ಪಿಟಿಐ ಮುಂಬೈ
ಮಹಾರಾಷ್ಟ್ರದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ, ಶಿವಸೇನೆ (ಶಿಂಧೆ ಬಣ), ಎನ್‌ಸಿಪಿ (ಅಜಿತ್ ಪವಾರ್ ಬಣ) ಮೈತ್ರಿಯ ‘ಮಹಾಯುತಿ’ (ಎನ್‌ಡಿಎ) ಒಕ್ಕೂಟ ಭಾರೀ ಜಯಭೇರಿ ಬಾರಿಸಿದೆ. ಅದರಲ್ಲೂ, ಮಹಾಯುತಿ ಮೈತ್ರಿಯೊಳಗೇ ಶಿವಸೇನೆ ಮತ್ತು ಎನ್‌ಸಿಪಿಯನ್ನೂ ಮೀರಿಸಿ ಬಿಜೆಪಿ ಭರ್ಜರಿ ಜಯ ಸಾಧಿಸಿದೆ. ಅದರೊಂದಿಗೆ, ಏಕನಾಥ್ ಶಿಂಧೆಯಿಂದ ಮುಖ್ಯಮಂತ್ರಿ ಸ್ಥಾನವನ್ನು ಈ ಬಾರಿ ಬಿಜೆಪಿ ಕಸಿದುಕೊಳ್ಳುವುದು ಬಹುತೇಕ ನಿಶ್ಚಿತವಾಗಿದೆ.ಮಹಿಳಾ ಮತದಾರರನ್ನು ಸೆಳೆಯಲು ಅವರಿಗೆ ಪ್ರತಿ ತಿಂಗಳು ನಿರ್ದಿಷ್ಟ ಮೊತ್ತದ ಹಣ ನೀಡುವ ‘ಲಡ್ಕಿ ಬೆಹೆನ್’ ಯೋಜನೆ ಮಹಾಯುತಿ ಮೈತ್ರಿಕೂಟದ ಪರವಾಗಿ ಜಾದೂ ಮಾಡಿದ ಪರಿಣಾಮ ಈ ಮಟ್ಟದ ಜಯ ಸಾಧ್ಯವಾಗಿದೆ ಎಂದು ವಿಶ್ಲೇಷಿಸಲಾಗಿದೆ.
ಈ ಚುನಾವಣೆಯಲ್ಲಿ ಬಿಜೆಪಿಯ ಸಾಧನೆ ಮಹಾರಾಷ್ಟ್ರದ ಚುನಾವಣಾ ಇತಿಹಾಸದಲ್ಲೇ ಆ ಪಕ್ಷ ತೋರಿದ ಅತ್ಯುತ್ತಮ ಪ್ರದರ್ಶನವಾಗಿದೆ. ಇದೇ ವೇಳೆ, ಕಾಂಗ್ರೆಸ್‌ನ ಪ್ರದರ್ಶನವು ಮಹಾರಾಷ್ಟ್ರ ಕಾಂಗ್ರೆಸ್‌ನ ಇತಿಹಾಸದಲ್ಲೇ ಆ ಪಕ್ಷ ಅತ್ಯಂತ ಕಳಪೆ ಪ್ರದರ್ಶನಗಳಲ್ಲಿ ಒಂದಾಗಿದೆ.ಮಹಾಯುತಿ ಮೈತ್ರಿಕೂಟದ ಎದುರು ಕಾಂಗ್ರೆಸ್ ನೇತೃತ್ವದ ಮಹಾವಿಕಾಸ ಅಘಾಡಿ ಮೈತ್ರಿಕೂಟ (ಕಾಂಗ್ರೆಸ್ + ಶಿವಸೇನೆ (ಉದ್ಧವ್ ಬಣ) + ಎನ್‌ಸಿಪಿ (ಶರದ್ ಪವಾರ್ ಬಣ) ಹೀನಾಯ ಸೋಲು ಕಂಡಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಕಾಂಗ್ರೆಸ್ ಈ ಬಾರಿ ಅತ್ಯಂತ ಕಳಪೆ ಪ್ರದರ್ಶನ ತೋರಿದ್ದು, ರಾಹುಲ್ ಗಾಂಧಿ ದೊಡ್ಡ ಮುಖಭಂಗ ಅನುಭವಿಸಿದ್ದಾರೆ.
