ಪಾದಯಾತ್ರೆ ಯಶಸ್ಸಿಗೆ ಬಿಜೆಪಿ-ಜೆಡಿಎಸ್ ಚನ್ನಪಟ್ಟಣದಲ್ಲಿ ಪ್ರತ್ಯೇಕ ಸಭೆ

KannadaprabhaNewsNetwork | Published : Aug 3, 2024 12:30 AM

ಸಾರಾಂಶ

ಮುಡಾ ಹಗರಣ ವಿರೋಧಿಸಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಪಕ್ಷಗಳು ಹಮ್ಮಿಕೊಂಡಿರುವ ಪಾದಯಾತ್ರೆ ಸಂಬಂಧಿಸಿದಂತೆ ಎರಡು ಪಕ್ಷಗಳು ಪ್ರತ್ಯೇಕವಾಗಿ ಚನ್ನಪಟ್ಟಣದಲ್ಲಿ ಪೂರ್ವಭಾವಿ ಸಭೆ ನಡೆಸಿದವು.

-ಬಿಜೆಪಿ ಯೋಗೇಶ್ವರ್‌ ಅಧ್ಯಕ್ಷತೆ ಸಭೆ ನಡೆಸಿದರೆ, ಜೆಡಿಎಸ್‌ ಜಯಮುತ್ತು ನೇತೃತ್ವದಲ್ಲಿ ಸಭೆಚನ್ನಪಟ್ಟಣ: ಮುಡಾ ಹಗರಣ ವಿರೋಧಿಸಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಪಕ್ಷಗಳು ಹಮ್ಮಿಕೊಂಡಿರುವ ಪಾದಯಾತ್ರೆ ಸಂಬಂಧಿಸಿದಂತೆ ಎರಡು ಪಕ್ಷಗಳು ಪ್ರತ್ಯೇಕವಾಗಿ ಪೂರ್ವಭಾವಿ ಸಭೆ ನಡೆಸಿದವು.

ನಗರದ ೫ನೇ ಅಡ್ಡರಸ್ತೆಯಲ್ಲಿರುವ ಬಿಜೆಪಿ ಕಚೇರಿಯಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಅಧ್ಯಕ್ಷತೆಯಲ್ಲಿ ಬಿಜೆಪಿ ಪೂರ್ವಭಾವಿ ಸಭೆ ನಡೆಸಿದರೆ, ನಗರದ ಪ್ರವಾಸಿ ಮಂದಿರದಲ್ಲಿ ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಎಚ್.ಸಿ. ಜಯಮುತ್ತು ನೇತೃತ್ವದಲ್ಲಿ ತಾಲೂಕು ಜೆಡಿಎಸ್ ಘಟಕದ ಕಾರ್ಯಕರ್ತರ ಪೂರ್ವಭಾವಿ ಸಭೆ ನಡೆಸಿದರು.

ಆಗಸ್ಟ್.೩ ರಂದು ಕೆಂಗೇರಿಯಿಂದ ಪ್ರಾರಂಭಗೊಳ್ಳುವ ಪಾದಯಾತ್ರೆ ೫ನೇ ತಾರೀಕು ಸೋಮವಾರ ತಾಲೂಕಿಗೆ ಆಗಮಿಸಲಿದ್ದು, ಪಾದಯಾತ್ರೆಯನ್ನು ಸ್ವಾಗತಿಸುವುದು. ಕಾರ್ಯಕರ್ತರನ್ನು ಸೇರಿಸುವುದು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಎರಡು ಸಭೆಗಳಲ್ಲಿ ಚರ್ಚೆಯಾಗಿದೆ.

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ರಾಜೀನಾಮೆಯಿಂದ ತೆರವಾಗಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದ್ದು, ಆ ನಿಟ್ಟಿನಲ್ಲಿ ಪಾದಯಾತ್ರೆ ಬಹಳ ಮಹತ್ವ ಪಡೆದುಕೊಂಡಿದ್ದು. ಮೈತ್ರಿ ಪಕ್ಷದಲ್ಲಿ ಟಿಕೆಟ್ ಆಗಿ ಎರಡು ಪಕ್ಷಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆಯುತ್ತಿದ್ದು, ಪಾದಯಾತ್ರೆ ಯಶಸ್ವಿಗೊಳಿಸುವ ಮೂಲಕ ಟಿಕೆಟ್ ಹಂಚಿಕೆಯಲ್ಲಿ ಪಾರಮ್ಯ ಮೆರೆಯಬೇಕೆಂಬ ಇರಾದೆ ಮೈತ್ರಿ ಪಕ್ಷದಲ್ಲಿ ಕಂಡು ಬರುತ್ತಿದೆ.

