ಸಾರಾಂಶ
ಮೆಕ್ಕೆಜೋಳದ ಕಣಜ ಹರಪನಹಳ್ಳಿ ತಾಲೂಕಲ್ಲಿ 78,545 ಹೆಕ್ಟೇರ್ ಬಿತ್ತನೆ
ಯೂರಿಯಾಕ್ಕಾಗಿ ಇನ್ನೂ ಅಲೆಯುತ್ತಿರುವ ರೈತರುಬಿ. ರಾಮಪ್ರಸಾದ್ ಗಾಂಧಿ
ಕನ್ನಡಪ್ರಭ ವಾರ್ತೆ ಹರಪನಹಳ್ಳಿ
ಈ ಬಾರಿ ಮುಂಗಾರು ಅತ್ಯುತ್ತಮವಾಗಿದ್ದು, ವಾಡಿಕೆಗಿಂತ ಹೆಚ್ಚು ಮಳೆ ಹಾಗೂ ಬಿತ್ತನೆಯಾಗಿದ್ದು, ಬೆಳೆ ಸೂಲಂಗಿ ಹಂತಕ್ಕೆ ಬಂದಿದ್ದರೂ ರೈತರು ಯೂರಿಯಾ ಗೊಬ್ಬರ ಖರೀದಿ ಮಾಡುತ್ತಲೇ ಇದ್ದಾರೆ.ಇದು ಹಿಂದುಳಿದ ಹರಪನಹಳ್ಳಿ ತಾಲೂಕಿನ ಮಳೆ, ಬೆಳೆ ಹಾಗೂ ರೈತನ ಸದ್ಯದ ಸ್ಥಿತಿ. ಜನವರಿಯಿಂದ ಆಗಸ್ಟ್ 10ರ ವರೆಗೆ ವಾಡಿಕೆ ಮಳೆ 225.3 ಮಿಮೀ ಆಗಬೇಕಾಗಿತ್ತು, ಆದರೆ 289.6 ಮಿಮೀ ಬಿದ್ದಿದೆ.
ಇದರಲ್ಲಿ ಅರಸೀಕೆರೆ 222.0 ಮಿಮೀಗೆ 333.2 ಮಿಮೀ, ಚಿಗಟೇರಿ- 336.5 ಮಿಮೀಗೆ 254.8 ಮಿಮೀ, ತೆಲಿಗಿ ಹೋಬಳಿ- 214.7 ಮಿಮೀಗೆ 270 ಮಿಮೀ, ಹರಪನಹಳ್ಳಿ-225.3 ಮಿಮೀಗೆ 277.3 ಮಿಮೀ ಮಳೆ ಆಗಿದೆ. ಚಿಗಟೇರಿ ಹೋಬಳಿ ಬಿಟ್ಟರೆ ಇನ್ನೂ ಮೂರು ಹೋಬಳಿಗಳಲ್ಲೂ ವಾಡಿಕೆಗಿಂತ ಹೆಚ್ಚು ಮಳೆ ಬಿದ್ದಿದ್ದು, ಸರಾಸರಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ.ಗುರಿ ಮೀರಿದ ಬಿತ್ತನೆ:
ಮಳೆ ಹೀಗಾದರೆ ಬಿತ್ತನೆ ಸಹ ಗುರಿ ಮೀರಿ ಆಗಿದ್ದು, ಇನ್ನೂ ರಾಗಿ ಬಿತ್ತನೆ ಅಲ್ಲಲ್ಲಿ ಸಾಗಿದೆ. ತಾಲೂಕಿನಲ್ಲಿ ಮುಂಗಾರಿನಲ್ಲಿ ಒಟ್ಟು 84121 ಹೆಕ್ಟೇರ್ ಬಿತ್ತನೆ ಗುರಿ ಇದ್ದರೆ, ಈಗಾಗಲೇ 85,575 ಹೆಕ್ಟೇರ್ ಬಿತ್ತನೆ ಆಗಿದೆ.ಅದರಲ್ಲಿ ಹರಪನಹಳ್ಳಿ ತಾಲೂಕು ಮೆಕ್ಕೆಜೋಳದ ಕಣಜ ಎಂದು ಹೆಸರಾಗಿದೆ. ಅಷ್ಟೊಂದು ಮೆಕ್ಕೆಜೋಳ ಬಿತ್ತುತ್ತಾರೆ. 70 ಸಾವಿರ ಹೆಕ್ಟೇರ್ ಮೆಕ್ಕೆಜೋಳದ ಬಿತ್ತನೆ ಗುರಿ ಇದ್ದರೆ, 78,545 ಹೆಕ್ಟೇರ್ ಬಿತ್ತನೆ ಮಾಡಲಾಗಿದೆ. ಶೇಂಗಾ 1720 ಗುರಿ ಇದ್ದರೆ, 1400 ಹೆಕ್ಟೇರ್ ಬಿತ್ತನೆಯಾಗಿದೆ, ಭತ್ತ 2 ಸಾವಿರ ಗುರಿ ಇದ್ದರೆ, 1200 ಹೆಕ್ಟೇರ್ ಬಿತ್ತನೆಯಾಗಿದೆ. ರಾಗಿ 4500 ಗುರಿ ಇದ್ದರೆ 350 ಹೆಕ್ಟೇರ್ ಬಿತ್ತನೆ ಮಾಡಲಾಗಿದೆ. ಇನ್ನೂ ಬಿತ್ತನೆ ಪ್ರಗತಿಯಲ್ಲಿದೆ. ತೊಗರಿ 2300 ಗುರಿ ಇದ್ದರೆ 1930 ಹೆಕ್ಟೇರ್ ಬಿತ್ತನೆಯಾಗಿದೆ. ಸರಾಸರಿ ಬಿತ್ತನೆ ಗುರಿ ಮೀರಿ ಸಾಗಿದೆ.
