100 ಕೋಟಿ ಆಮಿಷವೊಡುತ್ತಿದ್ದಾರೆ ಎಂದು ಆರೋಪ : ರವಿ ಗಣಿಗ ವಿರುದ್ಧ ಪೊಲೀಸರಿಗೆ ಬಿಜೆಪಿ ನಾಯಕ ದೂರು

KannadaprabhaNewsNetwork |  
Published : Aug 26, 2024, 01:31 AM ISTUpdated : Aug 26, 2024, 07:36 AM IST
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಮಾತನಾಡಿದರು. | Kannada Prabha

ಸಾರಾಂಶ

 ಮಂಡ್ಯ ಕಾಂಗ್ರೆಸ್‌ ಶಾಸಕ ರವಿಕುಮಾರ ಗೌಡ (ರವಿ ಗಣಿಗ) ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ ಅಡಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್‌ ಇಲ್ಲಿನ ಉಪನಗರ ಠಾಣೆಗೆ ದೂರು ಸಲ್ಲಿಸಿದ್ದಾರೆ.

 ಹುಬ್ಬಳ್ಳಿ :  ರಾಜ್ಯ ಸರ್ಕಾರ ಕೆಡವಲು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮತ್ತು ಇತರ ಮುಖಂಡರು ಕಾಂಗ್ರೆಸ್ ಶಾಸಕರಿಗೆ ₹50ರಿಂದ ₹100 ಕೋಟಿ ಆಮಿಷವೊಡುತ್ತಿದ್ದಾರೆ ಎಂದು ಆರೋಪಿಸಿರುವ ಮಂಡ್ಯ ಕಾಂಗ್ರೆಸ್‌ ಶಾಸಕ ರವಿಕುಮಾರ ಗೌಡ (ರವಿ ಗಣಿಗ) ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ ಅಡಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್‌ ಇಲ್ಲಿನ ಉಪನಗರ ಠಾಣೆಗೆ ದೂರು ಸಲ್ಲಿಸಿದ್ದಾರೆ.

ಇದಕ್ಕೂ ಮುನ್ನ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ರವಿಕುಮಾರ್‌ ಅವರ ಆರೋಪ ಸತ್ಯಕ್ಕೆ ದೂರವಾಗಿದೆ. ಭ್ರಷ್ಟಾಚಾರ ತಡೆ ಕಾಯ್ದೆ ಪ್ರಕಾರ ಲಂಚ ಕೊಡುವುದು, ಲಂಚ ಪಡೆಯುವುದು, ಲಂಚದ ಮಾಹಿತಿ ಮುಚ್ಚಿಡುವುದು ಅಪರಾಧ. ಹೀಗಾಗಿ ಅವರು ಯಾರು, ಯಾವಾಗ ಎಲ್ಲಿ ಆಮಿಷವೊಡ್ಡಿದ್ದಾರೆ? ಮುಂಗಡವಾಗಿ ಎಷ್ಟು ಹಣ ಕೊಟ್ಟಿದ್ದಾರೆ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಸವಾಲು ಹಾಕಿದರು.

ಸರ್ಕಾರ ಬೀಳಿಸುವ ಯಾವುದೇ ಪ್ರಯತ್ನ ಬಿಜೆಪಿ ಮಾಡುತ್ತಿಲ್ಲ. ರವಿಕುಮಾರ್‌ ಅವರು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಸೇರಿ ನಮ್ಮ ಪಕ್ಷದ ನಾಯಕರ ಹೆಸರು ದುರ್ಬಳಕೆ ಮಾಡಿಕೊಂಡಿದ್ದಾರೆ. ಅವರು ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ತಮ್ಮ ನಾಲಿಗೆ ಹರಿಬಿಡಬಾರದು ಎಂದು ಕಿಡಿಕಾರಿದರು.

ಸರ್ಕಾರದ ವೈಫಲ್ಯಗಳನ್ನು ಮುಚ್ಚಿಕೊಳ್ಳಲು, ಜನರಲ್ಲಿ ಗೊಂದಲ ಸೃಷ್ಟಿಸುವ ಉದ್ದೇಶದಿಂದ ಇಂಥ ಹೇಳಿಕೆ ನೀಡುತ್ತಿದ್ದಾರೆ. ಕಾಂಗ್ರೆಸ್ ಶಾಸಕರು ಕೆಲ ಸಚಿವರ ಕೈಗೊಂಬೆಗಳಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಅರಾಜಕತೆ ಆರಂಭವಾಗಿದೆ. ರಾಜ್ಯದ ಆಡಳಿತ ನಿರ್ವಹಣೆ, ಕಾನೂನು ಸುವ್ಯವಸ್ಥೆ, ಜನಜೀವನ‌ ಸುಲಲಿತ ಮಾಡುವಲ್ಲಿ ಸಂಪೂರ್ಣ ಕುಸಿದು ಹೋಗಿದೆ. ರಾಜ್ಯ ಸರ್ಕಾರ ತನ್ನ ತಪ್ಪು ಮುಚ್ಚಿಕೊಳ್ಳುವ ಉದ್ದೇಶದಿಂದ ವಿಷಯಾಂತರ ಮಾಡುತ್ತಿದೆ ಎಂದು ಸ್ಪಷ್ಟಪಡಿಸಿದರು.

ಉಡುಪಿಯಲ್ಲಿ ಸಾಮೂಹಿಕ‌ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದ ವೇಳೆ ಗೃಹ ಸಚಿವರು ಅದನ್ನು ತಳ್ಳಿಹಾಕಿ ಪ್ರತಿಕ್ರಿಯೆ ನೀಡಿದ್ದರು. ನಂಜನಗೂಡಿನಲ್ಲಿ ದಲಿತ ಹೆಣ್ಣು‌ಮಗಳ ಶವ ನೇತಾಡಿದರೂ ಸರ್ಕಾರ ದಲಿತರ ರಕ್ಷಣೆಗೆ ಕ್ರಮ ಕೈಗೊಳ್ಳುತ್ತಿಲ್ಲ. ದಲಿತರ ರಕ್ಷಣೆ ಮಾಡುವಲ್ಲಿ ಗೃಹ ಸಚಿವರು, ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದರು.

ರಾಜ್ಯ ಸರ್ಕಾರ ಹಣದ‌ ಮೂಟೆ ಲೂಟಿ‌ ಮಾಡಿ‌ ಹೈಕಮಾಂಡ್‌ಗೆ ಕಳುಹಿಸುವಲ್ಲಿ ನಿರತವಾಗಿದೆ. ರಾಜ್ಯದ ಅಭಿವೃದ್ಧಿ ಸಾಧ್ಯವಾಗದೆ ಈ ರೀತಿ‌ ವಿಷಯಾಂತರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

PREV

Recommended Stories

ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ
ಬ್ಯಾಲೆಟ್‌ ಬಳಕೆಗೆ ಸುಗ್ರೀವಾಜ್ಞೆ ಅಗತ್ಯವಿಲ್ಲ : ಸಂಪುಟದಲ್ಲಿ ಚರ್ಚೆ