ಪಾದಯಾತ್ರೆ ಯಶಸ್ಸಿಗೆ ಸಿಪಿವೈ ಕರೆ: ನಗರದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಎಂಎಲ್‌ಸಿ ಸಿ.ಪಿ.ಯೋಗೇಶ್ವರ್, ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ದಿನದಿಂದಲೂ ಬರೀ ಹಗರಣಗಳಲ್ಲೇ ಮುಳುಗಿದೆ. ನೂರಾರು ಕೋಟಿಗಳ ಮುಡಾ ಹಗರಣ ವಿರೋಧಿಸಿ ಪಕ್ಷ ಮೈಸೂರು ಚಲೋ ಪಾದಯಾತ್ರೆ ಹಮ್ಮಿಕೊಂಡಿದ್ದು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುವ ಮೂಲಕ ಪಾದಯಾತ್ರೆ ಯಶಸ್ಸುಗೊಳಿಸುವಂತೆ ಮನವಿ ಮಾಡಿದರು.

ಜಿಲ್ಲೆಯಲ್ಲಿ ಮೂರು ದಿನ ಕಮಲ-ದಳ ಕಾಲ್ನಡಿಗೆ

ವಿಜಯ್ ಕೇಸರಿ

ಕನ್ನಡಪ್ರಭ ವಾರ್ತೆ ಚನ್ನಪಟ್ಟಣವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ, ಮುಡಾ ಹಗರಣ, ದಲಿತರ ಹಣ ಬೇರೆ ಉದ್ದೇಶಕ್ಕೆ ವರ್ಗಾವಣೆ ಮಾಡಿದ್ದನ್ನು ಖಂಡಿಸಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಹಮ್ಮಿಕೊಂಡಿರುವ ಪಾದಯಾತ್ರೆ ರಾಮನಗರ ಜಿಲ್ಲೆಯಲ್ಲಿ ಮೂರು ದಿನ ಸಾಗಲಿದೆ. ಬಿಜೆಪಿ-ಜೆಡಿಎಸ್ ಜಂಟಿ ಪಾದಯಾತ್ರೆ ಬಿಡದಿ, ರಾಮನಗರ, ಚನ್ನಪಟ್ಟಣದ ಮೂಲಕ ಹಾದುಹೋಗಲಿದ್ದು, 4ನೇ ದಿನ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕು ಪ್ರವೇಶಿಸಲಿದೆ. ಪ್ರತಿದಿನ ಸುಮಾರು ೧೬ರಿಂದ ೨೨ ಕಿ.ಮೀ.ನಷ್ಟು ದೂರ ಪಾದಯಾತ್ರೆ ಸಾಗಲಿದೆ. ಪಾದಯಾತ್ರೆ ಸಾಗುವ ಮಾರ್ಗದಲ್ಲಿ ಊಟ, ತಿಂಡಿ ಹಾಗೂ ತಂಗಲು ವ್ಯವಸ್ಥೆ ಮಾಡಲಾಗಿದೆ.ಕೆಂಗೇರಿಯಲ್ಲಿ ಚಾಲನೆ: ಆ.೩ರಂದು ಕೆಂಗೇರಿಯಲ್ಲಿ ಕಹಳೆ ಊದಿ ಪಾದಯಾತ್ರೆಗೆ ಚಾಲನೆ ನೀಡಲಾಗುವುದು. ಅಲ್ಲಿಂದ ಸಾಗುವ ಪಾದಯಾತ್ರೆ ರಾತ್ರಿ ಬಿಡದಿಯ ಮಂಜುನಾಥ ಕನ್ವೆನ್ಸನ್ ಹಾಲ್‌ನಲ್ಲಿ ಮೊದಲ ದಿನದ ವಾಸ್ತವ್ಯ ಹೂಡಲಿದೆ. ಬಿಡದಿಯಲ್ಲಿ 2ನೇ ದಿನದ ಪಾದಯಾತ್ರೆಗೆ ತಮಟೆ ಹೊಡೆದು ಚಾಲನೆ ನೀಡಲಾಗುವುದು. ಬಿಡದಿಯಿಂದ ರಾಮನಗರ ಪ್ರವೇಶಿಸಲಿರುವ ಪಾದಯಾತ್ರೆ ಅಲ್ಲಿಂದ ಚನ್ನಪಟ್ಟಣದ ಕೆವಿಕೆ ಕನ್ವೆನ್ಷನ್ ಹಾಲ್‌ನಲ್ಲಿ ವಾಸ್ತವ್ಯ ಮಾಡಲಿದೆ. ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರ ಸಮಾಧಿಗೆ ಭೇಟಿ ನೀಡಿ ನಮಿಸಿದ ನಂತರ ಮೂರನೇ ದಿನದ ಪಾದಯಾತ್ರೆ ಚನ್ನಪಟ್ಟಣದ ಮೂಲಕ ಸಾಗಿ ನಿಡಘಟ್ಟದ ಬಳಿ ರಾತ್ರಿ ವಾಸ್ತವ್ಯ ಹೂಡಲಿದ್ದು, ಮರುದಿನ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕು ಪ್ರವೇಶಿಲಿಸಿದೆ.ಮೂರು ದಿನ ಪಾದಯಾತ್ರೆ:

