ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ರಾಜ್ಯ ಸರ್ಕಾರ ಮಾಡುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಬಿಜೆಪಿ ಸಹಿಸುತ್ತಿಲ್ಲ. ಸರ್ಕಾರವನ್ನು ಟೀಕಿಸುವುದೇ ಬಿಜೆಪಿ ನಾಯಕರ ಕೆಲಸ ಎಂದು ಶಾಸಕ ಕೆ.ಎಂ.ಉದಯ್ ಲೇವಡಿ ಮಾಡಿದರು.ಸಮೀಪದ ಯಲಾದಹಳ್ಳಿಯಲ್ಲಿ ರಸ್ತೆ ಡಾಂಬರೀಕರಣ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಹೆದ್ದಾರಿ ಟೋಲ್‌ಗಳನ್ನು ನಿರ್ಮಿಸಿ ಅದರಲ್ಲಿ ಬಂದ ಹಣವನ್ನು ವಸೂಲಿ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ. ಅವರು ಮಾಡಿರುವ ತಪ್ಪುಗಳನ್ನು ಸರಿಪಡಿಸುವುದೇ ನಮ್ಮ ಸರ್ಕಾರದ ದೊಡ್ಡ ಕೆಲಸವಾಗಿದೆ ಎಂದು ತಿರುಗೇಟು ನೀಡಿದರು.
ಒಬ್ಬ ಮುಖ್ಯಮಂತ್ರಿ ಲಂಚ ಪಡೆದು ಜೈಲು ಸೇರಿದ್ದು, ಇಳಿವಯಸ್ಸಿನಲ್ಲಿ ಪೋಸ್ಕೊ ಪ್ರಕರಣದಡಿ ಸಿಲುಕಿರುವ ಉದಾಹರಣೆ ಕಾಂಗ್ರೆಸ್ ಪಕ್ಷದಲ್ಲಿ ಇಲ್ಲ. ಬಿಜೆಪಿ ಸರ್ಕಾರ ಎಷ್ಟು ಹಗರಣ ಮಾಡಿದೆ ಎಂಬುವುದು ರಾಜ್ಯದ ಜನತೆಗೆ ಗೊತ್ತಿದೆ. ಇದನ್ನು ತಿಳಿದು ಆ ಪಕ್ಷವನ್ನು ತಿರಸ್ಕರಿಸಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ನೀಡಿದ್ದಾರೆ ಎಂದರು.ಕಾಂಗ್ರೆಸ್ 5 ಗ್ಯಾರಂಟಿ ಯೋಜನೆ ಜಾರಿಗೆ ತಂದು ಕೊಟ್ಟ ಮಾತಿನಂತೆ ಯಶಸ್ವಿಯಾಗಿ ಸರ್ಕಾರವನ್ನು ಮುನ್ನಡೆಯುತ್ತಿದೆ. ಅದರ ಜತೆಗೆ ಹಲವು ಹೊಸ ಯೋಜನೆಗಳನ್ನು ಜಾರಿ ಗೊಳಿಸಿದ್ದು ಮಾದರಿ ರಾಜ್ಯ ಮಾಡಲು ಸಂಕಲ್ಪ ಮಾಡಲಾಗಿದೆ ಎಂದರು.
ರಾಜ್ಯದ ಅಭಿವೃದ್ಧಿ ಕಂಡು ಬಿಜೆಪಿ ನಾಯಕರು ಅನಗತ್ಯವಾಗಿ ಟೀಕೆ ಮಾಡುತ್ತಿದ್ದಾರೆ. ಗ್ಯಾರಂಟಿ ಯೋಜನೆಯಿಂದ ರಾಜ್ಯ ಅಭಿವೃದ್ಧಿಯಾಗುತಿಲ್ಲ ಎಂದು ಬೊಬ್ಬೆ ಹೊಡೆಯುತಿದ್ದಾರೆ. ಕೇಂದ್ರ ಸರ್ಕಾರ ಸರಿಯಾದ ರೀತಿಯಲ್ಲಿ ಅನುದಾನ ನೀಡುತ್ತಿಲ್ಲ. ಈ ಸಂಬಂಧ ಬಿಜೆಪಿ ಅವರು ಸ್ವಪಕ್ಷದ ಬಗ್ಗೆ ಮಾತನಾಡದೆ ಜನರ ಪರವಾಗಿ ಉತ್ತಮ ಕೆಲಸ ಮಾಡುತ್ತಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಬಗ್ಗೆ ಸಲ್ಲದ ಟೀಕೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.ನಾನು ಶಾಸಕನಾದ ಬಳಿಕ ಕ್ಷೇತ್ರದ ಅಭಿವೃದ್ಧಿಗೆ 1000 ಕೋಟಿ ರು. ಅನುದಾನ ತಂದಿದ್ದೇನೆ. ಸಿಎಂ ವಿಶೇಷ ಯೋಜನೆ ಮೂಲಕ ತಾಲೂಕಿನ ಸಮಗ್ರ ಅಭಿವೃದ್ಧಿ ಮಾಡಲಾಗುತ್ತಿದೆ. ನನ್ನ ಬಗ್ಗೆ ಮಾಡುವ ಟೀಕೆಗಳು ಸಾಯುತ್ತವೆ. ನಾನು ಮಾಡಿರುವ ಕೆಲಸಗಳು ಶಾಶ್ವತವಾಗಿ ಉಳಿಯುತ್ತವೆ ಎಂದರು.
ಈ ವೇಳೆ ಜಿಪಂ ಮಾಜಿ ಸದಸ್ಯ ಎ.ಎಸ್.ರಾಜೀವ್, ತಾಪಂ ಮಾಜಿ ಸದಸ್ಯ ದ್ಯಾವೇಗೌಡ, ಗ್ರಾಪಂ ಅಧ್ಯಕ್ಷ ಗುಡ್ಡಪ್ಪ ಸಿದ್ದರಾಜು ಮುಖಂಡರಾದ ನಿಂಗೇಗೌಡ, ನಂಜಂಡೇಗೌಡ, ಕೃಷ್ಣೇಗೌಡ, ದೇವೇಗೌಡ, ವೈ.ಎಂ.ರವಿ, ವೈ.ಡಿ.ದೇವರಾಜು, ಮಹೇಶ್, ದೊರೆ, ಚಿಕ್ಕಣ್ಣ, ಮಾಲಯ್ಯ ಸೇರಿದಂತೆ ಮತ್ತಿತರಿದ್ದರು.