ಎರಡು ದಿನಗಳ ಒನಕೆ ಓಬವ್ವ ಉತ್ಸವದಲ್ಲಿ ಕೊನೆಯ ದಿನದಲ್ಲಿ ಭೀಮಣ್ಣ ಗಜಾಪುರ ರಚಿಸಿದ ಗುಡೇಕೋಟೆಯ ಗಟ್ಟಿಗಿತ್ತಿ ಒನಕೆ ಓಬವ್ವ ಕೃತಿ ಆಧಾರಿತ ಗಟ್ಟಿಗಿತ್ತಿ ಓಬವ್ವ ನಾಟಕ ಎಲ್ಲರ ಗಮನ ಸೆಳೆಯಿತು.
ಕೂಡ್ಲಿಗಿ: ಎರಡು ದಿನಗಳ ಒನಕೆ ಓಬವ್ವ ಉತ್ಸವದಲ್ಲಿ ಕೊನೆಯ ದಿನದಲ್ಲಿ ಭೀಮಣ್ಣ ಗಜಾಪುರ ರಚಿಸಿದ ಗುಡೇಕೋಟೆಯ ಗಟ್ಟಿಗಿತ್ತಿ ಒನಕೆ ಓಬವ್ವ ಕೃತಿ ಆಧಾರಿತ ಗಟ್ಟಿಗಿತ್ತಿ ಓಬವ್ವ ನಾಟಕ ಎಲ್ಲರ ಗಮನ ಸೆಳೆಯಿತು. ಸಮಾರೋಪ ಸಮಾರಂಭಕ್ಕೆ ಆಗಮಿಸಿದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಾತಾ ಮಂಜಮ್ಮ ಜೋಗತಿ ಪ್ರಶಂಸೆ ವ್ಯಕ್ತಪಡಿಸಿದರು.ತಾಲೂಕಿನ ಗಡಿಗ್ರಾಮ ಟಿ.ಕಲ್ಲಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಅಮೋಘ ಅಭಿನಯದ ಮೂಲಕ ತವರು ಮನೆ ಗುಡೇಕೋಟೆಯಲ್ಲಿ ಒನಕೆ ಓಬವ್ವಳ ಬಾಲ್ಯ, ಚಿತ್ರದುರ್ಗದ ಕೋಟೆಯಲ್ಲಿ ಗಂಡನ ಜೊತೆ ಜೀವನ ಜೊತೆಗೆ ಚಿತ್ರದುರ್ಗವನ್ನು ಹೈದರಾಲಿಯಿಂದ ರಕ್ಷಿಸಿದ ಬಗೆಯನ್ನು ಅಲ್ಲದೇ ಹೈದರಾಲಿ ಕಡೆಯ ಸೈನಿಕರ ತಲೆ ರುಂಡಾಡಿದ ವೀರಮಹಿಳೆಯ ಅಭಿನಯ ಸೇರಿದಂತೆ ಎಲ್ಲ ಮಕ್ಕಳು ತಮ್ಮ ಮನೋಜ್ಞ ಅಭಿನಯದ ಮೂಲಕ ನೆರೆದಿದ್ದ 30 ಸಾವಿರಕ್ಕೂ ಹೆಚ್ಚು ಪ್ರೇಕ್ಷಕರ ಮನಗೆದ್ದರು. ಟಿ.ಕಲ್ಲಹಳ್ಳಿಯ ಯುವಕ ಹರೀಶ್ ಜಿಂಕೆ ಪ್ರೇಕ್ಷಕರ ಮನಕಲಕುವಂತೆ ಮಕ್ಕಳಿಗೆ ಅಭಿನಯದ ನಿರ್ದೇಶನ ಮಾಡಿದರು.
ಬೆನಕನಹಳ್ಳಿಯ ಜಯಣ್ಣ ಗುಡೇಕೋಟೆಯ ಗಟ್ಟಿಗಿತ್ತಿ ಕೃತಿ ಆಧಾರಿತ ನಾಟಕ ರಚನೆ ಮಾಡಿದರು. ಕೂಡ್ಲಿಗಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಮೈಲೇಶ್ ಬೇವೂರು ಸರ್ಕಾರಿ ಶಾಲೆ ಮಕ್ಕಳಿಗೆ ಓಬವ್ವಳ ಇತಿಹಾಸ ಕುರಿತ ನಾಟಕ ಪ್ರದರ್ಶನಕ್ಕೆ ಅವಕಾಶ ನೀಡಿದರು. ನಾಗರಹಾವು ಚಲನಚಿತ್ರದಲ್ಲಿ ಓಬವ್ವಳನ್ನು ಹೈದರಾಲಿ ಕಡೆಯ ಸೈನಿಕನೊಬ್ಬ ಮೋಸದಿಂದ ಬಂದು ಸಾಯಿಸುತ್ತಾನೆ. ಆದರೆ ಭೀಮಣ್ಣ ಗಜಾಪುರ ಅವರ ಕಥೆ ಆಧಾರಿತ ನಾಟಕದಲ್ಲಿ ಓಬವ್ವ ಯುದ್ದದಲ್ಲಿ ಸಾಯುವುದಿಲ್ಲ. ಗೆದ್ದ ವೀರನಾರಿಯನ್ನು ಮದಕರಿನಾಯಕ ಚಿತ್ರದುರ್ಗದ ಕೆಳಗೋಟೆ, ಮೋಲುಕೋಟೆಯಲ್ಲಿ ಮೆರವಣಿಗೆ ನಡೆಯುತ್ತದೆ ಎಂದು ನಾಟಕದಲ್ಲಿ ತೋರಿಸಿಕೊಡುವುದರ ಮೂಲಕ ವಾಸ್ತವ ಇತಿಹಾಸ ಕಟ್ಟಿಕೊಡುವ ಕೆಲಸ ಮಾಡಿದರು. 40 ನಿಮಿಷಗಳ ನಾಟಕಕ್ಕೆ ಸಮಯದ ಅವಕಾಶ ಇಲ್ಲದಿದ್ದರಿಂದ ಕೆಲವೊಂದು ದೃಶ್ಯಗಳನ್ನು ಕೈಬಿಟ್ಟು ಅಭಿನಯಿಸಲಾಯಿತು.ಕೋಟ್:
ಭೀಮಣ್ಣ ಗಜಾಪುರ ರಚನೆಯ ಗುಡೇಕೋಟೆಯ ಗಟ್ಟಿಗಿತ್ತಿ ಒನಕೆ ಓಬವ್ವ ನಾಟಕ ಇಡೀ ಉತ್ಸವಕ್ಕೆ ಕಳೆಕಟ್ಟಿದಂತಿತ್ತು. ಈ ನಾಟಕ ಹರೀಶ್ ಜಿಂಕೆ ಎನ್ನುವ ಯುವಕ ನಿರೀಕ್ಷೆಗೂ ಮೀರಿ ನಿರ್ದೇಶನ ಮಾಡಿದ್ದಾನೆ. ನಿರ್ದೇಶನದಲ್ಲಿ ನಾಗರಹಾವು ಚಲನಚಿತ್ರದ ಕನ್ನಡ ನಾಡಿನ ವೀರರಮಣಿಯ ಹಾಡಿನ ಕೆಲವು ಸಾಲುಗಳನ್ನು ನಾಟಕದಲ್ಲಿ ಸಂದರ್ಭಕ್ಕೆ ತಕ್ಕಂತೆ ಬಳಿಸಿಕೊಳ್ಳಬೇಕಿತ್ತು. ರಾಜ್ಯ, ರಾಷ್ಟ್ರಮಟ್ಟಕ್ಕೆ ಈ ನಾಟಕ ಸ್ಪರ್ಧೆಗೆ ಹೋಗುವ ಅರ್ಹತೆ ಈ ನಾಟಕಕ್ಕೆ ಇದೆ.-ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆಮಾತಾ ಮಂಜಮ್ಮ ಜೋಗತಿ.
ಒನಕೆ ಓಬವ್ವಳ ಉತ್ಸವದಲ್ಲಿ ಒನಕೆ ಓಬವ್ವಳ ಕಿರು ನಾಟಕಕ್ಕೆ ಜಿಲ್ಲಾಡಳಿತ, ತಾಲೂಕು ಆಡಳಿತ, ಕನ್ನಡ ಮತ್ತು ಸಂಸ್ಕ್ರುತಿ ಇಲಾಖೆ ಅಭಿನಯಿಸಲು ಅನುಮತಿ ನೀಡಿರಲಿಲ್ಲ ಆದರೆ ಶಾಸಕರ ಇತಿಹಾಸ ಪ್ರಜ್ಞೆಯಿಂದ ಅವರ ಅನುಮತಿ ಮೇರೆಗೆ ನಾಟಕ ಪ್ರದರ್ಶನಕ್ಕೆ ಅವಕಾಶ ನೀಡಲಾಯಿತು.