ಪಾದಯಾತ್ರೆ ಯಶಸ್ಸಿಗೆ ಸಿದ್ದತೆ: ಜಿಲ್ಲೆಯಲ್ಲಿ ಮೂರು ದಿನ ಸಾಗಲಿರುವ ಪಾದಯಾತ್ರೆಯನ್ನು ಯಶಸ್ಸುಗೊಳಿಸಿ ಬಿಜೆಪಿ-ಹಾಗೂ ಜೆಡಿಎಸ್ ಮುಖಂಡರು ಕಾರ್ಯತಂತ್ರ ಹೆಣೆಯುತ್ತಿದ್ದಾರೆ. ಜಿಲ್ಲೆಯ ಐದು ತಾಲೂಕುಗಳ ಎರಡು ಪಕ್ಷದ ಮುಖಂಡರು ನಗರ ಹಾಗೂ ಗ್ರಾಮಾಂತರ ಪ್ರದೇಶದ ಕಾರ್ಯಕರ್ತರ ಸಭೆಗಳನ್ನು ನಡೆಸಿ ಪಾದಯಾತ್ರೆಯಲ್ಲಿ ಭಾಗವಹಿಸುವ ಹಾಗೂ ಪಾದಯಾತ್ರೆ ಯಶಸ್ಸಿಗೆ ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ಚರ್ಚೆ ನಡೆಸಿದ್ದಾರೆ. ಐದು ಬ್ಲಾಕ್‌ನಲ್ಲಿ ಪಾದಯಾತ್ರೆ: ಇನ್ನು ಪಾದಯಾತ್ರೆ ಐದು ಬ್ಲಾಕ್‌ನಲ್ಲಿ ಸಾಗಲಿದೆ. ಎ ಬ್ಲಾಕ್‌ನಲ್ಲಿ ಧ್ವನಿವರ್ಧಕ ಜೀಪ್, ಪಾದಯಾತ್ರೆ ಬ್ಯಾನರ್,ಕಲಾತಂಡ, ಪಾದಯಾತ್ರೆ ತಂಡ, ೨ ಕಲರ್ ಧ್ವಜ ಇರಲಿದೆ. ಬಿ ಬ್ಲಾಕ್‌ನಲ್ಲಿ ಟ್ಯಾಬ್ಲೋ, ಡಿ.ಜೆ. ವಾಹನ ಮಾಧ್ಯಮ, ರಾಜ್ಯ ಅಧ್ಯಕ್ಷರ ತಂಡ ಮಹಿಳಾ ತಂಡ೫೦ ದೊಡ್ಡ ಧ್ವಜ, ಪಾದಯಾತ್ರೆ ತಂಡ ಸಾಗಲಿದೆ. ಸಿ ಬ್ಲಾಕ್‌ನಲ್ಲಿ ಡಿ.ಜೆ. ವಾಹನ೫೦ ದೊಡ್ಡ ಧ್ವಜ, ಶಾಸಕರು, ಮಾಜಿ ಶಾಸಕರು, ಪದಾಧಿಕಾರಿಗಳು ೧೦೦೦ ಜನರ ಪಾದಯಾತ್ರೆ ತಂಡ ಸಾಗಲಿದೆ. ಡಿ ಬ್ಲಾಕ್‌ನಲ್ಲಿ ರಿಲ್ಯಾಕ್ಸ್ ವಾಹನ, ಸಾಮಾಗ್ರಿ ವಾಹನ, ಸ್ನಾಕ್ಸ್ ವಾಹನ, ಕುಡಿಯುವ ನೀರು, ಅಂಬುಲೆನ್ಸ್ ಹಾಗೂ ಇ ಬ್ಲಾಕ್‌ನಲ್ಲಿ ವೈಯುಕ್ತಿಕ ವಾಹನ ಸ್ವಚ್ಛತಾ ವಾಹನ ಸಾಗಲಿದೆ. ಊಟ ತಿಂಡಿಗೆ ಸಮಯ ನಿಗದಿಇನ್ನು ಆ.೩ರಂದು ಮೊದಲ ದಿನ ಕೆಂಗೇರಿಯಲ್ಲಿ ೧೦ ಗಂಟೆಗೆ ಮೊದಲ ದಿನದ ಪಾದಯಾತ್ರೆ ಪ್ರಾರಂಭಗೊಳ್ಳಿಲಿದೆ. ಆ ನಂತರ ಪ್ರತಿದಿನ ಪಾದಯಾತ್ರಿಗಳಿಗೆ ಬೆಳಗ್ಗೆ ೬.