ರಾಮನಗರದ ಹಳ್ಳಿಮಾಳ ಸೊಸೈಟಿ ಚುನಾವಣೆ ಮುಂದೂಡಿಕೆಗೆ ಬಿಜೆಪಿ-ಜೆಡಿಎಸ್‌ ಖಂಡನೆ

KannadaprabhaNewsNetwork | Published : Jul 10, 2024 12:36 AM

ಸಾರಾಂಶ

ರಾಮನಗರದ ಹಳ್ಳಿಮಾಳ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ಸ್ಥಾನ ಚುನಾವಣೆಯನ್ನು ಪದೆಪದೇ ಮುಂದೂಡುತ್ತಿರುವುದನ್ನು ಖಂಡಿಸಿ ಜೆಡಿಎಸ್-ಬಿಜೆಪಿ ಕಾರ್ಯಕರ್ತರು ಮಂಗಳವಾರ ಸಹಕಾರ ಸಂಘಗಳ ಉಪ ನಿಬಂಧಕರು ಹಾಗೂ ಸಂಘಗಳ ನೋಂದಣಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು

-ಜೆಡಿಎಸ್- ಬಿಜೆಪಿ ಪ್ರತಿಭಟನೆ ವೇಳೆ ಹೈಡ್ರಾಮಾ

-ನೋಂದಣಾಧಿಕಾರಿಗಳ ಕಚೇರಿಗೆ ಮುತ್ತಿಗೆ ಯತ್ನ

-ಪೊಲೀಸ್‌ ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ -22ಕ್ಕೆ ಚುನಾವಣೆ ಘೋಷಣೆ

ಕನ್ನಡಪ್ರಭ ವಾರ್ತೆ ರಾಮನಗರ

ಹಳ್ಳಿಮಾಳ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ಸ್ಥಾನ ಚುನಾವಣೆಯನ್ನು ಪದೆಪದೇ ಮುಂದೂಡುತ್ತಿರುವುದನ್ನು ಖಂಡಿಸಿ ಜೆಡಿಎಸ್-ಬಿಜೆಪಿ ಕಾರ್ಯಕರ್ತರು ಮಂಗಳವಾರ ಸಹಕಾರ ಸಂಘಗಳ ಉಪ ನಿಬಂಧಕರು ಹಾಗೂ ಸಂಘಗಳ ನೋಂದಣಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು. ಈ ವೇಳೆ ಪೊಲೀಸರ ಜತೆ ಮಾತಿನ ಚಕಮಕಿ ನಡೆದು ಹೈಡ್ರಾಮಾ ನಡೆದಿದೆ.

ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ - ಬಿಜೆಪಿ ಕಾರ್ಯಕರ್ತರು ನಗರದ ಕಂದಾಯ ಭವನದ ಎದುರು ಕೆಲಕಾಲ ಪ್ರತಿಭಟನೆ ನಡೆಸಿದ ನಂತರ ಸಹಕಾರ ಸಂಘಗಳ ಉಪ ನಿಬಂಧಕರು ಹಾಗೂ ಸಂಘಗಳ ನೋಂದಣಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲು ಮುಂದಾದಾಗ ಬಂದೋಬಸ್ತಿನಲ್ಲಿದ್ದ ಪೊಲೀಸರು ಬ್ಯಾರಿಕೇಡ್‌ಗಳನ್ನು ಅಡ್ಡ ಹಾಕಿ ತಡೆದರು.

ಇದರಿಂದ ಸಿಡಿದೆದ್ದ ಕಾರ್ಯಕರ್ತರು ಬ್ಯಾರಿಕೇಡ್‌ಗಳನ್ನು ಕೆಳಕ್ಕೆ ತಳ್ಳಿ ಮುನ್ನುಗ್ಗಿದಾಗ ಪೊಲೀಸರು ಲಾಠಿ ಹಿಡಿದು ತಡೆಯೊಡ್ಡಿದರು. ಈ ವೇಳೆ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತಲ್ಲದೆ ತಳ್ಳಾಟ ನೂಕಾಟ ಉಂಟಾಗಿ ಕಂದಾಯ ಭವನದ ಗಾಜು ಪುಡಿ ಪುಡಿಯಾಯಿತು. ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಪೊಲೀಸರು ಮೆಟ್ಟಿಲ ಬಳಿಗೆ ಕಾರ್ಯಕರ್ತರನ್ನು ಬಲವಾಗಿ ತಳ್ಳಿದರು. ಈ ವೇಳೆ ಕೆಲ ಮುಖಂಡರು ಮೆಟ್ಟಲುಗಳ ಮೇಲೆ ಬಿದ್ದರು. ಹೆಚ್ಚಿನ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರನ್ನು ನಿಯಂತ್ರಿಸಿದರು.

ಈ ವೇಳೆ ಪೊಲೀಸ್ ಅಧಿಕಾರಿಯೊಬ್ಬರು ಪ್ರತಿಭಟನಾಕಾರರನ್ನು ಕುರಿತು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದನ್ನು ಕೇಳಿಸಿಕೊಂಡ ನಿಖಿಲ್ ಕುಮಾರಸ್ವಾಮಿ ಮತ್ತಷ್ಟು ಕೋಪಗೊಂಡರು. ಪ್ರತಿಭಟನಾಕಾರರು ಆ ಪೊಲೀಸ್ ಅಧಿಕಾರಿಯನ್ನು ಘೇರಾವ್ ಮಾಡಿ ತರಾಟೆ ತೆಗೆದುಕೊಳ್ಳಲು ಮುಂದಾದರು. ಆಗ ಸಿಬ್ಬಂದಿ ಅಧಿಕಾರಿಯನ್ನು ಒಳಗೆ ಕರೆದೊಯ್ದರು.

