ಬೆಂಗಳೂರು : ‘ತಾವು ಯುದ್ಧದ ಪರ ಅಲ್ಲ’ ಮತ್ತು ‘ಹೋದ ಜೀವಗಳನ್ನು ವಾಪಸ್ ತರಲು ಸಾಧ್ಯವಿಲ್ಲ’ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಯನ್ನು ಪ್ರತಿಪಕ್ಷ ಬಿಜೆಪಿ ತೀವ್ರವಾಗಿ ಖಂಡಿಸಿದ್ದು, ತಕ್ಷಣ ಸಿದ್ದರಾಮಯ್ಯ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು ಮುಖ್ಯಮಂತ್ರಿಯವರ ಹೇಳಿಕೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬಿ.ವೈ.ವಿಜಯೇಂದ್ರ, ಮುಖ್ಯಮಂತ್ರಿಗಳ ಹೇಳಿಕೆಯು ಪಲಾಯನವಾದಿ ನಿಲುವು ಪ್ರಕಟಿಸಿದಂತಾಗಿದ್ದು, ದೇಶದ ಸೈನಿಕರ ನೈತಿಕ ಸ್ಥೈರ್ಯ ಕುಗ್ಗಿಸಲು ಹೊರಟಿದ್ದಾರೆ. ಭಾರತ ಎಂದೂ ಯುದ್ಧ ದಾಹ ಪ್ರದರ್ಶಿಸಿಲ್ಲ, ಇತಿಹಾಸವನ್ನು ಅವಲೋಕಿಸಿದಾಗಲೆಲ್ಲ ಪಾಕಿಸ್ತಾನ ಕಾಲು ಕೆರೆದು ಭಾರತವನ್ನು ಕೆಣಕಿದ ಪರಿಣಾಮವಾಗಿಯೇ ಯುದ್ಧ ನಡೆದಿದೆ ಎಂದು ಕಿಡಿಕಾರಿದ್ದಾರೆ.
ಇಡೀ ದೇಶವೇ ಕಾಶ್ಮೀರದಲ್ಲಿ ನಡೆದ ಹಿಂದೂಗಳ ಹತ್ಯೆಗೆ ಮಮ್ಮಲ ಮರುಗುತ್ತಿದೆ. ಪಾಕಿಸ್ತಾನದ ಚಿತಾವಣೆ ಹಾಗೂ ಪಿತೂರಿಯ ಮುಖವಾಡಗಳೆನಿಸಿದ ರಣಹೇಡಿ ಉಗ್ರರ ಪೈಶಾಚಿಕ ವರ್ತನೆಯಿಂದ ಶತಕೋಟಿ ಭಾರತೀಯರು ಆಕ್ರೋಶಭರಿತರಾಗಿದ್ದಾರೆ. ಇಂಥ ಸಮಯದಲ್ಲಿ ಭಾರತದ ಏಕತೆಗೆ ದನಿಗೂಡಿಸಬೇಕಾದ ಕಾಂಗ್ರೆಸ್ಸಿಗರು ಮೊಸರಲ್ಲಿ ಕಲ್ಲು ಹುಡುಕುವ ಕೀಳು ರಾಜಕೀಯ ಅಭಿರುಚಿಯ ಹೇಳಿಕೆ ನೀಡುತ್ತಿರುವುದು ದುರ್ದೈವದ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯುದ್ಧ ಭಾರತದ ಆದ್ಯತೆಯಲ್ಲ ಎಂಬುದು ಎಷ್ಟು ಮುಖ್ಯವೋ ರಾಷ್ಟ್ರದ ಸುರಕ್ಷತೆ, ಭಾರತೀಯರ ಅಮೂಲ್ಯ ಜೀವಗಳ ರಕ್ಷಣೆ ಅದಕ್ಕಿಂತಲೂ ಮುಖ್ಯ ಎಂಬುದು ಕೇಂದ್ರ ಸರ್ಕಾರದ ಧ್ಯೇಯ. ಇದಕ್ಕೆ ಸಮಗ್ರ ಭಾರತೀಯರೆಲ್ಲರ ಒಕ್ಕೊರಲಿನ ಬೆಂಬಲವೂ ಮೊಳಗುತ್ತಿದೆ. ಈ ನಿಟ್ಟಿನಲ್ಲಿ ಪ್ರಾಣ ತೆತ್ತ ಅಮಾಯಕ ಜೀವಗಳ ಆತ್ಮಕ್ಕೆ ಶಾಂತಿ ನೀಡಲು, ನೊಂದ ಕುಟುಂಬಗಳಿಗೆ ನ್ಯಾಯ ಒದಗಿಸಲು, ಮುಂದೆಂದೂ ಭಾರತ ಹಾಗೂ ಭಾರತೀಯರ ಮೇಲೆ ಚಿತಾವಣೆ, ಆಕ್ರಮಣಗಳು ನಡೆಯದಿರಲು ಕೇಂದ್ರ ಸರ್ಕಾರ ತೆಗೆದುಕೊಳ್ಳುವ ಯಾವುದೇ ನಿರ್ಧಾರವನ್ನು ಬೆಂಬಲಿಸಬೇಕಾಗಿರುವುದು ಮುಖ್ಯಮಂತ್ರಿಗಳ ಆದ್ಯತೆಯಾಗಬೇಕು. ಇದನ್ನು ಮುಖ್ಯಮಂತ್ರಿಗಳು ಅರ್ಥಮಾಡಿಕೊಂಡು ದೇಶದ ಸುರಕ್ಷತೆಯ ವಿಷಯದಲ್ಲಿ ರಾಜಕೀಯ ಪ್ರೇರಿತ ಟೊಳ್ಳು ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.
ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ದೇಶ ಸಂಕಷ್ಟದಲ್ಲಿರುವ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತು ಆಘಾತ ತಂದಿದೆ. ಉಗ್ರರ ದಾಳಿ ಖಂಡಿಸಿ ದೇಶಾದ್ಯಂತ ಜನರು ಪ್ರತಿಭಟನೆ ನಡೆಸುತ್ತಿರುವಾಗ, ಹೋದ ಜೀವಗಳನ್ನು ವಾಪಸ್ ತರಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇದೇ ಘಟನೆ ಅವರ ಕುಟುಂಬಕ್ಕೆ ಆಗಿದ್ದರೆ ಅವರ ಮಾತು ಹೀಗೆ ಇರುತ್ತಿರಲಿಲ್ಲ.
ಕರುಣೆ ಇಲ್ಲದೆಯೇ ಈ ರೀತಿ ಮಾತನಾಡಿ, ಬಳಿಕ ಸಂತ್ರಸ್ತರ ಮನೆಗೆ ಭೇಟಿ ನೀಡಿದ್ದಾರೆ. ದೇಶಕ್ಕೇನಾದರೂ ಆಗಲಿ ಪರವಾಗಿಲ್ಲ, ಮತ ಸಿಕ್ಕಿದರೆ ಸಾಕು ಎಂಬ ಮನಸ್ಥಿತಿಗೆ ಸಿದ್ದರಾಮಯ್ಯ ಬಂದಿರುವುದು ನಾಚಿಕೆಗೇಡಿನ ಸಂಗತಿ. ಅವರು ಯಾವುದೇ ಸಿದ್ಧಾಂತ ಇಲ್ಲದ ವ್ಯಕ್ತಿಯಾಗಿದ್ದು, ಜನತೆಯ ಬಳಿಕ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು. ಭಟ್ಕಳದಲ್ಲಿ ಪಾಕಿಸ್ತಾನದ ಸುಮಾರು 12 ಪ್ರಜೆಗಳಿದ್ದಾರೆ.
ಕೇಂದ್ರ ಸರ್ಕಾರ ಹೊರಗೆ ಹಾಕಿ ಎಂದು ಸೂಚಿಸಿದ್ದರೂ, ರಾಜ್ಯ ಸರ್ಕಾರ ಏನೂ ಮಾಡಿಲ್ಲ. ಕಲಬುರಗಿಯಲ್ಲಿ ಪಾಕಿಸ್ತಾನದ ಧ್ವಜ ರಸ್ತೆಗೆ ಅಂಟಿಸಿದರೆ ಮುಸ್ಲಿಂ ಮಹಿಳೆಯರು ಅದನ್ನು ತೆಗೆದುಹಾಕಿದ್ದಾರೆ. ನಮ್ಮ ದೇಶದ ಒಳಗೆಯೇ ಶತ್ರುಗಳಿದ್ದಾರೆ. ಇಂತಹ ಮೀರ್ ಸಾಧಿಕ್ ಗಳ ಕಡೆಗೆ ಗಮನಹರಿಸಬೇಕು. ಪಾಕಿಸ್ತಾನಕ್ಕೆ ಅಪಮಾನ ಮಾಡಿದ ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಇದರಿಂದ ಕಾಂಗ್ರೆಸ್‌ನ ಬಣ್ಣ ಬಯಲಾಗಿದೆ ಎಂದು ತಿಳಿಸಿದರು.ಇನ್ನು, ಭಾರತೀಯ ಯೋಧರು ಹಾಗೂ ಗುಪ್ತಚರ ಸಂಸ್ಥೆ ಕೆಲಸ ಮಾಡುತ್ತಿರುವುದರಿಂದಲೇ ಕಾರ್ಮಿಕ ಸಚಿವ ಸಂತೋಷ್ ಲಾಡ್ ಆರಾಮವಾಗಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ಕಾಂಗ್ರೆಸ್ ಮೈತ್ರಿ ಸರ್ಕಾರವೇ ಇದೆ. ಅಲ್ಲಿನ ಸರ್ಕಾರವನ್ನೇ ಇವರು ಪ್ರಶ್ನೆ ಮಾಡಬೇಕಿದೆ. ದೇಶಕ್ಕೆ ಸಂಕಷ್ಟ ಬಂದಾಗ ಹೇಗಿರಬೇಕೆಂದು ಕಾಂಗ್ರೆಸ್ ನಾಯಕರು ಕಲಿಯಬೇಕು. ಇವರೆಲ್ಲರ ಹೇಳಿಕೆಯನ್ನು ಜನರು ಗಮನಿಸಿದ್ದಾರೆ ಎಂದರು.