ಬೆಂಗಳೂರು : ಸಚಿವ ಸಂಪುಟ ವಿಸ್ತರಣೆ ಕುರಿತ ನೂತನ ಸಚಿವರ ಪಟ್ಟಿ ಬಹಿರಂಗಗೊಂಡ ಬೆನ್ನಲ್ಲೇ ಆಕಾಂಕ್ಷಿಗಳಲ್ಲಿ ಅಸಮಾಧಾನ ಭುಗಿಲೆದ್ದಿದೆ. ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಇನ್ನೂ ನಾಲ್ಕೈದು ಮಂದಿ ಶಾಸಕರು ಮಂಗಳವಾರ ರಾಜೀನಾಮೆ ಸಲ್ಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಅಲ್ಲದೆ, ಸಂಪುಟದಲ್ಲಿ ಅವಕಾಶ ಸಿಗದ ಆಕಾಂಕ್ಷಿಗಳೆಲ್ಲ ಮಂಗಳವಾರ ಸಭೆ ನಡೆಸಲು ತೀರ್ಮಾನಿಸಿದ್ದು, ಬಂಡಾಯ ತೀವ್ರಗೊಳ್ಳುವ ಸಾಧ್ಯತೆಯಿದೆ. ಜತೆಗೆ ರಾಜ್ಯಾದ್ಯಂತ ಬೆಂಬಲಿಗರಿಂದ ಪ್ರತಿಭಟನೆಗಳು ನಡೆಯುತ್ತಿದ್ದು, ರಾಜ್ಯ ನಾಯಕರು ಹಾಗೂ ಹೈಕಮಾಂಡ್‌ಗೆ ಹೊಸ ಸವಾಲು ಎದುರಾಗಿದೆ.

ಸಂಪುಟ ವಿಸ್ತರಣೆ ಕುರಿತು ಸೋಮವಾರ ಮಧ್ಯಾಹ್ನ ಪಟ್ಟಿ ಪ್ರಕಟಗೊಂಡ ಬೆನ್ನಲ್ಲೇ ಯಶವಂತರಾಯಗೌಡ ಪಾಟೀಲ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಮತ್ತೊಂದೆಡೆ ಬೇಳೂರು ಗೋಪಾಲಕೃಷ್ಣ, ಟಿ.ಬಿ. ಜಯಚಂದ್ರ, ಬಿ.ಕೆ. ಸಂಗಮೇಶ್ವರ್, ಸಿ.ಎಸ್.ನಾಡಗೌಡ ಸೇರಿ ಹಲವು ಶಾಸಕರು ರಾಜೀನಾಮೆ ಬೆದರಿಕೆ ಹಾಕಿದ್ದು, ಮಂಗಳವಾರ ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದ್ದಾರೆ. ಇನ್ನು ಪ್ರಸಾದ್‌ ಅಬ್ಬಯ್ಯ, ಬಸವರಾಜ ಶಿವಣ್ಣನವರ್‌, ತನ್ವೀರ್‌ ಸೇಠ್, ಎಂ. ಕೃಷ್ಣಪ್ಪ, ಪ್ರಿಯಕೃಷ್ಣ ಸೇರಿ ಹಲವರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ರಾಜ್ಯದ ವಿವಿಧೆಡೆ ಪ್ರತಿಭಟನೆ:

ರಾಜ್ಯದ ವಿವಿದೆಡೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಆಕಾಂಕ್ಷಿಗಳ ಬೆಂಬಲಿಗರು ಪ್ರತಿಭಟನೆ ನಡೆಸಿ ಘೋಷಣೆ ಕೂಗಿದ್ದಾರೆ. ವಿಜಯನಗರದಲ್ಲಿ ಎಂ.ಕೃಷ್ಣ ಹಾಗೂ ಪ್ರಿಯಕೃಷ್ಣ ಬೆಂಬಲಿಗರು ಪ್ರತಿಭಟನೆ ನಡೆಸಿದ್ದು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಪಕ್ಷದ ಪದಾಧಿಕಾರಿಗಳ ಹುದ್ದೆಗೆ ಸಾಮೂಹಿಕ ರಾಜೀನಾಮೆ ಸಲ್ಲಿಸುವುದಾಗಿಯೂ ಬೆದರಿಕೆ ಹಾಕಿದ್ದಾರೆ.

ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್‌ ಅವರಿಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ಕೊಪ್ಪಳದಲ್ಲಿ ಟೈರುಗಳಿಗೆ ಬೆಂಕಿ ಹಚ್ಚಿ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದ್ದಾರೆ.

ಇನ್ನು ರಾಜ್ಯದ ವಿವಿಧೆಡೆ ತನ್ವೀರ್‌ ಸೇಠ್‌, ಲಕ್ಷ್ಮೀ ಹೆಬ್ಬಾಳ್ಕರ್‌, ಸಿ.ಎಸ್.ನಾಡಗೌಡ, ಬಸವರಾಜ ಶಿವಣ್ಣನವರ್‌ ಸೇರಿ ಆಕಾಂಕ್ಷಿಗಳ ಪರ ಬೆಂಬಲಿಗರು ಪ್ರತಿಭಟನೆ ನಡೆಸಿ ತಮ್ಮ ನಾಯಕರಿಗೆ ಸಚಿವ ಸ್ಥಾನ ತಪ್ಪಿದ್ದಕ್ಕೆ ಆಕ್ರೋಶ ಹೊರಹಾಕಿದ್ದಾರೆ.

ಹಂಗಾಮಿ ಸಭಾಧ್ಯಕ್ಷರಿಗೆ ರಾಜೀನಾಮೆ ಸಲ್ಲಿಕೆ:

ವಿಜಯಪುರ ಜಿಲ್ಲೆಯ ಇಂಡಿ ಶಾಶಕ ಯಶವಂತರಾಯಗೌಡ ವಿ.ಪಾಟೀಲ್ ಅವರು ಸಚಿವ ಸ್ಥಾನ ತಪ್ಪಿದ ಹಿನ್ನೆಲೆಯಲ್ಲಿ ಹಂಗಾಮಿ ಸಭಾಧ್ಯಕ್ಷರಾಗಿದ್ದ ರುದ್ರಪ್ಪ ಲಮಾಣಿ ಅವರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಜತೆಗೆ ಇಂಡಿ ಕ್ಷೇತ್ರದ ನೂರಾರು ಬೆಂಬಲಿಗರು ಶಾಸಕರ ಭವನದ ಮುಂದೆ ಜಮಾಯಿಸಿ ಪ್ರತಿಭಟನೆಯನ್ನೂ ನಡೆಸಿದರು.

ಇಂದು ರಾಜೀನಾಮೆ ಸಲ್ಲಿಸುವೆ-ಬೇಳೂರು:

ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಅವರಿಗೆ ಮಂತ್ರಿ ಸ್ಥಾನ ಸಿಗದಿರುವುದು ಕಾರ್ಯಕರ್ತರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ. ನನ್ನ ಜನಪ್ರಿಯತೆ ಸಹಿಸದೆ ಮಂತ್ರಿಗಿರಿ ತಪ್ಪಿಸಲಾಗಿದೆ. ಕೇವಲ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗಷ್ಟೇ ಸಚಿವ ಸ್ಥಾನ ನೀಡುವುದಾದರೆ ನಾವೇಕೆ ಇರಬೇಕು? ಸಿದ್ದರಾಮಯ್ಯನವರು ತಮಗೆ ಬೇಕಾದವರಿಗೆ ಮಾತ್ರ ಸಚಿವ ಸ್ಥಾನ ಕೊಡಿಸಿದ್ದಾರೆ. ಹೀಗಾಗಿ ನಾನು ಮಂಗಳವಾರ ಬೆಳಗ್ಗೆ ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದರು.

ಹೈಕಮಾಂಡ್‌ನಿಂದ ಹಿರಿಯರ ಕಡೆಗಣನೆ:

ಹಿರಿಯ ನಾಯಕ ಟಿ.ಬಿ.ಜಯಚಂದ್ರ ಮಾತನಾಡಿ, ಯಾವ ಕಾರಣಕ್ಕೆ ಸಚಿವ ಸ್ಥಾನ ಕೈ ತಪ್ಪಿದೆ ಎಂಬುದು ಗೊತ್ತಿಲ್ಲ. ಸಚಿವರ ಪಟ್ಟಿ ನೋಡಿದರೆ ಯಾವ ಮಾನದಂಡದ ಮೇಲೆ ನೀಡಲಾಗಿದೆ ಎಂಬುದೇ ತಿಳಿಯುತ್ತಿಲ್ಲ. ಕ್ಷೇತ್ರದ ಜನ ರಾಜೀನಾಮೆ ಕೊಟ್ಟು ವಾಪಸ್‌ ಬನ್ನಿ ಎನ್ನುತ್ತಿದ್ದಾರೆ. ಹೈಕಮಾಂಡ್‌ ಹಿರಿಯರನ್ನು ಕಡೆಗಣಿಸಿದೆ. ಹೀಗಾಗಿ ನಾನು ಲೋಕಭವನಕ್ಕೂ ಹೋಗುವುದಿಲ್ಲ. ಎಲ್ಲರ ಜತೆ ಚರ್ಚಿಸಿ ಮಂಗಳವಾರ ನನ್ನ ನಿರ್ಧಾರ ಪ್ರಕಟಿಸುತ್ತೇನೆ ಎಂದು ಹೇಳಿದರು.

50 ಕೋಟಿ ಆಫರ್‌ ಬಂದಿತ್ತು-ಸಂಗಮೇಶ್ವರ್:

ಭದ್ರಾವತಿ ಶಾಸಕ ಸಂಗಮೇಶ್ವರ್‌, 2023ರಲ್ಲೇ ನನಗೆ ಸಚಿವ ಸ್ಥಾನ ನೀಡಬೇಕಿತ್ತು. ಹಿಂದೆ ಬಿಜೆಪಿಯವರು 50 ಕೋಟಿ ರು. ಹಾಗೂ ಸಚಿವ ಸ್ಥಾನ ನೀಡುವುದಾಗಿ ಆಫರ್ ನೀಡಿದ್ದರೂ ಪಕ್ಷಕ್ಕೆ ದ್ರೋಹ ಬಗೆಯಲಿಲ್ಲ. ಆದರೆ ಇಂದು ನಿಷ್ಠಾವಂತರಿಗೆ ಕಾಂಗ್ರೆಸ್‌ನಲ್ಲಿ ಬೆಲೆ ಇಲ್ಲದಂತಾಗಿದೆ. ಕ್ಷೇತ್ರದ ಜನರ ಜೊತೆ ಚರ್ಚಿಸಿ ರಾಜೀನಾಮೆ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಹೇಳಿದರು.

ಆರೋಪ ಪ್ರತ್ಯಾರೋಪ:

ಅಪ್ಪಾಜಿ ನಾಡಗೌಡ ಅವರು, ನನಗೆ ಸಚಿವ ಸ್ಥಾನ ತಪ್ಪಲು ನೇರವಾಗಿ ಎಂ.ಬಿ.ಪಾಟೀಲ್‌ ಕಾರಣ. ವಿಜಯಪುರ ಭಾಗದಲ್ಲಿ ಎಂ.ಬಿ.ಪಾಟೀಲ್‌ ಯಾರನ್ನೂ ಬೆಳೆಯಲು ಬಿಡುತ್ತಿಲ್ಲ. ಹೀಗಾಗಿ ಕ್ಷೇತ್ರದ ಜನತೆ ಜತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದಿದ್ದಾರೆ.

ಇದಕ್ಕೆ ತಿರುಗೇಟು ನೀಡಿರುವ ಸಚಿವ ಎಂ.ಬಿ.ಪಾಟೀಲ್‌, ನನಗೂ ಎಲ್ಲಾ ವೇಳೆಯಲ್ಲೂ ಅವಕಾಶ ಸಿಕ್ಕಿಲ್ಲ. ನನ್ನ ಮೇಲೆ ಯುದ್ಧ ಘೋಷಣೆ ಮಾಡಿರುವ ಅವರಿಗೆ ಒಳ್ಳೆಯದಾಗಲಿ ಎಂದರು.

ಬ್ಲ್ಯಾಕ್‌ಮೇಲ್‌ಗೆ ಅವಕಾಶ ನೀಡಬೇಡಿ: ಹೈಕಮಾಂಡ್‌?

