ಮಾನವ ಪ್ರತಿನಿತ್ಯ ಸಂಶೋಧನೆ ಆವಿಷ್ಕಾರ ಮಾಡುತ್ತಿದ್ದರೂ ಅವನಿಗೆ ರಕ್ತಕ್ಕೆ ಪರ್ಯಾಯವನ್ನು ಸಂಶೋಧಿಸಲು ಆಗಲಿಲ್ಲ.

ಜಿಲ್ಲಾಡಳಿತ, ತಾಲೂಕಾಡಳಿತದ ಸಹಯೋಗದಲ್ಲಿ ರಕ್ತದಾನ ಶಿಬಿರಕ್ಕೆ ಚಾಲನೆ

ಕನ್ನಡಪ್ರಭ ವಾರ್ತೆ ಹಳಿಯಾಳ

ಮಾನವ ಪ್ರತಿನಿತ್ಯ ಸಂಶೋಧನೆ ಆವಿಷ್ಕಾರ ಮಾಡುತ್ತಿದ್ದರೂ ಅವನಿಗೆ ರಕ್ತಕ್ಕೆ ಪರ್ಯಾಯವನ್ನು ಸಂಶೋಧಿಸಲು ಆಗಲಿಲ್ಲ. ರಕ್ತದ ಕೊರತೆಯಿದ್ದರೇ ಬೇರೊಬ್ಬರು ನೀಡಿದ ರಕ್ತವನ್ನೇ ಕೊಡಬೇಕೇ ಹೊರತು ರಕ್ತವನ್ನು ಕಾರ್ಖಾನೆಯಲ್ಲಿ ಫ್ಯಾಕ್ಟರಿಗಳಲ್ಲಿ ಸಿದ್ಧಪಡಿಸಲು ಸಾಧ್ಯವಿಲ್ಲ ಎಂದು ತಾಪಂ ಇಒ ವಿಲಾಸರಾಜ್ ಹೇಳಿದರು.

ಜಿಲ್ಲಾಡಳಿತ ಮತ್ತು ತಾಲೂಕಾಡಳಿತ ಹಾಗೂ ಆರೋಗ್ಯ ಇಲಾಖೆಯ ಜಂಟಿ ಸಹಯೋಗದಲ್ಲಿ ಪಟ್ಟಣದ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಆಯೋಜಿಸಿದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಅವರು ಮತನಾಡಿದರು.

ಸರ್ವ ದಾನಗಳಲ್ಲಿ ರಕ್ತದಾನವು ಸರ್ವ ಶ್ರೇಷ್ಠ ದಾನವಾಗಿದ್ದು, ನಾವು ನೀಡುವ ರಕ್ತವೂ ಬೇರೊಬ್ಬರ ಜೀವವನ್ನು ಬದುಕನ್ನು ರಕ್ಷಿಸಲು ಅನುಕೂಲವಾಗುತ್ತದೆ ಎಂದರೇ ಅದಕ್ಕಿಂತ ಪುಣ್ಯದ ಗಳಿಗೆಯು ಬೇರೊಂದಿಲ್ಲ ಎಂದರು.

ಶಿಬಿರ ಉದ್ದೇಶಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಮಕ್ಕಳ ತಜ್ಞ, ಸಾಹಿತಿ, ಡಾ. ಶ್ರೀಶೈಲ್ ಮಾದಣ್ಣನವರ ರಕ್ತದಾನ ಮಾಡುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ಇದೊಂದು ಶ್ರೇಷ್ಠವಾದ ದಾನವಾಗಿರುವುದರಿಂದ ಈ ಪುಣ್ಯದ ಕಾರ್ಯದಲ್ಲಿ ಸರ್ವರೂ ಕೈಜೋಡಿಸಬೇಕೆಂದರು.

ತಾಲೂಕು ಆಸ್ಪತ್ರೆಯ ಹಿರಿಯ ಅಧಿಕಾರಿ ಶಸ್ತ್ರತಜ್ಞ ಡಾ. ಅರುಣಕುಮಾರ ಹಲಗತ್ತಿ ಅಧ್ಯಕ್ಷತೆ ವಹಿಸಿದ್ದರು. ಶಿಬಿರದಲ್ಲಿ ಒಟ್ಟು 37 ಯುನಿಟ್ ರಕ್ತದಾನ ಮಾಡಲಾಯಿತು.

ರಕ್ತದಾನ ಶಿಬಿರಲ್ಲಿ ಹಳಿಯಾಳ ಸಿಪಿಐ ಜಯಪಾಲ ಪಾಟೀಲ, ಪಿಎಸ್‌ಐ ಬಸವರಾಜ ಮಬನೂರ, ದಾಂಡೇಲಿಯ ಡಿವೈಎಸ್ಪಿ ಶಿವಾನಂದ ಮದರಖಂಡಿ ಹಾಗೂ ಇತರ ಅಧಿಕಾರಿಗಳು, ಆರೋಗ್ಯ, ಕಂದಾಯ, ಪೊಲೀಸ್ ಇಲಾಖೆ, ತಾಪಂ ಸಿಬ್ಬಂದಿ, ಗೃಹರಕ್ಷಕ ದಳದವರು ರಕ್ತದಾನ ಮಾಡಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ರೂಪಾ ತುರಮುರಿಯವರು ಕಾರ್ಯಕ್ರಮ ನಿರೂಪಿಸಿದರು.