ವಿಘ್ನೇಶ್ ಎಂ. ಭೂತನಕಾಡು

ಕನ್ನಡಪ್ರಭ ವಾರ್ತೆ ಮಡಿಕೇರಿ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ನೂತನ ಸಚಿವ ಸಂಪುಟದಲ್ಲಿ 19 ಮಂದಿ ಸಚಿವರು ಪ್ರಮಾಣವಚನ ಸ್ವೀಕಾರ ಮಾಡಿದ್ದು, ಈ ಬಾರಿ ಕೊಡಗು ಜಿಲ್ಲೆಗೆ ಮತ್ತೆ ಸಚಿವ ಸ್ಥಾನ ಕೈ ತಪ್ಪಿದೆ. ಜಿಲ್ಲೆಗೆ ಒಂದು ಸಚಿವ ಸ್ಥಾನ ಬಹುತೇಕ ನಿಚ್ಚಳ ಎಂದೇ ನಂಬಿಕೊಂಡಿದ್ದವರಿಗೆ ಕಾಂಗ್ರೆಸ್ ಹೈಕಮಾಂಡ್ ತೀವ್ರ ನಿರಾಸೆ ಮೂಡಿಸಿದೆ.

ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿ (ಎಐಸಿಸಿ) ಪ್ರಕಟಿಸಿರುವ ನೂತನ ಸಚಿವರ ಪಟ್ಟಿಯಲ್ಲಿ ವಿರಾಜಪೇಟೆ ಕ್ಷೇತ್ರದ ಶಾಸಕರಾಗಿರುವ ಎ.ಎಸ್. ಪೊನ್ನಣ್ಣ ಅವರಿಗೆ ಸಾಂವಿಧಾನಿಕ ಹುದ್ದೆಯಾದ ವಿಧಾನಸಭೆಯ ಉಪ ಸಭಾಪತಿ ಸ್ಥಾನದ ಬಗ್ಗೆ ಹೆಸರು ಉಲ್ಲೇಖ ಮಾಡಲಾಗಿದೆ.

ಈ ಬಾರಿಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಕೊಡಗಿಗೆ ಸಚಿವ ಸ್ಥಾನ ಸಿಗುತ್ತದೆ ಎಂದೇ ಹೇಳಲಾಗುತ್ತಿತ್ತು. ಮುಖ್ಯವಾಗಿ ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ದೊರಕುತ್ತದೆ ಎಂದು ಕೊನೇ ಕ್ಷಣದ ವರೆಗೂ ನಿರೀಕ್ಷಿಸಲಾಗಿತ್ತು. ಆದರೆ ಸಚಿವರ ಪಟ್ಟಿಯಲ್ಲಿ ಪೊನ್ನಣ್ಣ ಅವರ ಹೆಸರಿಲ್ಲದಿರುವುದು ಕೊಡಗು ಕಾಂಗ್ರೆಸ್ ಹಾಗೂ ಪೊನ್ನಣ್ಣ ಅವರ ಅಭಿಮಾನಿಗಳಲ್ಲಿ ತೀವ್ರ ಬೇಸರಕ್ಕೆ ಕಾರಣವಾಗಿದೆ.


ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಇಬ್ಬರೊಂದಿಗೂ ಉತ್ತಮ ಬಾಂಧವ್ಯ ಹೊಂದಿರುವ ಎ.ಎಸ್‌. ಪೊನ್ನಣ್ಣ ಅವರಿಗೆ ಆರಂಭದಲ್ಲಿಯೇ ಸಚಿವ ಸ್ಥಾನ ಸಿಗುವ ನಿರೀಕ್ಷೆಯಿತ್ತು. ಕೊನೆಯ ಗಳಿಗೆಯಲ್ಲಿ ಸಚಿವರ ಪಟ್ಟಿಯಲ್ಲಿ ಸ್ಥಾನ ತಪ್ಪಿದೆ.

ಪೊನ್ನಣ್ಣ ಸಿದ್ದರಾಮಯ್ಯ ಸರ್ಕಾರದಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾಗಿ ಕೆಲಸ ಮಾಡುವ ಮೂಲಕ ರಾಜ್ಯದ ಪ್ರಭಾವಿ ಶಾಸಕ ಎಂದೇ ಖ್ಯಾತಿ ಗಳಿಸಿದ್ದರು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಂಪುಟದಲ್ಲಿ ಕೊಡಗಿನ ಎ.ಎಸ್. ಪೊನ್ನಣ್ಣ, ಡಾ. ಮಂತರ್ ಗೌಡ ಅವರಿಗೆ ದೊರಕಬಹುದೆಂಬ ಸಚಿವ ಸ್ಥಾನದ ಆಶಾಭಾವನೆ ಇತ್ತು.