೩೦ಕ್ಕೆ ಕಾಫಿ, ಟೀ ವ್ಯವಸ್ಥೆ, ೭.೩೦ಕ್ಕೆ ಬೆಳಗ್ಗಿನ ಉಪಾಹಾರ ನೀಡಿದ ನಂತರ ಪ್ರತಿದಿನ ೮.೪೫ಕ್ಕೆ ಪಾದಯಾತ್ರೆ ಪ್ರಾರಂಭಗೊಳ್ಳಲಿದೆ. ಬೆಳಗ್ಗೆ ೧೦.೪೫ಕ್ಕೆ ಒಮ್ಮೆ ಕಾಫಿ, ಟೀ ವ್ಯವಸ್ಥೆಯ ನಂತರ ಮಧ್ಯಾಹ್ನ ೧೨.೩೦ರಿಂದ ೩ ಗಂಟೆವರೆಗೆ ಭೋಜನ ವಿರಾಮವಿರಲಿದೆ. ೩.೩೦ಕ್ಕೆ ಪಾದಯಾತ್ರೆ ಪುನಾರಂಭಗೊಂಡು ೫ ಗಂಟೆಗೆ ಕಾಫಿ, ಟೀಗೆ ಬ್ರೇಕ್ ನೀಡಲಾಗುವುದು. ರಾತ್ರಿ ೮ಗಂಟೆಗೆ ನಿಗದಿತ ಸ್ಥಳದಲ್ಲಿ ಭೋಜನದ ನಂತರ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಉಪ ಚುನಾವಣೆ ಹಿನ್ನೆಲೆ ಮಹತ್ವ ಪಡೆದ ಪಾದಯಾತ್ರೆಇನ್ನು ಜಿಲ್ಲೆಯಲ್ಲಿ ಹಾದು ಹೋಗಲಿರುವ ಬಿಜೆಪಿ-ಜೆಡಿಎಸ್ ಪಾದಯಾತ್ರೆ ಚನ್ನಪಟ್ಟಣದ ಉಪ ಚುನಾವಣೆಯಲ್ಲಿ ಹಿನ್ನೆಲೆಯಲ್ಲಿ ಭಾರಿ ಮಹತ್ವ ಪಡೆದುಕೊಂಡಿದೆ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯಿಂದ ತೆರವಾಗಿರುವ ಚನ್ನಪಟ್ಟಣ ವಿಧಾನಸಭೆಗೆ ಉಪಚುನಾವಣೆ ನಡೆಯಬೇಕಿದೆ. ಯಾವಾಗ ಬೇಕಾದರೂ ಉಪಚುನಾವಣೆಯ ದಿನಾಂಕ ಘೋಷಣೆಯಾಗಬಹುದು ಎಂಬ ವಾತಾವರಣವಿದೆ. ಇದೇ ಹೊತ್ತಿನಲ್ಲಿ ಚನ್ನಪಟ್ಟಣದ ಮೂಲಕ ಪಾದಯಾತ್ರೆ ಸಾಗಲಿರುವುದು ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಪಾದಯಾತ್ರೆಯಿಂದ ಮೈತ್ರಿ ಪಕ್ಷಕ್ಕೆ ಯಾವ ರೀತಿಯ ಲಾಭವಾಗಬಹುದು ಎಂಬ ಲೆಕ್ಕಾಚಾರ ರಾಜಕೀಯ ವಲಯದಲ್ಲಿ ನಡೆದಿದೆ. ಡಿಸಿಎಂ ತವರು ಜಿಲ್ಲೆಯಿಂದ ಸಿಎಂ ಜಿಲ್ಲೆಗೆಇನ್ನು ಪಾದಯಾತ್ರೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ತವರು