ವಿದ್ಯಾರ್ಥಿಗಳ ಪ್ರತಿಭಾನ್ವೇಷಣೆಗೆ ರಸಪ್ರಶ್ನೆ ಕಾರ್ಯಕ್ರಮ ಸೂಕ್ತ ವಿಧಾನವಾಗಿದ್ದು, ಜ್ಞಾನದ ಜೊತೆಗೆ ಸಮಯ ಪ್ರಜ್ಞೆ, ಗುಂಪು ಸಾಮರ್ಥ್ಯ ಮತ್ತು ವಿಶ್ಲೇಷಣಾ ಸಾಮರ್ಥ್ಯಗಳನ್ನು ಅಳೆಯುವ ಮಹತ್ವದ ಸಾಧನವಾಗಿದೆ ಎಂದು ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಮಂಜುನಾಥ ಕೋಟೆಣ್ಣವರ ಹೇಳಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ವಿದ್ಯಾರ್ಥಿಗಳ ಪ್ರತಿಭಾನ್ವೇಷಣೆಗೆ ರಸಪ್ರಶ್ನೆ ಕಾರ್ಯಕ್ರಮ ಸೂಕ್ತ ವಿಧಾನವಾಗಿದ್ದು, ಜ್ಞಾನದ ಜೊತೆಗೆ ಸಮಯ ಪ್ರಜ್ಞೆ, ಗುಂಪು ಸಾಮರ್ಥ್ಯ ಮತ್ತು ವಿಶ್ಲೇಷಣಾ ಸಾಮರ್ಥ್ಯಗಳನ್ನು ಅಳೆಯುವ ಮಹತ್ವದ ಸಾಧನವಾಗಿದೆ ಎಂದು ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಮಂಜುನಾಥ ಕೋಟೆಣ್ಣವರ ಹೇಳಿದರು.ದ್ವಿತೀಯ ರಾಷ್ಟ್ರೀಯ ಶಸ್ತ್ರಚಿಕಿತ್ಸಕರ ದಿನಾಚರಣೆ ನಿಮಿತ್ತ ಬಿ.ಎಲ್.ಡಿ.ಇ. ಡೀಮ್ಡ್ ವಿಶ್ವವಿದ್ಯಾಲಯದ ಬಿ.ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಶಸ್ತ್ರ ಚಿಕಿತ್ಸಾ ವಿಭಾಗದ ವತಿಯಿಂದ ಹಾಗೂ ವಿಜಯಪುರ ಜಿಲ್ಲಾ ಶಸ್ತ್ರ ಚಿಕಿತ್ಸಕರ ಸಂಘದ ಸಹಯೋಗದಲ್ಲಿ ಸಂಸ್ಥೆಯ ಸ್ಕಿಲ್ ಲ್ಯಾಬೊರೇಟರಿ ಕಟ್ಟಡದ ಸಭಾಂಗಣದಲ್ಲಿ ಅಂತಿಮ ಎಂ.ಬಿ.ಬಿ.ಎಸ್. ವಿದ್ಯಾರ್ಥಿಗಳಿಗಾಗಿ ಸರ್ಜಿಕ್ವಿಜ್ ರಸಪ್ರಶ್ನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಷ್ಟ್ರೀಯ ಶಸ್ತ್ರಚಿಕಿತ್ಸಕರ ದಿನಾಚರಣೆ ಉದ್ದೇಶ ಜನಸಾಮಾನ್ಯರಿಗೆ ಶಸ್ತ್ರ ಚಿಕಿತ್ಸಕರ ಮಹತ್ವ ತಿಳಿಸುವುದು, ಸಮಾಜ ಸುಧಾರಣಾ ಕಾರ್ಯಗಳಲ್ಲಿ ಶಸ್ತ್ರ ಚಿಕಿತ್ಸಕರು ಪಾಲ್ಗೊಳ್ಳುವುದು ಮತ್ತು ಸ್ನಾತಕ ವೈದ್ಯಕೀಯ ವಿದ್ಯಾರ್ಥಿಗಳಲ್ಲಿ ಶಸ್ತ್ರ ಚಿಕಿತ್ಸಾ ವಿಭಾಗದ ಬಗ್ಗೆ ಆಸಕ್ತಿ ಮೂಡಿಸುವುದಾಗಿದೆ ಎಂದರು.ವಿಜೇತರಿಗೆ ಪ್ರಶಸ್ತಿ, ಪ್ರಮಾಣ ಪತ್ರ ವಿತರಣೆ:
ಪೂರ್ವಭಾವಿ ಪರೀಕ್ಷೆಯ ಮೂಲಕ ಅಂತಿಮ ಸುತ್ತಿಗೆ ಆಯ್ಕೆಯಾದ 10 ವಿದ್ಯಾರ್ಥಿಗಳನ್ನು ಐದು ತಂಡಗಳಾಗಿ ವಿಭಾಗಿಸಲಾಗಿತ್ತು. ಪ್ರತಿ ತಂಡಕ್ಕೂ ಬಿ.ಎಲ್.ಡಿ.ಇ. ಆಸ್ಪತ್ರೆಯ ಶಸ್ತ್ರಚಿಕಿತ್ಸಾ ವಿಭಾಗದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ ಹಿರಿಯ ವೈದ್ಯರ ಹೆಸರನ್ನು ನಾಮಕರಣ ಮಾಡಲಾಗಿತ್ತು. ಕ್ವಿಜ್ ಮಾಸ್ಟರ್ ಆಗಿ ಡಾ.