ನಿಖಿಲ್‌ ನಾಮಪತ್ರ ವೇಳೆ ಬಿಜೆಪಿ ಜೆಡಿಎಸ್‌ ಶಕ್ತಿಪ್ರದರ್ಶನ

KannadaprabhaNewsNetwork |  
Published : Oct 26, 2024, 01:06 AM IST
ಪೊಟೋ೨೫ಸಿಪಿಟಿ೧: ಚನ್ನಪಟ್ಟಣ ತಾಲೂಕು ಕಚೇರಿಯಲ್ಲಿ ಚುನಾವಣಾಧಿಕಾರಿಗೆ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಸಿದರು. | Kannada Prabha

ಸಾರಾಂಶ

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಜೆಡಿಎಸ್‌-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಸಾವಿರಾರು ಅಭಿಮಾನಿಗಳ ಜತೆ ಭರ್ಜರಿ ರೋಡ್ ಶೋ ನಡೆಸುವ ಮೂಲಕ ನಾಮಪತ್ರ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಚನ್ನಪಟ್ಟಣ

ಹೈವೊಲ್ಟೇಜ್ ಕ್ಷೇತ್ರವೆಂದೇ ಬಿಂಬಿತವಾಗಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಜೆಡಿಎಸ್‌-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.

ನಗರದ ತಾಲೂಕು ಕಚೇರಿಗೆ ಅಪಾರ ಬೆಂಬಲಿಗರೊಂದಿಗೆ ಶುಕ್ರವಾರ ಮಧ್ಯಾಹ್ನ ೧.೩೦ಕ್ಕೆ ಆಗಮಿಸಿದ ನಿಖಿಲ್ ಕುಮಾರಸ್ವಾಮಿ ಮೂರು ಪ್ರತ್ಯೇಕ ಪ್ರತಿಗಳೊಂದಿಗೆ ಉಮೇದುವಾರಿಕೆ ಸಲ್ಲಿಸಿದರು.

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ ಡಿ.ವಿ.ಸದಾನಂದಗೌಡ, ಸಂಸದ ಬಿ.ವೈ.ರಾಘವೇಂದ್ರ, ಪತ್ನಿ ರೇವತಿ ಅವರೊಂದಿಗೆ ಒಂದು ಪ್ರತಿ ನಾಮಪತ್ರ, ಸಂಸದ ಡಾ.ಮಂಜುನಾಥ್, ರಾಜ್ಯಸಭೆ ಸದಸ್ಯ ಲೆಹರ್‌ಸಿಂಗ್, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಅಜಯ್, ಮುಖಂಡ ಪ್ರಸನ್ನ ಪಿ.ಗೌಡ ಅವರೊಂದಿಗೆ ಎರಡನೇ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕುಕ್ಕೂರುದೊಡ್ಡಿ ಜಯರಾಮು, ಒಕ್ಕಲಿಗರ ಸಂಘದ ರಾಜ್ಯಾಧ್ಯಕ್ಷ, ಹಾಪ್‌ಕಾಮ್ಸ್ ದೇವರಾಜು ಅವರೊಂದಿಗೆ ಮೂರನೇ ಪ್ರತಿ ನಾಮಪತ್ರ ಸಲ್ಲಿಸಿದರು.

ಟೆಂಪಲ್ ರನ್: ನಾಮಪತ್ರ ಸಲ್ಲಿಕೆಗೆ ಚನ್ನಪಟ್ಟಣಕ್ಕೆ ಆಗಮಿಸುವ ಮುನ್ನ ಬೆಂಗಳೂರಿನ ಜೆ.ಪಿ.ನಗರದ ಶ್ರೀ ತಿರುಮಲಗಿರಿ ವೆಂಕಟರಮಣ ದೇವಸ್ಥಾನದಲ್ಲಿ ಪತ್ನಿಯೊಂದಿಗೆ ಪೂಜೆ ಸಲ್ಲಿಸಿದ ನಿಖಿಲ್, ನಂತರ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಆಶೀರ್ವಾದ ಪಡೆದುಕೊಂಡರು. ತರುವಾಯ ಚನ್ನಪಟ್ಟಣಕ್ಕೆ ಆಗಮಿಸಿದ ಅವರು ತಂದೆ ಎಚ್.ಡಿ.ಕುಮಾರಸ್ವಾಮಿ ಹಾಗೂ ಪತ್ನಿಯೊಂದಿಗೆ ಶ್ರೀ ಕೆಂಗಲ್ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.

ಶಕ್ತ ಪ್ರದರ್ಶನ: ನಾಮಪತ್ರ ಸಲ್ಲಿಕೆಗೂ ಮುನ್ನ ಸಾವಿರಾರು ಅಭಿಮಾನಿಗಳ ಜತೆ ಭರ್ಜರಿ ರೋಡ್ ಶೋ ನಡೆಸುವ ಮೂಲಕ ಶಕ್ತಿ ಪ್ರದರ್ಶಿಸಿದರು. ಕೆಂಗಲ್ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ನಗರದ ಶೇರ್ವಾ ಹೋಟೆಲ್ ಬಳಿಯಿಂದ ಅದ್ಧೂರಿ ಮೆರವಣಿಗೆ ಮೂಲಕ ತೆರದ ವಾಹನದಲ್ಲಿ ತಾಲೂಕು ಕಚೇರಿವರೆಗೆ ಬಂದರು.

ಈ ವೇಳೆ ಜೆಡಿಎಸ್ ಕಾರ್ಯಕರ್ತರು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ನಿಖಿಲ್ ಪರ ಜಯಘೋಷ ಮೊಳಗಿಸಿದರು. ಇನ್ನು ನಿಖಿಲ್ ನಾಮಪತ್ರ ಸಲ್ಲಿಕೆ ವೇಳೆ ಜೆಡಿಎಸ್-ಬಿಜೆಪಿ ಒಕ್ಕಲಿಗ ಹಾಲಿ ಮಾಜಿ ಶಾಸಕರ ದಂಡೇ ನೆರೆದಿತ್ತು. ಮೆರವಣಿಯಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ ಸದಾನಂದಗೌಡ, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಸಂಸದರಾದ ಡಾ.ಮಂಜುನಾಥ್, ಬಿ.ವೈ.ರಾಘವೇಂದ್ರ, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಡಾ.ಸುಧಾಕರ್, ಶಾಸಕ ಅಶ್ವತ್ಥನಾರಾಯಣ್, ವಿಧಾನಪರಿಷತ್ ಸದಸ್ಯ ವಿಶ್ವನಾಥ್, ಮಾಜಿ ಶಾಸಕ ಎಂ.ಮಂಜು ಸೇರಿ ಹಲವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