ಬಿಜೆಪಿಯದು ಭಾರೀ ಜಯ:ಅಚ್ಚರಿಯ ಸಂಗತಿಯೆಂದರೆ, ಈ ಚುನಾವಣೆಯಲ್ಲಿ ಬಿಜೆಪಿ ಸ್ಪರ್ಧಿಸಿದ್ದ 149 ಸೀಟುಗಳಲ್ಲಿ ಸುಮಾರು ಶೇ.86ರಷ್ಟು ಸೀಟುಗಳನ್ನು ಗೆದ್ದಿದೆ. ಬಿಜೆಪಿಯ ಸೀಟು ಗಳಿಕೆಯು ಮಹಾಯುತಿ ಮೈತ್ರಿಕೂಟದ ಇನ್ನೆರಡು ಪಕ್ಷಗಳಾದ ಶಿವಸೇನೆ ಮತ್ತು ಎನ್‌ಸಿಪಿ ಗೆದ್ದ ಒಟ್ಟು ಸೀಟುಗಳಿಗಿಂತ ಹೆಚ್ಚಿದೆ. ಅಲ್ಲದೆ, ಬಿಜೆಪಿ ಗೆದ್ದ ಕ್ಷೇತ್ರಗಳ ಸಂಖ್ಯೆ ಪ್ರತಿಪಕ್ಷದ ಮಹಾವಿಕಾಸ ಅಘಾಡಿಯ ಮೂರೂ ಪಕ್ಷಗಳು ಗೆದ್ದ ಕ್ಷೇತ್ರಗಳ ದುಪ್ಪಟ್ಟಿಗಿಂತ ಜಾಸ್ತಿಯಿದೆ.
ಈ ಚುನಾವಣೆಯಲ್ಲಿ ಮಹಾಯುತಿ ಮೈತ್ರಿಕೂಟದಿಂದ ಬಿಜೆಪಿ 149, ಶಿವಸೇನೆ 81, ಎನ್‌ಸಿಪಿ 59 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದವು. ಮಹಾವಿಕಾಸ ಅಘಾಡಿಯಲ್ಲಿ ಕಾಂಗ್ರೆಸ್ 101, ಶಿವಸೇನೆ 95 ಹಾಗೂ ಎನ್‌ಸಿಪಿ 86 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದವು. ಮಹಾರಾಷ್ಟ್ರದ ಒಟ್ಟು ವಿಧಾನಸಭೆ ಕ್ಷೇತ್ರಗಳ ಸಂಖ್ಯೆ 288.ಮಹಾಯುತಿ ಮೈತ್ರಿಯ ಪ್ರಮುಖ ನಾಯಕರಾದ ಬಿಜೆಪಿಯ ದೇವೇಂದ್ರ ಫಡ್ನವೀಸ್, ಶಿವಸೇನೆಯ ಏಕನಾಥ್ ಶಿಂಧೆ ಮತ್ತು ಎನ್‌ಸಿಪಿಯ ಅಜಿತ್ ಪವಾರ್ ತಮ್ಮತಮ್ಮ ಕ್ಷೇತ್ರಗಳಲ್ಲಿ ಭರ್ಜರಿ ಮತಗಳೊಂದಿಗೆ ಜಯ ಗಳಿಸಿದ್ದಾರೆ.
