ಭದ್ರಾವತಿ: ತಾಲೂಕಿನ ಕಾಚಗೊಂಡನಹಳ್ಳಿ ಗ್ರಾಮದಲ್ಲಿ ಡೈರಿ ಚುನಾವಣೆ ಸಂಬಂಧ ಭಾನುವಾರ ಯಾವುದೇ ರೀತಿಯ ಗಂಭೀರ ಘಟನೆಗಳು ನಡೆದಿಲ್ಲ. ಆದರೂ, ವಿನಾಕಾರಣ ಇಬ್ಬರು ಮುಖಂಡರ ಮೇಲೆ ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲಿಸಿರುವುದು ಸರಿಯಲ್ಲ. ತಕ್ಷಣ ಪ್ರಕರಣ ಹಿಂಪಡೆಯಬೇಕೆಂದು ಆಗ್ರಹಿಸಿ ಸೋಮವಾರ ನಗರದ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆ ಮುಂಭಾಗ ಜೆಡಿಎಸ್ ಮತ್ತು ಬಿಜೆಪಿ ಮುಖಂಡರು, ಕಾರ್ಯಕತರು ಪ್ರತಿಭಟನೆ ನಡೆಸಿದರು.
ಕಾಚಗೊಂಡನಹಳ್ಳಿ ನಿವಾಸಿ ಸಿ.ರವಿಕುಮಾರ್ ಎಂಬವರು ಡೈರಿ ಚುನಾವಣೆ ನಾಮಪತ್ರ ಪರಿಶೀಲನೆ ಸಂದರ್ಭ ಡಿ. ಚಂದ್ರಶೇಖರ್ ಮತ್ತು ಡಿ.ಆನಂದ ಎಂಬವರು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆಂದು ದೂರು ನೀಡಿದ್ದಾರೆ. ಈ ಹಿನ್ನೆಲೆ ಪೊಲೀಸರು ಈ ಇಬ್ಬರ ಮೇಲೆ ಕೊಲೆಯತ್ನ ಪ್ರಕರಣ ದಾಖಲಿಸಿದ್ದಾರೆ ಎಂದು ದೂರಿದರು.ಪೊಲೀಸರು ವಾಸ್ತವಾಂಶ ಪರಿಶೀಲಿಸಿ ಪ್ರಕರಣ ದಾಖಲಿಸಬೇಕು. ಗ್ರಾಮದಲ್ಲಿ ಕೊಲೆಯತ್ನ ಅಥವಾ ಯಾವುದೇ ರೀತಿಯ ಗಂಭೀರ ಪ್ರಕರಣ ನಡೆದಿಲ್ಲ. ವ್ಯಕ್ತಿಯೊಬ್ಬರು ದೂರು ನೀಡಿದ ಮಾತ್ರಕ್ಕೆ ವಿನಾಕಾರಣ ಕೊಲೆಯತ್ನ ಪ್ರಕರಣ ದಾಖಲಿದ್ದು ಸರಿಯಲ್ಲ. ಈ ಸಂಬಂಧ ಸೂಕ್ತ ತನಿಖೆ ಕೈಗೊಂಡು ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಪ್ರಮುಖರಾದ ಆರ್.ಕರುಣಾಮೂರ್ತಿ, ಎಂ.ಎ. ಅಜಿತ್, ಜಿ.ಧರ್ಮಪ್ರಸಾದ್, ಎಚ್.ಬಿ. ರವಿಕುಮಾರ್, ಮಂಗೋಟೆ ರುದ್ರೇಶ್, ಎಂ.ಮಂಜುನಾಥ್, ರಂಗಸ್ವಾಮಿ, ಸಾವಿತ್ರಮ್ಮ ಪುಟ್ಟೇಗೌಡ, ಉಮೇಶ್ ಇನ್ನಿತರರು ಪಾಲ್ಗೊಂಡಿದ್ದರು. - - - -ಡಿ18ಬಿಡಿವಿಟಿ1:ಭದ್ರಾವತಿ ತಾಲೂಕಿನ ಕಾಚಗೊಂಡನಹಳ್ಳಿ ಗ್ರಾಮದಲ್ಲಿ ಡೈರಿ ಚುನಾವಣೆ ಸಂಬಂಧ ಪೊಲೀಸರು ದಾಖಲಿಸಿಕೊಂಡಿರುವ ಕೊಲೆ ಯತ್ನ ಪ್ರಕರಣ ಹಿಂಪಡೆಯಬೇಕೆಂದು ಆಗ್ರಹಿಸಿ ಸೋಮವಾರ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆ ಮುಂಭಾಗ ಜೆಡಿಎಸ್, ಬಿಜೆಪಿಯಿಂದ ಪ್ರತಿಭಟನೆ ನಡೆಯಿತು.