಉಪಸ್ಥಿತರಿದ್ದರು.
ಶ್ರೀಗಳ ದುರುಪಯೋಗ ಇಲ್ಲ -ಎಚ್‌ಡಿಕೆ:
ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಪ್ರತಿ ಯುಗಾದಿ ಹಬ್ಬದ ಬಳಿಕ ನಮ್ಮ ಗುರುಗಳ ಆಶೀರ್ವಾದ ಪಡೆಯುವುದು ನಾವು ಪಾಲಿಸಿಕೊಂಡು ಬಂದಿರುವ ಸಂಪ್ರದಾಯ. ನಮ್ಮ ಪಕ್ಷದವರು, ಬಿಜೆಪಿ ನಾಯಕರು ಒಟ್ಟಾಗಿ ಬಂದು ಆಶೀರ್ವಾದ ಪಡೆದಿರುವುದರಲ್ಲಿ ತಪ್ಪೇನು ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಶ್ರೀಗಳನ್ನು ಭೇಟಿ ಮಾಡಿ ಅವರನ್ನು ಬಳಸಿಕೊಳ್ಳುವ ಪ್ರಯತ್ನ ಮೊನ್ನೆ ಕಾಂಗ್ರೆಸ್ ಮಾಡಿದೆ. ರಾಜಕೀಯಕ್ಕೂ ಧರ್ಮಕ್ಕೂ ಏನು ಸಂಬಂಧ? ಧಾರ್ಮಿಕವಾಗಿ ನಾಡಿಗೆ ಮಾರ್ಗದರ್ಶನ ಮಾಡುತ್ತಿರುವ ಸ್ವಾಮೀಜಿಗಳನ್ನು ರಾಜಕೀಯಕ್ಕೆ ಎಳೆದು ತರುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ನಾನು ಎಂದಿಗೂ ಅಧಿಕಾರದಲ್ಲಿದ್ದಾಗ ನಮ್ಮ ಸಮುದಾಯದ ಸ್ವಾಮೀಜಿಗಳನ್ನು ದುರುಪಯೋಗ ಪಡಿಸಿಕೊಳ್ಳುವ ಕೆಲಸ ಮಾಡಿಲ್ಲ. ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿಲ್ಲ. ಜಾತ್ಯತೀತ ಅಂತ ಹೇಳುವವರು ಪ್ರತೀ ದಿನ ಜಾತಿ ಬಗ್ಗೆಯೇ ಮಾತನಾಡುತ್ತಾರೆ. ನಮ್ಮ ಸಮಾಜದ ಜನ ದಡ್ಡರಲ್ಲ. ಇವರು ನಡೆಸುತ್ತಿರುವ ರಾಜಕೀಯ ಎಲ್ಲರಿಗೂ ಅರ್ಥ ಆಗುತ್ತಿದೆ ಎಂದು ಪರೋಕ್ಷವಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಕಿಡಿಕಾರಿದರು.