ಧಾರವಾಡ: ಸುಳ್ಳಿನ ಅರಮನೆ ಕಟ್ಟುವ ಬಿಜೆಪಿಗರಿಗೆ ರಾಜ್ಯದ ಜನತೆ ಲೋಕಸಭಾ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ಸಚಿವ ಸಂತೋಷ ಲಾಡ್ ವಿಶ್ವಾಸ ವ್ಯಕ್ತಪಡಿಸಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಟಲ್ ಬಿಹಾರಿ ವಾಜಪೇಯಿ ಹಾಗೂ ಲಾಲಕೃಷ್ಣ ಅಡ್ವಾಣಿ ಅಂತಹ ನಾಯಕರನ್ನು ಹಾಗೂ ಪಕ್ಷದ ಚಿಹ್ನೆ ಮರೆತು ರಾಜ್ಯದ ಬಿಜೆಪಿ ನಾಯಕರು ಕೇವಲ ಮೋದಿ ಜಪ ಮಾಡುತ್ತಿದ್ದಾರೆ. ಪ್ರಹ್ಲಾದ್ ಜೋಶಿ ಅವರು ಮೂರು ಲಕ್ಷ ಮತಗಳ ಅಂತರದ ಗೆಲ್ಲುವುದಾಗಿ ಹೇಳಿಕೆ ನೀಡುವುದು ಯಾವ ಆಧಾರದ ಮೇಲೆ ಎಂದು ಪ್ರಶ್ನಿಸಿದ ಲಾಡ್, ಚಿಕ್ಕಪುಟ್ಟ ವಿಷಯ ಹಿಡಿದು ಚುನಾವಣೆ ಮಾಡುವುದು ನಾಚಿಗೇಡು ಎಂದು ಕಿಡಿಕಾರಿದರು.ಲಕ್ಷಾಂತರ ಮತಗಳ ಅಂತರದಿಂದ ಗೆಲುವು ಸಾಧಿಸಿದರೂ, ಸಂಸತ್ ಪ್ರವೇಶಕ್ಕೆ ಅವಕಾಶ ಬರಲಿದೆ. ಆದರೆ, ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಕೇವಲ ಒಂದು ಮತದ ಅಂತರದ ಗೆಲವು ಸಾಧಿಸಿ, ಸಂಸತ್ ಪ್ರವೇಶಿಸುತ್ತೇವೆ ಎಂದು ಲಾಡ್ ತಮ್ಮ ಅಭ್ಯರ್ಥಿ ವಿನೋದ ಅಸೂಟಿ ಪರವಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಜೋಶಿ ಅವರು ಮತ್ತೊಬ್ಬರ ಹೆಗಲ ಮೇಲೆ ಗುಂಡಿಟ್ಟು ಹೊಡೆಯುವುದು ನಿಲ್ಲಿಸಬೇಕು. ಅಲ್ಲದೇ, ಕಳೆದ 20 ವರ್ಷಗಳಲ್ಲಿ ಮಾಡಿದ ಅಭಿವೃದ್ಧಿ ಕೆಲಸ ಏನು? ಮೂಲಭೂತ ವಿಷಯಗಳ ಕುರಿತು ಚರ್ಚಿಗೆ ಬರಲಿ ಎಂದು ಲಾಡ್ ಸವಾಲು ಹಾಕಿದರು. ಮಗು ಹುಟ್ಟಿದರೆ ಕಾಂಗ್ರೆಸ್ ಗ್ಯಾರಂಟಿ ಎಂಬ ಜೋಶಿ ಹೇಳಿಕೆಗೆ ಕಿಡಿಕಾರಿದ ಲಾಡ್, ಹಿರಿಯರಿಂದ ಗ್ಯಾರಂಟಿ ಬಗ್ಗೆ ಟೀಕೆ ಸಲ್ಲದು. ಎಚ್‌ಡಿಕೆ ಸಹ ಟೀಕಿಸಿದ್ದು, ಇದು ಅವರ ಮನಸ್ಥಿತಿಗೆ ಹಿಡಿದ ಕೈಗನ್ನಡಿ ಎಂದು ಲಾಡ್ ಪ್ರಶ್ನೆಗೆ ಉತ್ತರಿಸಿದರು.ಸ್ವರ್ಗ ತೋರಿಸುವುದಾಗಿ ನರಕ ತೋರಿದ ಬಿಜೆಪಿ:
ಜನರಿಗೆ ಸುಳ್ಳು ಹೇಳಿ, ದಿಕ್ಕು ತಪ್ಪಿಸಿ ಅಧಿಕಾರದ ಗದ್ದುಗೆ ಏರಿದ ಬಿಜೆಪಿ ನಾಯಕರಿಗೆ ಮತ ಕೇಳುವ ನೈತಿಕತೆ ಇಲ್ಲ ಎಂದು ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್ ಹೇಳಿದರು.ಮಂಗಳವಾರ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆಯಲ್ಲಿ ಬಿಜೆಪಿ ನಾಯಕರ ವಿರುದ್ಧ ಸಲೀಂ ಹರಿಹಾಯ್ದರು. ಅಡುಗೆ ಅನಿಲ, ತೈಲ ಬೆಲೆ, ದಿನಬಳಕೆ ವಸ್ತುಗಳ ಬೆಲೆ ಏರಿಸಿ, ಜನತೆ ಬದುಕಿನ ಜತೆ ಚೆಲ್ಲಾಟವಾಡಿದರು. ರೈತಪರ ಕೆಲಸ ಮಾಡಲಿಲ್ಲ. ಸ್ವರ್ಗ ತೋರಿಸುವುದಾಗಿ ಹೇಳಿ, ನರಕ ತೋರಿಸಿದರು ಎಂದು ದೂರಿದರು.ರಾಜ್ಯದ ಬಗ್ಗೆ ಕೇಂದ್ರ ಮಲತಾಯಿ ಧೋರಣೆ ತೋರಿದೆ. ರಾಜ್ಯದಲ್ಲಿ 25 ಬಿಜೆಪಿ ಸಂಸದರಿದ್ದರೂ, ರಾಜ್ಯಕ್ಕೆ ಬರುವ ಹಣ ತರಲಾಗಲಿಲ್ಲ.ಮಹದಾಯಿ ಅನುಷ್ಠಾನಕ್ಕೆ ಪರಿಸರ ಇಲಾಖೆ ಅನುಮತಿ ಕೊಡಿಸಿಲ್ಲ. ಜೋಶಿ ಅವರಿಗೆ ಮತ ಕೇಳುವ ನೈತಿಕತೆ ಇಲ್ಲ. ಸುಳ್ಳಿನ ಆಸ್ಕರ ಅವಾರ್ಡ್ ಬಿಜೆಪಿ ನಾಯಕರಿಗೆ ಕೊಡಿಸಬೇಕು. ಇವರಿಗೆ ಜನತೆ ಪಾಠ ಕಲಿಸುತ್ತಾರೆ ಎಂದರು.