ಶಿಂಧೆಗೆ ಲಾಸ್, ಬಿಜೆಪಿ ಸಿಎಂ:ಬಿಜೆಪಿಯು ಭರ್ಜರಿ ಜಯದೊಂದಿಗೆ ಐದು ವರ್ಷಗಳ ಬಳಿಕ ಮತ್ತೆ ತನ್ನ ಮುಖ್ಯಮಂತ್ರಿಯನ್ನು ರಾಜ್ಯದಲ್ಲಿ ಪ್ರತಿಷ್ಠಾಪಿಸಲು ಸಜ್ಜಾಗಿದೆ. 2019ರ ಚುನಾವಣೆಯಲ್ಲಿ ಬಿಜೆಪಿ 105 ಸೀಟುಗಳೊಂದಿಗೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಚುನಾವಣೆಪೂರ್ವ ಮೈತ್ರಿಪಕ್ಷವಾಗಿದ್ದ ಶಿವಸೇನೆಯು ಎನ್‌ಡಿಎ ತೊರೆದು ವಿಪಕ್ಷಗಳ ಜೊತೆಗೆ ಮಹಾವಿಕಾಸ ಅಘಾಡಿ ಮೈತ್ರಿಕೂಟ ರಚಿಸಿ ಶಿವಸೇನೆಯ ಉದ್ಧವ್ ಠಾಕ್ರೆ ನೇತೃತ್ವದಲ್ಲಿ ಸರ್ಕಾರ ರಚಿಸಿದ್ದರಿಂದ ಬಿಜೆಪಿಗೆ ಸರ್ಕಾರ ರಚಿಸಲು ಸಾಧ್ಯವಾಗಿರಲಿಲ್ಲ. ನಂತರ ಶಿವಸೇನೆಯನ್ನು ಒಡೆದು ಏಕನಾಥ್ ಶಿಂಧೆ 2022ರಲ್ಲಿ ಸರ್ಕಾರ ಬೀಳಿಸಿ ಬಿಜೆಪಿ ಜೊತೆ ಕೈಜೋಡಿಸಿ ತಾವೇ ಮುಖ್ಯಮಂತ್ರಿಯಾಗಿದ್ದರು. ಈಗ ಮಹಾಯುತಿ ಮೈತ್ರಿಕೂಟದಲ್ಲಿ ಬಿಜೆಪಿ ಅತಿಹೆಚ್ಚು ಸ್ಥಾನ ಗೆದ್ದಿರುವುದರಿಂದ ಮುಖ್ಯಮಂತ್ರಿ ಹುದ್ದೆಯನ್ನು ತಾನೇ ಪಡೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ.
ಮಹಾ ಗೆಲುವಿಗೇನು ಕಾರಣ?1. ಆರ್‌ಎಸ್‌ಎಸ್ ಜತೆ ಸಂಬಂಧ ಸುಧಾರಣೆಲೋಕಸಭೆ ಚುನಾವಣೆ ವೇಳೆ ಬಿಜೆಪಿ- ಆರ್‌ಎಸ್‌ಎಸ್ ನಡುವೆ ಭಿನ್ನಾಭಿಪ್ರಾಯ ಸೃಷ್ಟಿಯಾಗಿತ್ತು. ಬಳಿಕ ಆ ಸಂಬಂಧವನ್ನು ಬಿಜೆಪಿ ಸುಧಾರಣೆ ಮಾಡಿಕೊಂಡಿತು. ಆರ್‌ಎಸ್‌ಎಸ್‌ನ ಎಲ್ಲ 33 ಸಂಘಟನೆಗಳೂ ತಳಮಟ್ಟದಲ್ಲಿ ಬಿಜೆಪಿ ಪರವಾಗಿ ಶ್ರಮಿಸಿದವು. ಅದರಿಂದ ಲಾಭವಾಯಿತು.2. ಹಿಂದುತ್ವವಾದಿ ಘೋಷಣೆಗಳು
ಬಿಜೆಪಿ ಗೆಲ್ಲದಿದ್ದರೆ ಅಪಾಯ ಎಂದು ಬಿಂಬಿಸುವ ರೀತಿ ‘ಏಕ್ ಹೇ ತೋ ಸೇಫ್ ಹೇ (ಒಟ್ಟಾಗಿದ್ದರಷ್ಟೇ ನಾವು ಸುರಕ್ಷಿತ) ಹಾಗೂ ಬಟೇಂಗೆ ತೋ ಕಾಟೇಂಗೆ (ಒಟ್ಟಾಗಿರದಿದ್ದರೆ ಉಳಿಗಾಲವಿಲ್ಲ) ಎಂಬ ಘೋಷಣೆಗಳ ಮೂಲಕ ಹಿಂದು ಮತಗಳ ಕ್ರೋಢೀಕರಣ ನಡೆಯಿತು.3. ಮಹಿಳೆಯರ ಓಲೈಕೆಗೆ ಲಡ್ಕಿ ಬಹಿನ್‌ಮಹಿಳೆಯರಿಗೆ ಮಾಸಿಕ ಹಣ ವರ್ಗಾವಣೆ ಮಾಡುವ, ಮಧ್ಯಪ್ರದೇಶ ಚುನಾವಣೆಯಲ್ಲಿ ಮತ ಕೊಯ್ಲು ಮಾಡಿದ್ದ ‘ಲಡ್ಕಿ ಬಹಿನ್’ ಯೋಜನೆಯನ್ನು ಮಹಾರಾಷ್ಟ್ರದಲ್ಲೂ ಜಾರಿಗೆ ತರಲಾಯಿತು. ಅಧಿಕಾರಕ್ಕೆ ಬಂದರೆ ಈ ಮೊತ್ತವನ್ನು 2100 ರು.ಗೆ ಏರಿಸುವ ಭರವಸೆಯಿಂದ ಬಿಜೆಪಿಗೆ ಬಂಪರ್ ಲಾಭವಾಯಿತು.4. ಮರಾಠ ಮತದಾರರ ಓಲೈಕೆ
ಲೋಕಸಭೆ ಚುನಾವಣೆ ವೇಳೆ ಮೀಸಲು ಕಾರಣಕ್ಕೆ ಮರಾಠ ಮತದಾರರು ಮುನಿಸಿಕೊಂಡಿದ್ದರು. ಅದು ಬಿಜೆಪಿಗೆ ಮುಳುವಾಗಿದ್ದರೆ, ಶರದ್ ಪವಾರ್‌ಗೆ ವರವಾಗಿತ್ತು. ಏಕೆಂದರೆ, ಶೇ.33ರಷ್ಟಿರುವ ಮರಾಠರು ಪ್ರಭಾವಿ ಸಮುದಾಯ. ಆದರೆ ಬಿಜೆಪಿಯ ಹಿಂದುತ್ವದ ಮಂತ್ರ ಮರಾಠ ಮತದಾರರನ್ನೂ ಸೆಳೆಯಿತು.5. ಒಬಿಸಿ ಮತದಾರರ ಓಲೈಕೆಮಹಾರಾಷ್ಟ್ರದಲ್ಲಿ ಒಬಿಸಿಗಳು ಶೇ.38ರಷ್ಟಿದ್ದಾರೆ. 288 ಕ್ಷೇತ್ರಗಳ ಪೈಕಿ 175ರಲ್ಲಿ ಗೆಲುವು ನಿರ್ಧರಿಸುತ್ತಾರೆ. ಹೀಗಾಗಿ ಒಬಿಸಿ ಮತಗಳನ್ನು ಸೆಳೆಯಲು ಬಿಜೆಪಿ ನೇತೃತ್ವದ ಕೂಟ ಒತ್ತು ನೀಡಿತು. ಕೇಂದ್ರೀಯ ಒಬಿಸಿ ಪಟ್ಟಿಗೆ ಕೆಲವೊಂದು ಸಮುದಾಯಗಳ ಸೇರ್ಪಡೆಗಾಗಿ ಆಯೋಗ ರಚಿಸುವುದಾಗಿಯೂ ಭರವಸೆ ನೀಡಿತು. ಅದು ಕೂಡ ಕೆಲಸ ಮಾಡಿದೆ.7. ರೈತರೂ ಬಿಜೆಪಿ ಪರ ನಿಂತರು
ಮಹಾರಾಷ್ಟ್ರದ ಶೇ.65ರಷ್ಟು ಜನಸಂಖ್ಯೆ ಕೃಷಿ ಮೇಲೆ ಅವಲಂಬಿತ. ಆದರೆ ಸೋಯಾಬೀನ್ ಹಾಗೂ ಹತ್ತಿಗೆ ಬೆಂಬಲ ಬೆಲೆ ನೀಡುವ ವಿಚಾರ ಪ್ರಮುಖ ಕೃಷಿ ಸಮಸ್ಯೆಯಾಗಿತ್ತು. ಲೋಕಸಭೆ ಚುನಾವಣೆ ವೇಳೆ ಬಿಜೆಪಿಗೆ ಹೊಡೆತ ನೀಡಲು ಇದೂ ಪ್ರಮುಖ ಕಾರಣ ಎನ್ನಲಾಗಿತ್ತು. ಆದರೆ ಬಿಜೆಪಿ ಸರ್ಕಾರ ಕಳೆದ ಬಜೆಟ್‌ನಲ್ಲಿ ರೈತರಿಗೆ ಉಚಿತ ವಿದ್ಯುತ್, ಸಾಲ ಮನ್ನಾ, ಕನಿಷ್ಠ ಬೆಂಬಲ ಬೆಲೆಯ ವ್ಯತ್ಯಾಸ ಮೊತ್ತ ನೀಡುವ ಭರವಸೆ ನೀಡಿದ್ದು ವರದಾನವಾಯಿತು.