ಮೆಕ್ಕೆಜೋಳ ಈಗಾಗಲೇ ಬೆಳವಣಿಗೆ ಹಂತದಿಂದ ಹೂವಿನ ಹಂತದ (ಸೂಲಂಗಿ) ವರೆಗೆ ಇದ್ದರೆ, ತೊಗರಿ ಬೆಳವಣಿಗೆ ಹಂತದಲ್ಲಿದೆ. ಶೇಂಗಾ ಬೆಳೆ ಹೂಡು ಹಿಡಿಯುವ ಹಂತದಲ್ಲಿದೆ. ರಾಗಿ ಬಿತ್ತನೆ ಹಂತದಲ್ಲಿದೆ. ಮಳೆ ಸಾಕಷ್ಟು ಆಗಿದ್ದರೂ ಈ ಬಾರಿ ಕೀಟಬಾಧೆ ಕಂಡು ಬಂದಿಲ್ಲ. ಆದರೆ ಮೆಕ್ಕೆಜೋಳದ ಬೆಳೆ ಸೂಲಂಗಿ ಹಂತದಲ್ಲಿದ್ದು, ಇನ್ನೂ ಕೆಲವು ಬೆಳೆಗಳು 50 ದಿವಸದತ್ತ ಸಾಗಿವೆ. ಆದರೂ ರೈತರು ಯೂರಿಯಾ ಬೇಕು ಬೇಕು ಎಂದು ಸೊಸೈಟಿ, ಖಾಸಗಿ ಅಂಗಡಿಗಳಿಗೆ ಪ್ರತಿದಿನ ಅಲೆದಾಡುತ್ತಿದ್ದಾರೆ.ತಾಲೂಕಿಗೆ ಜೂನ್‌ನಿಂದ ಸೆಪ್ಟಂಬರ್‌ವರೆಗೆ 10,935 ಮೆಟ್ರಿಕ್ ಟನ್ ಯೂರಿಯಾ ರಸಗೊಬ್ಬರ ಅಗತ್ಯ ಇದ್ದು, ಈ ವರೆಗೂ 10,375 ಮೆ.ಟನ್ ಸರಬರಾಜು ಆಗಿದೆ, ಇನ್ನೂ ಬರುತ್ತಲಿದೆ.
ಒಂದು ರಾತ್ರಿ ಮಳೆ ಆದರೂ ಸಾಕು ಬೆಳಗ್ಗೆಯೇ ರೈತರು ಯೂರಿಯಾಕ್ಕಾಗಿ ಅಂಗಡಿ, ಸೊಸೈಟಿಗಳ ಎದುರು ಸಾಲು ಗಟ್ಟುತ್ತಾರೆ. ಕೆರೆ, ಕಟ್ಟೆಗಳು ಕೋಡಿ ಬಿದ್ದು ತುಂಬಿ ಹರಿಯುತ್ತಲಿವೆ. ಒಟ್ಟಿನಲ್ಲಿ ಈ ಬಾರಿ ಮಳೆ ಉತ್ತಮವಾಗಿದ್ದು, ಬೆಳೆಗಳು ಚೆನ್ನಾಗಿವೆ, ರೈತರು ಸಂತಸದಿಂದ ಇದ್ದಾರೆ, ಇದೇ ರೀತಿ ಉತ್ತಮ ಇಳುವರಿ ಬಂದರೆ ರೈತರು ನೆಮ್ಮದಿಯ ಉಸಿರು ಬಿಡಲಿದ್ದಾರೆ.