ಹೊಸಪೇಟೆ: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಹಗರಣ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಬಿಜೆಪಿ ವಿಜಯನಗರ ಜಿಲ್ಲಾ ಘಟಕ, ಜಿಲ್ಲಾ ಎಸ್ಟಿ ಮೋರ್ಚಾ ನೇತೃತ್ವದಲ್ಲಿ ನಗರದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಯಿತು.
ಹಡಗಲಿ ಶಾಸಕ ಕೃಷ್ಣ ನಾಯ್ಕ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿ, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಬಹುಕೋಟಿ ಅವ್ಯವಹಾರ ಅಕ್ಷಮ್ಯ ಅಪರಾಧವಾಗಿದೆ. ಅಂಬೇಡ್ಕರ್ ನಿಗಮದಲ್ಲೂ ಅವ್ಯವಹಾರ ನಡೆದಿರಬಹುದು ಶಂಕಿಸಲಾಗಿದೆ. ರಾಜ್ಯ ಸರ್ಕಾರ ಕೂಡಲೇ ಎಲ್ಲ ನಿಗಮಗಳ ಕುರಿತು ಎಸ್‌ಐಟಿ ರಚನೆ ಮಾಡಬೇಕು. ನಿಗಮಗಳ ಹಣವನ್ನೇ ನೇರ ದುರ್ಬಳಕೆ ಮಾಡಲಾಗಿದೆ. ಇದು ಘೋರ ದುರಂತವಾಗಿದೆ ಎಂದರು.
ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್ ಮಾತನಾಡಿ, ಸರ್ಕಾರದ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿರುವುದನ್ನು ಕೇಳಿದ್ದೇವೆ. ಆದರೆ, ನಿಗಮದ ಹಣವನ್ನೇ ನೇರ ದುರ್ಬಳಕೆ ಮಾಡಲಾಗಿದೆ. ತೆಲಂಗಾಣದ ಸಹಕಾರ ಬ್ಯಾಂಕೊಂದಕ್ಕೆ ಕೋಟ್ಯಂತರ ರು. ವರ್ಗಾವಣೆಯಾಗಿದೆ. ಇದು ಗಂಭೀರ ಪ್ರಕರಣವಾಗಿದೆ. ದಲಿತರು, ಬಡವರ ಹಣವನ್ನು ನುಂಗಿ ಹಾಕಿದ ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಸದನದ ಒಳಗೂ, ಹೊರಗೂ ಹೋರಾಟ ನಡೆಸಲಿದೆ. ಬಡವರಿಗೆ ನ್ಯಾಯ ಒದಗಿಸಲಾಗುವುದು ಎಂದರು.ಮುಖಂಡ ಜಂಬಯ್ಯ ನಾಯಕ ಮಾತನಾಡಿ, ಬಹುಕೋಟಿ ಹಗರಣದಲ್ಲಿ ಈಗಾಗಲೇ ₹13 ಕೋಟಿ ಜಪ್ತಿ ಮಾಡಲಾಗಿದೆ. ಇನ್ನುಳಿದ ₹70 ಕೋಟಿ ಜಮೆ ಮಾಡಬೇಕಿದೆ. ಎಸ್ಟಿ ಸಮಾಜ ತೀರಾ ಹಿಂದುಳಿದಿದೆ. ಸರ್ಕಾರ ಈ ಸಮಾಜದ ಅಭಿವೃದ್ಧಿ ಮಾಡುವುದನ್ನು ಬಿಟ್ಟು, ಅಭಿವೃದ್ಧಿಗಾಗಿ ಮೀಸಲಿಟ್ಟ ಹಣವನ್ನೇ ಲೋಕಸಭಾ ಚುನಾವಣೆಗೆ ಬಳಕೆ ಮಾಡಿರುವುದು ಸರಿಯಲ್ಲ ಎಂದರು.
ರಾಜ್ಯ ಯುವಮೋರ್ಚಾ ಕೋಶಾಧ್ಯಕ್ಷ ಸಿದ್ಧಾರ್ಥ್ ಸಿಂಗ್, ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಜಗದೀಶ್ ಕಮಟಗಿ, ಮುಖಂಡರಾದ ಬಲ್ಲಾಹುಣ್ಸಿ ರಾಮಣ್ಣ, ಮರಿಯಮ್ಮನಹಳ್ಳಿ ಕೃಷ್ಣ ನಾಯ್ಕ, ಕಾಸಟಿ ಉಮಾಪತಿ, ಸಂದೀಪ್ ಸಿಂಗ್, ಅಶೋಕ್ ಜೀರೆ, ಅಯ್ಯಾಳಿ ತಿಮ್ಮಪ್ಪ, ಸಾಲಿ ಸಿದ್ಧಯ್ಯಸ್ವಾಮಿ,, ಸಂಜೀವರೆಡ್ಡಿ, ಕೆ.ಎಸ್. ರಾಘವೇಂದ್ರ, ಕಿಚಡಿ ಕೊಟ್ರೇಶ್, ಶಂಕರ್ ಮೇಟಿ, ನಾಗರಾಜ್, ಶಶಿಧರ, ಬೆಣಕಲ್ಲ್ ಪ್ರಕಾಶ್, ಲಕ್ಷ್ಮಣ್, ದೀನಾ ಮಂಜುನಾಥ, ಭಾರತಿ ಪಾಟೇಲ್,ಕವಿತಾ ಇದ್ದರು.