ಕೊಡಗು ಜನಸಂಖ್ಯೆಯಲ್ಲಿ ಪುಟ್ಟ ಜಿಲ್ಲೆಯಾದರೂ ಭೌಗೋಳಿಕವಾಗಿ ದೊಡ್ಡ ಜಿಲ್ಲೆಯಾಗಿದೆ. ಇಲ್ಲಿ ಹಲವು ಸಮಸ್ಯೆಗಳಿವೆ. ಸಮಸ್ಯೆ ಇತ್ಯರ್ಥಕ್ಕೆ ಜಿಲ್ಲೆಗೆ ಒಬ್ಬರು ಸಚಿವರು ಆಗಬೇಕೆಂಬ ಕೂಗು ಈ ಹಿಂದಿನಿಂದಲೂ ಇತ್ತು. ಜಿಲ್ಲೆಗೆ ಹೊರಗಿನವರೇ ಹೆಚ್ಚು ಉಸ್ತುವಾರಿ ಸಚಿವರಾಗಿದ್ದು, ಕೊಡಗಿನ ಬಹು ದೊಡ್ಡ ಸಮಸ್ಯೆಗಳಿಗೆ ಇನ್ನೂ ಮುಕ್ತಿ ದೊರಕಿಲ್ಲ ಎಂಬುದು ನಿಜ.

ಸುಮಾರು 13 ವರ್ಷಗಳಿಂದಲೂ ಕೊಡಗು ಜಿಲ್ಲೆಯ ಶಾಸಕರಿಗೆ ಸಚಿವ ಸ್ಥಾನ ದೊರಕಿಲ್ಲ. 2012ರ ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಂ.ಪಿ. ಅಪ್ಪಚ್ಚು ರಂಜನ್ ಅವರು, 10 ತಿಂಗಳು ಮಾತ್ರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ಸಚಿವರಾಗಿದ್ದರು. ಈ ಹಿಂದಿನ ಶಾಸಕರಾಗಿದ್ದ ಕೆ.ಜಿ. ಬೋಪಯ್ಯ ಅವರು ಸ್ಪೀಕರ್ ಹಾಗೂ ಉಪ ಸ್ಪೀಕರ್ ಹುದ್ದೆಯಲ್ಲಿದ್ದರು.

ಯಾವುದೇ ಸರ್ಕಾರ ಬಂದರೂ ಕೊಡಗು ಜಿಲ್ಲೆಗೆ ಸಚಿವ ಸ್ಥಾನ ನೀಡದೆ ಕಡೆಗಣಿಸಲಾಗುತ್ತಿದ್ದು, ಇದರಿಂದ ಕೊಡಗು ಜಿಲ್ಲೆಗೆ ಈ ಬಾರಿ ಒಂದು ಸ್ಥಾನ ನೀಡಬೇಕೆಂದು ಜಿಲ್ಲೆಯ ಶಾಸಕ ಎ.ಎಸ್. ಪೊನ್ನಣ್ಣ ಹಾಗೂ ಮಂತರ್ ಗೌಡ ಸೇರಿದಂತೆ ಪ್ರಮುಖರು ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದರು.

ಕಾಂಗ್ರೆಸ್ ಪಕ್ಷದ ಹೈಕಮಾಂಡ್, ಪ್ರಾದೇಶಿಕ ಸಮತೋಲನ, ಜಾತಿ ಸಮೀಕರಣ, ಶಾಸಕರ ಹಿರಿತನ ಮತ್ತಿತರ ಮಾನದಂಡಗಳ ಅಡಿಯಲ್ಲಿ ನೂತನ ಸಚಿವ ಸಂಪುಟವನ್ನು ವಿಸ್ತರಿಸಿದೆ. ಆದರೆ ಕೊಡಗು ಜಿಲ್ಲೆಗೆ ಸಂಪುಟದಲ್ಲಿ ಸ್ಥಾನ ಇಲ್ಲದಿರುವುದು ಬೇಸರ ಮೂಡಿಸಿದೆ.ಈ ಬಾರಿ ಕೊಡಗಿನ ಶಾಸಕರಿಗೆ ಸಚಿವ ಸ್ಥಾನ ಸಿಗಲೇಬೇಕಿತ್ತು. ಇಬ್ಬರೂ ಶಾಸಕರು ಕೂಡ ಉತ್ತಮ ಕೆಲಸವನ್ನು ಮಾಡುವ ಮೂಲಕ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದರು. ಸಚಿವ ಸ್ಥಾನ ದೊರಕಿದ್ದರೆ ಕೊಡಗಿನ ಸಮಸ್ಯೆಗಳನ್ನು ಬಗೆಹರಿಸಲು ಸಹಕಾರಿಯಾಗುತ್ತಿತ್ತು. ಪಕ್ಷದ ಹೈಕಮಾಂಡ್ ಪ್ರಾದೇಶಿಕ ಸಮತೋಲನ, ಜಾತಿ ಸಮೀಕರಣ ಅಳೆದು ಸಚಿವ ಸಂಪುಟ ವಿಸ್ತರಿಸಿದೆ. ಕೊಡಗಿಗೆ ಡೆಪ್ಯುಡಿ ಸ್ಪೀಕರ್ ಹುದ್ದೆ ನೀಡಿರುವುದು ಸ್ವಾಗತಾರ್ಹ. ಮುಂದಿನ ದಿನಗಳಲ್ಲಿ ಸಚಿವ ಸ್ಥಾನ ನೀಡಬೇಕೆಂದು ನಾವು ಆಗ್ರಹಿಸುತ್ತೇವೆ.

-ಧರ್ಮಜ ಉತ್ತಪ್ಪ, ಅಧ್ಯಕ್ಷರು ಕೊಡಗು ಜಿಲ್ಲಾ ಕಾಂಗ್ರೆಸ್