ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ವಿರೋಧಿಸಿ ಬಿಜೆಪಿ ಹಾಗೂ ಜೆಡಿಎಸ್ ಹಮ್ಮಿಕೊಂಡಿರುವ ಬೆಂಗಳೂರಿನಿಂದ ಮೈಸೂರುವರೆಗಿನ ಪಾದಯಾತ್ರೆಗೆ ಶ್ರೀರಂಗಪಟ್ಟಣದಿಂದ ಸಾವಿರಾರು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಪೀಹಳ್ಳಿ ರಮೇಶ್ ಹೇಳಿದರು.ಪಟ್ಟಣದ ಪತ್ರಿಕಾ ಭವನದಲ್ಲಿ ರಾಜ್ಯ ಸಮಿತಿ ಸದಸ್ಯ ಡಾ.ಸಿದ್ದರಾಮಯ್ಯ, ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಕೆ.ಎಸ್.ನಂಜುಂಡೇಗೌಡ, ಬಿಜೆಪಿ ಮುಖಂಡ ಇಂಡವಾಳು ಸಚ್ಚಿದಾನಂದ ನೇತೃತ್ವದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಈಗಾಗಲೇ ಬೆಂಗಳೂರಿನಿಂದ ಮೈಸೂರಿನವರೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಪಾದಯಾತ್ರೆ ಆರಂಭವಾಗಿದೆ. ಆ.6ರಂದು ಮಂಡ್ಯ ಜಿಲ್ಲೆಗೆ ಆಗಮಿಸಲಿದೆ. ಆ.7ರಿಂದ 9ರವರೆಗೆ ಶ್ರೀರಂಗಪಟ್ಟಣ ಕ್ಷೇತ್ರದ ಮೂಲಕ ಪಾದಯಾತ್ರೆ ಮೈಸೂರಿಗೆ ತೆರಳಲಿದೆ ಎಂದರು.ಕಾಂಗ್ರೆಸ್‌ನ ಭ್ರಷ್ಟಾಚಾರದ ಬಗ್ಗೆ ಜನರಿಗೆ ತಿಳಿಸಬೇಕಿದೆ. ಕ್ಷೇತ್ರದ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಅಂದು ಪಾದಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮೈಸೂರಿನವರೆಗೂ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕೋರಿದರು.
ಮೈಸೂರು ಮುಡಾ ಹಾಗೂ ವಾಲ್ಮೀಕಿ ಪ್ರಾಧಿಕಾರದ ಹಣ ದುರ್ಬಳಕೆ ವಿಷಯ ಕುರಿತು ದಾಖಲೆಗಳ ಸಹಿತ ವಿವರವಾಗಿ ಬಯಲಿಗೆಳೆಯಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಪತ್ನಿ ಹೆಸರಿನಲ್ಲಿ ಮುಡಾ ಕಚೇರಿಯಲ್ಲಿನ ಬದಲಿ ನಿವೇಶಗಳ ಪಡೆದು ಭಾರೀ ಭ್ರಷ್ಟಾಚಾರ ಎಸಗಿರುವ ಆರೋಪಗಳು ದಾಖಲೆಗಳ ಸಹಿತ ಬಿಜೆಪಿ ಬಯಲಿಗೆ ಎಳೆದಿದ್ದರೂ ಮುಖ್ಯಮಂತ್ರಿಗಳು ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿರುವುದು ನಾಚಿಗೇಡಿನ ಸಂಗತಿ. ಕೂಡಲೇ ತಮ್ಮ ಸ್ಥಾನಕ್ಕೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.ಬಿಜೆಪಿ ರಾಜ್ಯ ಸಮಿತಿ ಸದಸ್ಯ ಡಾ.ಸಿದ್ದರಾಮಯ್ಯ ಮಾತನಾಡಿ, ಕಾಂಗ್ರೆಸ್ ತಮ್ಮ ಸರ್ಕಾರದಲ್ಲಿನ ಭ್ರಷ್ಟಾಚಾರ ಮುಚ್ಚಿಹಾಕಲು ಈ ಹಿಂದೆ ಆಡಳಿತ ನಡೆಸಿದ ಬಿಜೆಪಿ ಸರ್ಕಾರದಲ್ಲಿನ ಹಗರಣಗಳ ಬಯಲಿಗೆ ಎಳೆಯುತ್ತವೇ ಎಂದು ಬ್ಲಾಕ್ ಮೇಲ್ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದರು.
ಸ್ವತಃ ಮುಖ್ಯ ಮಂತ್ರಿಯವರ ಕುಟುಂಬದಲ್ಲೇ ಅಕ್ರಮವಾಗಿ ಮುಡಾ ನಿವೇಶನಗಳ ಬರೆಸಿಕೊಂಡಿರುವುದು ಸಾಕ್ಷಿಕರಿಸುತ್ತಿದೆ. ಇದಲ್ಲದೇ ವಾಲ್ಮೀಕಿ ಪ್ರಾಧಿಕಾರದಲ್ಲಿನ ಹಣದಲ್ಲೂ ಹಗರಣ ನಡೆದು ಬ್ಯಾಂಕ್‌ನಲ್ಲಿ ಹಣ ವರ್ಗಾವಣೆಯಾಗಿ ಈಡಿ ಇಲಾಖೆಗೆ ಸಿಲುಕಿದರೂ ಏನು ಆಗಿಲ್ಲವೇನು ಎಂಬಂತೆ ಕಾಂಗ್ರೆಸ್ ಮುಚ್ಚಿ ಹಾಕುತ್ತಿದ್ದಾರೆ. ಹಾಗಾಗಿ ಪಾದಯಾತ್ರೆ ಮೂಲಕ ಸರ್ಕಾರದ ವಿರುದ್ಧ ಹೋರಾಟವನ್ನು ನಡೆಸಿ ಜನರಿಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್ ಇತರರು ಉಪಸ್ಥಿತರಿದ್ದರು.