ಆನಂತರವೂ ಕಾರ್ಯಕರ್ತರು ರಿಟರ್ನಿಂಗ್ ಅಧಿಕಾರಿ ರಮ್ಯಾಶ್ರೀ ಅವರನ್ನು ಕೂಡಲೇ ಅಮಾನತ್ತು ಮಾಡಬೇಕು. ಸೊಸೈಟಿ ಚುನಾವಣೆ ದಿನಾಂಕ ಘೋಷಣೆ ಮಾಡಬೇಕು. ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಅಧಿಕಾರ ದುರ್ಬಳಕೆ ಮಾಡಿಕೊಂಡು ಚುನಾವಣೆಗೆ ಅಡ್ಡಿ ಪಡಿಸುತ್ತಿದ್ದಾರೆ. ಎರಡು ಬಾರಿ ಚುನಾವಣೆ ನಿಗದಿ ಆಗಿದ್ದರೂ ಅಧಿಕಾರಿಗಳು ಚುನಾವಣೆ ನಡೆಸಿಲ್ಲ. ಸಂಘದಲ್ಲಿ ಜೆಡಿಎಸ್‌ಗೆ ಅಧಿಕಾರ ತಪ್ಪಿಸಲು ಚುನಾವಣೆ ಮುಂದೂಡಲಾಗುತ್ತಿದೆ ಎಂದು ಆರೋಪಿಸಿ ಧರಣಿ ಮುಂದುವರೆಸಿದರು.

ಈ ವೇಳೆ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದಲೂ ಅಧಿಕಾರ ದುರುಪಯೋಗ ಆಗುತ್ತಿದೆ. ಬಿಜೆಪಿ-ಜೆಡಿಎಸ್ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿ ಕೇಸ್ ಹಾಕಲಾಗುತ್ತಿದೆ. ಪೊಲೀಸರ ಈ ರೀತಿಯ ವರ್ತನೆ ಸರಿಯಲ್ಲ. ನಮ್ಮ ಕಾರ್ಯಕರ್ತರ ಮೇಲೆ ಅವಾಚ್ಯ ಪದ ಬಳಕೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ರಾಜಕೀಯ ದುರುದ್ದೇಶದಿಂದ ಚುನಾವಣೆ ಮುಂದೂಡಿಸಿದ್ದಾರೆ. ಅಧಿಕಾರಿಗಳು, ಪೊಲೀಸರನ್ನು ಬಳಸಿಕೊಂಡು ನಮ್ಮ ಪ್ರತಿಭಟನೆ ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಚುನಾವಣೆ ದಿನಾಂಕ ಘೋಷಣೆ ಮಾಡುವವರೆಗೂ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ಎಚ್ಚರಿಸಿದರು.

ಪ್ರತಿಭಟನಾ ಸ್ಥಳಕ್ಕೆ ಚನ್ನಪಟ್ಟಣ ತಹಸೀಲ್ದಾರ್ ನರಸಿಂಹಮೂರ್ತಿ ಆಗಮಿಸಿ ಭರವಸೆ ನೀಡಿದರೂ ಪ್ರತಿಭಟನಾಕಾರರು ಒಪ್ಪದೆ ಧರಣಿ ಮುಂದುವರೆಸಿದರು. ಕೊನೆಗೆ ಸ್ಥಳಕ್ಕೆ ಆಗಮಿಸಿದ ಉಪ ವಿಭಾಗಾಧಿಕಾರಿ ಬಿನೋಯ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುರೇಶ್ ಅವರು ಜೆಡಿಎಸ್ ನಾಯಕರಾದ ನಿಖಿಲ್ ಕುಮಾರಸ್ವಾಮಿ, ಜಯ ಮುತ್ತು ಅವರೊಂದಿಗೆ ಚರ್ಚೆ ನಡೆಸಲು ಕಂದಾಯ ಭವನದೊಳಗೆ ತೆರಳಿದರು.

ಅಂತಿಮವಾಗಿ ಉಪ ವಿಭಾಗಾಧಿಕಾರಿ ಬಿನೋಯ್ ಜು.22ರಂದು ಚುನಾವಣೆ ನಡೆಸುವುದಾಗಿ ಘೋಷಣೆ ಮಾಡಿದ ಮೇಲೆ ಕಾರ್ಯಕರ್ತರು ಪ್ರತಿಭಟನೆ ಹಿಂಪಡೆದರು.

ಪ್ರತಿಭಟನೆಯಲ್ಲಿ ನಗರಸಭಾ ಸದಸ್ಯರಾದ ಮಂಜುನಾಥ್, ಮುನಜಿಲ್ ಆಗಾ, ಗ್ಯಾಬ್ರಿಯಲ್, ಜೆಡಿಎಸ್ ಮುಖಂಡರಾದ ನರಸಿಂಹಮೂರ್ತಿ, ಪಿ.ಅಶ್ವತ್ಥ್ , ದೊರೆಸ್ವಾಮಿ, ಉಮೇಶ್, ಗೂಳಿಗೌಡ, ರವಿ, ಸುಗ್ಗನಹಳ್ಳಿ ರಾಮಕೃಷ್ಣಯ್ಯ, ಕಾಂತರಾಜು, ವೆಂಕಟೇಶ್, ಡಾ.ಭರತ್ ಕೆಂಪಣ್ಣ, ಕೃಷ್ಣ, ಜಯಕುಮಾರ್, ಪಾಂಡು, ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ನಗರ ಘಟಕ ಅಧ್ಯಕ್ಷ ದರ್ಶನ್ ರೆಡ್ಡಿ, ಮುರಳೀಧರ್, ಎಸ್.ಆರ್.ನಾಗರಾಜುಮಂಜು ಭಾಗವಹಿಸಿದ್ದರು.

Share this article