ಜಿಲ್ಲೆಯಿಂದ ಸಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರು ಜಿಲ್ಲೆ ಮೈಸೂರು ಪ್ರವೇಶಿಸಲಿದೆ. ಚನ್ನಪಟ್ಟಣದ ಉಪಚುನಾವಣೆ ಹೊಣೆ ಹೊತ್ತ ಡಿ.ಕೆ.ಶಿವಕುಮಾರ್ ಅವರ ತವರು ಜಿಲ್ಲೆಯ ಮೂಲಕವೇ ಪಾದಯಾತ್ರೆ ಸಾಗಲಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಇನ್ನು ಪಾದಯಾತ್ರೆ ಸಾಗುವ ಮಾರ್ಗದಲ್ಲಿ ಒಂದು ದಿನ ಮೊದಲು ಕಾಂಗ್ರೆಸ್ ಸಹ ಜನಾದೋಲನ ಸಭೆಗಳನ್ನು ಆಯೋಜಿಸಿದ್ದು, ಪಾದಯಾತ್ರೆಯ ಲಾಭ ನಷ್ಟಗಳ ಕುರಿತು ವ್ಯಾಪಕ ಚರ್ಚೆಗಳು ನಡೆದಿವೆ. ಯೋಗೇಶ್ವರ್ ಸಾಂಕೇತಿಕವಾಗಿ ಭಾಗಿ?ಪಾದಯಾತ್ರೆಯಲ್ಲಿ ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಪೂರ್ಣಪ್ರಮಾಣದಲ್ಲಿ ಭಾಗಿಯಾಗದೇ ಕೇವಲ ಸಾಂಕೇತಿಕವಾಗಿ ಮಾತ್ರ ಭಾಗಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಯೋಗೇಶ್ವರ್ ತಂದೆ ನಿಧನ ಹೊಂದಿದ ಹಿನ್ನೆಲೆಯಲ್ಲಿ ತಂದೆಯ ಉತ್ತರಾಧಿಕ್ರಿಯೆ ನಡೆಸಬೇಕಿರುವ ಕಾರಣ ಅವರು ಪೂರ್ಣ ಪ್ರಮಾಣದಲ್ಲಿ ಪಾದಯಾತ್ರೆಯಲ್ಲಿ ತೊಡಗಿಸಿಕೊಳ್ಳುವುದಿಲ್ಲ ಎನ್ನಲಾಗಿದೆ. ಇದರೊಂದಿಗೆ ಉಪಚುನಾವಣೆ ಟಿಕೆಟ್ ಕುರಿತು ಬಿಜೆಪಿ ಮುಖಂಡರು ತಮ್ಮ ಬೆನ್ನಿಗೆ ನಿಲ್ಲುತ್ತಿಲ್ಲ ಎಂಬ ಕೋಪ ಸಹ ಯೋಗೇಶ್ವರ್‌ಗೆ ಇದೆ ಎನ್ನಲಾಗಿದ್ದು, ಪಾದಯಾತ್ರೆಯಲ್ಲಿ ಚನ್ನಪಟ್ಟಣದಲ್ಲಿ ಮಾತ್ರ ಸಾಂಕೇತಿಕವಾಗಿ ಪಾಲ್ಗೊಳ್ಳುವ ಸಾಧ್ಯತೆ ಇದೆ ಎನ್ನವ ಮಾತುಗಳು ಕೇಳಿಬರುತ್ತಿವೆ.

Share this article