ದೀಪಕ ಚವ್ಹಾಣ ಕಾರ್ಯಕ್ರಮ ನಿರ್ವಹಿಸಿದರು. ಡಾ.ಬಿ.ಸಿ. ಉಪ್ಪಿನ ತಂಡದ ಪಾರ್ಥ ಶೇಂದೆ ಮತ್ತು ಸತ್ಯಜಿತ್ ಪ್ರಥಮ ಸ್ಥಾನ ಪಡೆದರು. ಡಾ.ಪಿ.ಎಲ್.ಕರಿಹೋಳು ತಂಡದ ಅದಿತಿಕುಮಾರ ಮತ್ತು ಪ್ರಜಕ್ತಾ ದ್ವಿತೀಯ ಸ್ಥಾನ, ಡಾ.ವಿ.ಬಿ.ರೆಡ್ಡಿ ತಂಡದ ರೇವತಿ ಮತ್ತು ಸಾನಿಕಾ ಬಾಗ್ವೆ ತೃತೀಯ ಸ್ಥಾನ ಪಡೆದರು.ವಿಜೇತ ವಿದ್ಯಾರ್ಥಿಗಳಿಗೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿಜಯಪುರ ಜಿಲ್ಲಾಸ್ಪತ್ರೆಯ ಶಸ್ತ್ರ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ರಾಜಕುಮಾರ ಹಿರೇಮಠ, ಪ್ರಾಧ್ಯಾಪಕರಾದ ಡಾ.ಎಂ.ಬಿ. ಪಾಟೀಲ, ಡಾ.ವಿಜಯಾ ಪಾಟೀಲ, ಡಾ.ಗಿರೀಶ ಕುಲ್ಲೊಳ್ಳಿ, ಡಾ.ವಿಕ್ರಂ ಸಿಂದಗಿಕರ, ವಿಜಯಪುರ ಜಿಲ್ಲಾ ಶಸ್ತ್ರ ಚಿಕಿತ್ಸಕರ ಸಂಘದ ಕಾರ್ಯದರ್ಶಿ ಡಾ.ರಮಾಕಾಂತ ಬಳೂರಕರ ಪ್ರಮಾಣ ಪತ್ರ ಮತ್ತು ಪ್ರಶಸ್ತಿ ವಿತರಿಸಿದರು.
ಸಹಾಯಕ ಪ್ರಾಧ್ಯಾಪಕರಾದ ಡಾ.ಸಂತೋಷ ಮಡಗೊಂಡ, ಡಾ.ವೀಣಾ ಘಂಟೆಪ್ಪಗೋಳ, ಡಾ.ಆನಂದ ಸುಂತನ, ಡಾ.ಅಕ್ಷತಾ ಗೌಡರ ಹಾಗೂ ಡಾ.ಭುವನೇಶ್ವರಿ ಉಪಸ್ಥಿತರಿದ್ದರು. ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಂಯೋಜಕ ಡಾ.ಮಂಜುನಾಥ ಸಾವಂತ ವಂದಿಸಿದರು.ಉಚಿತ ಆರೋಗ್ಯ ತಪಾಸಣೆ, ಚಿಕಿತ್ಸಾ ಸಪ್ತಾಹ ಶಿಬಿರ:
ಇದೇ ವೇಳೆ ರಾಷ್ಟ್ರೀಯ ಶಸ್ತ್ರಚಿಕಿತ್ಸಕರ ದಿನಾಚರಣೆ ನಿಮಿತ್ತ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಸಪ್ತಾಹ ಶಿಬಿರದ ಸಮಾರೋಪ ನಡೆಯಿತು. ಶಿಬಿರದಲ್ಲಿ ಸುಮಾರು 530ಕ್ಕೂ ಅಧಿಕ ರೋಗಿಗಳನ್ನು ತಪಾಸಣೆ ಮಾಡಲಾಗಿದ್ದು, ಅಗತ್ಯವಿದ್ದ ಸುಮಾರು 75 ರೋಗಿಗಳಿಗೆ ಶಸ್ತ್ರಚಿಕಿತ್ಸೆ ನೆರವೇರಿಸಲಾಯಿತು.ಬಿ.ಎಲ್.ಡಿ.ಇ. ಧ್ವನಿ 98.6 ಎಫ್.ಎಂ.ನಲ್ಲಿ ಪ್ರಸಾರವಾದ ಸರ್ಜನ್ ಮತ್ತು ಸಮಾಜ ರೇಡಿಯೋ ಸಂವಾದ ಕಾರ್ಯಕ್ರಮದಲ್ಲಿ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಮಂಜುನಾಥ ಕೋಟೆಣ್ಣವರ ಹಾಗೂ ವಿಜಯಪುರ ಜಿಲ್ಲಾ ಶಸ್ತ್ರಚಿಕಿತ್ಸಕರ ಸಂಘದ ಕಾರ್ಯದರ್ಶಿ ಡಾ.ರಮಾಕಾಂತ ಬಳೂರಕರ ಭಾಗವಹಿಸಿದ್ದರು. ಬಳಿಕ 10 ಮಂದಿ ಕಿರಿಯ ವೈದ್ಯರು ರಕ್ತದಾನ ಮಾಡಿದರು.