ಸಾರಾಂಶ
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇನ್ನೂ ಒಂದು ವಾರ ಮಳೆ ಮುಂದುವರೆಯಲಿದೆ
ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇನ್ನೂ ಒಂದು ವಾರ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬಂಗಾಳಕೊಲ್ಲಿಯ ಉತ್ತರ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆ ಪರಿಣಾಮ ರಾಜ್ಯದ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ.
ವಾಯುಭಾರ ಕುಸಿತ ಗುರುವಾರ ತೀವ್ರತೆ ಪಡೆದುಕೊಳ್ಳಲಿದೆ. ಆದರೆ, ಚಂಡಮಾರುತವಾಗುವ ಸಾಧ್ಯತೆ ಇಲ್ಲ ಎಂದು ಹವಾಮಾನ ತಜ್ಞ ಶ್ರೀನಿವಾಸ್ ರೆಡ್ಡಿ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ. ಈ ಬಾರಿ ಅರಬ್ಬಿ ಸಮುದ್ರಕ್ಕಿಂತ, ಬಂಗಾಳಕೊಲ್ಲಿ ಮೂಲಕ ಹೆಚ್ಚಿನ ಮಳೆ ಮಾರುತಗಳು ಬರುತ್ತಿರುವ ಹಿನ್ನೆಲೆಯಲ್ಲಿ ಚಳಿಗಾಳಿಯೊಂದಿಗೆ ಮಳೆಯಾಗುತ್ತಿದೆ. ಧಾರಾಕಾರ ಮಳೆ ಬದಲು ಜಿಟಿ ಜಿಟಿ ಮಳೆ ಮುಂದುವರೆಯಲಿದೆ. ಮಳೆ ಕಡಿಮೆಯಾದರೂ ಮೋಡ ಕವಿದ ವಾತಾವರಣ ಒಳನಾಡು ಜಿಲ್ಲೆಗಳಲ್ಲಿ ಇರಲಿದೆ. ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಹೆಚ್ಚಿನ ಮಳೆ ಇರುವುದಿಲ್ಲ ಎಂದು ತಿಳಿಸಿದ್ದಾರೆ.
ಬುಧವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡ ವರದಿ ಪ್ರಕಾರ ಕಳೆದ 24 ಗಂಟೆಯಲ್ಲಿ ಆಳಂದ, ಆಗುಂಬೆಯಲ್ಲಿ ಅತಿ ಹೆಚ್ಚು 5 ಸೆಂ.ಮೀ. ಮಳೆಯಾಗಿದೆ. ಉಳಿದಂತೆ ಮಂಕಿ, ಕುಂದಾಪುರ, ಶಕ್ತಿನಗರ, ಕಕ್ಕೇರಿ, ಬಿ ದುರ್ಗದಲ್ಲಿ ತಲಾ 4, ಗೋಕರ್ಣ, ಸಿದ್ದಾಪುರ, ಕದ್ರಾ, ಗೇರಸೊಪ್ಪ, ಮಂಗಳೂರು ವಿಮಾನ ನಿಲ್ದಾಣ, ಕಾರ್ಕಳ, ಗುತ್ತಲ, ಚನ್ನಗಿರಿಯಲ್ಲಿ 3 ಸೆಂ.ಮೀ ಮಳೆ ಸುರಿದಿದೆ.