- ಪಕ್ಷದ ನಾಯಕರು ನನ್ನನ್ನು ಕೆಟ್ಟದಾಗಿ ನಡೆಸಿಕೊಂಡರು
ನನಗೆ ಬಿಜೆಪಿ ಟಿಕೆಟ್ ತಪ್ಪಿದ್ದರಿಂದ ಕಾಂಗ್ರೆಸ್ ಸೇರಿಲ್ಲ. ಆದರೆ ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗಿದ್ದರಿಂದ ನಾನು ಪಕ್ಷಾಂತರ ಮಾಡಿದ್ದೇನೆ ಎಂದು ಮಾಜಿ ಸಂಸದ ಸಂಗಣ್ಣ ಕರಡಿ ಹೇಳಿದರು.
ಕಾಂಗ್ರೆಸ್ ಸೇರ್ಪಡೆಯಾದ ಮೇಲೆ ತಮ್ಮ ನಿವಾಸದಲ್ಲಿ ಸ್ಥಳೀಯ ಶಾಸಕ ರಾಘವೇಂದ್ರ ಹಿಟ್ನಾಳ ಜೊತೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಬಿಜೆಪಿಯಲ್ಲಿದ್ದಾಗ ಪ್ರಧಾನಿ ನರೇಂದ್ರ ಮೋದಿ ಹೊಗಳಿದ್ದು ನಿಜ ಎಂದರು.ನನ್ನ ಮಗ ಮತ್ತು ಸೊಸೆಗೂ ನಾನು ಹಠ ಮಾಡಿ ಟಿಕೆಟ್ ಪಡೆದಿದ್ದೇನೆ ಎಂದು ತಪ್ಪಾಗಿ ಬಿಂಬಿಸಲಾಗಿದೆ. ಈ ವಿಷಯದಲ್ಲಿ ಬಿಜೆಪಿ ನಾಯಕರು ನನ್ನನ್ನು ವಿಲನ್ ಮಾಡಿದ್ದಾರೆ. ಆದರೆ, ವಾಸ್ತವ ಏನೆಂದರೆ ನಾನು ನನ್ನ ಮಗನಿಗೆ ಟಿಕೆಟ್ ಕೊಡಿ ಎಂದು ಕೇಳಿರಲೇ ಇಲ್ಲ. ಹಾಲಿ ಸಂಸದನಿದ್ದರೂ ನನ್ನ ಗಮನಕ್ಕ ತರದೆ ಸಿ.ವಿ. ಚಂದ್ರಶೇಖರಗೆ ಟಿಕೆಟ್ ಘೋಷಣೆ ಮಾಡಿದರು. ಇದು ನನ್ನನ್ನು ಕೆರಳಿಸಿತು. ಹಾಗೊಂದು ವೇಳೆ ನನ್ನ ಗಮನಕ್ಕೆ ತಂದು ಸಿವಿಸಿಗೆ ಟಿಕೆಟ್ ನೀಡಿದ್ದರೆ ನಾನು ವಿರೋಧ ಮಾಡುತ್ತಲೇ ಇರಲಿಲ್ಲ. ಆಗ ಆದ ಬೆಳವಣಿಗೆಯಲ್ಲಿ ನನ್ನ ಮಗನಿಗೆ ಟಿಕೆಟ್ ನೀಡಿದರು ಎಂದರು.
ನಾನು ಯಾರನ್ನೂ ಬೆಳೆಸಿಲ್ಲ ಎನ್ನುವುದು ಸರಿಯಲ್ಲ. ಬೆಳೆಯುವುದು ಅವರವರ ವೈಯಕ್ತಿಕ ವಿಷಯ. ನನ್ನ ಮಕ್ಕಳು ಸಹ ಅವರೇ ಬೆಳೆಯಬೇಕು, ನನ್ನ ಜೊತೆಗೆ ಇದ್ದವರು ಅವರೆ ಬೆಳೆಯಬೇಕು. ಯಾರು ಯಾರನ್ನೂ ಬೆಳೆಸಲು ಸಾಧ್ಯವಿಲ್ಲ ಎಂದರು.
ನಾನು ಬಿಜೆಪಿಯಲ್ಲಿ ಇದ್ದಾಗಲೂ ಬಿಜೆಪಿ ಸರ್ಕಾರವನ್ನು ಟೀಕೆ ಮಾಡಿದ್ದೇನೆ. ನ್ಯಾಯಾಲಯ ಕಟ್ಟಡಕ್ಕೆ ಹಣ ಮಂಜೂರಾತಿ ವಿಳಂಬವಾದಾಗ ವೇದಿಕೆಯಲ್ಲಿ ನಮ್ಮ ಸರ್ಕಾರದ ವಿರುದ್ಧ ಧ್ವನಿ ಎತ್ತಿದ್ದೇನೆ. ಅದೇನೇ ಇರಲಿ. ನಾನು ಬಿಜೆಪಿಯಲ್ಲಿದ್ದಾಗ ಏನು ಹೇಳಿದ್ದೇನೆ ಎನ್ನುವುದು ಮುಖ್ಯವಲ್ಲ. ಆಯಾ ಪಕ್ಷದಲ್ಲಿದ್ದಾಗ ಅದನ್ನೇ ಹೇಳಬೇಕಾಗುತ್ತದೆ. ಈಗ ನಾನು ಕಾಂಗ್ರೆಸ್ ಪಕ್ಷದಲ್ಲಿದ್ದೇನೆ ಎಂದರು.
ಕೊಪ್ಪಳದಲ್ಲಿ ಸ್ಪರ್ಧಿಸಬೇಕಿತ್ತು:
ಕೊಪ್ಪಳದಲ್ಲಿ ಸ್ಪರ್ಧೆ ಮಾಡದಂತೆ ಅವರಿಗೆ ಯಾರು ಹೇಳಿಲ್ಲ, ಸುಮ್ಮನೇ ಹುಟ್ಟಿಸಿಕೊಂಡು ಹೇಳುವುದು ಸರಿಯಲ್ಲ. ಇನ್ನು ನಮ್ಮ ಠೇವಣಿ ಇಲ್ಲದಂತೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಗೆಲ್ಲಿಸುವುದು, ಸೋಲಿಸುವುದು ಮತದಾರ ಪ್ರಭು ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಯಾರೋ ಒಬ್ಬರಿಂದ ಸೋಲು, ಗೆಲುವು ಆಗುವುದಿಲ್ಲ ಎಂದರು.
ಸಂಗಣ್ಣ ಕೇವಲ ಒಬ್ಬ ವ್ಯಕ್ತಿಯಲ್ಲ, ಶಕ್ತಿ. ಅವರು ಬಂದಿದ್ದರಿಂದ ನಮಗೆ ಬಹಳ ಅನುಕೂಲವಾಗಿದ್ದು, ಅಧಿಕ ಲೀಡ್ ನಿಂದ ಗೆಲ್ಲಲ್ಲು ಸಹಕಾರಿಯಾಗಲಿದೆ ಎಂದರು.