ಸಚಿವ ಸ್ಥಾನ ವಂಚಿತ ಶಾಸಕರು ರಾಜೀನಾಮೆ ಬೆದರಿಕೆ ಒಡ್ಡುತ್ತಿದ್ದು, ಈ ಕುರಿತು ಅವಕಾಶ ವಂಚಿತರು ಬುಧವಾರ ಒಂದಾಗಿ ಚರ್ಚಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಹೈಕಮಾಂಡ್ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಅಸಮಾಧಾನಿತರಿಗೆ ನಿಗಮ-ಮಂಡಳಿಯಲ್ಲಿ ಅವಕಾಶ ನೀಡುವ ಭರವಸೆ ನೀಡಿ ಮನವೊಲಿಸಿ ಎಂದು ರಾಜ್ಯ ನಾಯಕರಿಗೆ ಸೂಚಿಸಿದೆ. ಒಂದು ವೇಳೆ ಒಪ್ಪದಿದ್ದರೆ ರಾಜೀನಾಮೆ ಅಂಗೀಕರಿಸಿ ಎಂದು ಸೂಚಿಸಿರುವುದಾಗಿ ತಿಳಿದುಬಂದಿದೆ.

6 ಬಾರಿ ಶಾಸಕನಾಗಿರುವುದು ಜನ ನನ್ನ ಮೇಲೆ ಇಟ್ಟಿರುವ ಪ್ರೀತಿಗೆ ಸಾಕ್ಷಿ. ಸಂಪುಟದಿಂದ ಕೈ ಬಿಟ್ಟಿರುವುದು ನಿರಾಶೆ ತಂದಿದೆ. ಯಾವುದೇ ಕಾರಣ ತಿಳಿಸದೆ ಸಚಿವ ಸ್ಥಾನದಿಂದ ಕೈಬಿಟ್ಟಿರುವುದು ಇನ್ನಷ್ಟು ಬೇಸರ ತರಿಸಿದೆ.

- ದಿನೇಶ್‌ ಗುಂಡೂರಾವ್, ಮಾಜಿ ಸಚಿವ

ಆಕ್ರೋಶದ ಕಿಚ್ಚು

- ಕೈ ತಪ್ಪಿದ ಸಚಿವ ಸ್ಥಾನ, ಹಲವು ಸಚಿವಾಕಾಂಕ್ಷಿಗಳ ಬೆಂಬಲಿಗರ ಪ್ರತಿಭಟನೆ

- ಹಿಟ್ನಾಳ್‌, ತನ್ವೀರ್‌ ಸೇಠ್‌, ಲಕ್ಷ್ಮೀ ಹೆಬ್ಬಾಳ್ಕರ್‌, ನಾಡಗೌಡ ಬೆಂಬಲಿಗರ ಕಿಡಿ

- ಶಿವಣ್ಣವರ್‌, ಎಂ.ಕೃಷ್ಣಪ್ಪ, ಪ್ರಿಯ ಕೃಷ್ಣ ಬೆಂಬಲಿಗರಿಂದಲೂ ಭಾರಿ ಕೋಪತಾಪ

- ಮೈಸೂರಲ್ಲಿ ಸೇಠ್‌, ಸಿಂಧನೂರಲ್ಲಿ ಬಾದರ್ಲಿ ಬೆಂಬಲಿಗರ ಆತ್ಮಹತ್ಯೆಗೆ ಯತ್ನ

- ಪ್ರಸಾದ್‌ ಅಬ್ಬಯ್ಯ ಬೆಂಬಲಿಗರಿಂದ ಹುಬ್ಬಳ್ಳಿಯಲ್ಲಿ ಬಸ್‌ಗೆ ಕಲ್ಲು ತೂರಾಟ

- ಹಿರೇಬಾಗೇವಾಡಿಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್‌ ಬೆಂಬಲಿಗರಿಂದ ರಸ್ತೆ ತಡೆ ಚಳವಳಿ

- ಪಟ್ಟಿಯಲ್ಲಿ ಹೆಸರು ಸೇರಿಸಿ ವೈದ್ಯ ಹೆಸರು ಕೈಬಿಟ್ಟಿದ್ದಕ್ಕೆ ಬೆಂಬಲಿಗರ ಆಕ್ರೋಶ

- ಜಯಚಂದ್ರ, ದಿನೇಶ್ ಗುಂಡೂರಾವ್‌, ಸಂಗಮೇಶ್ವರರಿಂದ ಅಸಮಾಧಾನ