ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮೃತನ ತಾಯಿ ರತ್ನಪ್ರಭಾ ಅವರನ್ನು ಪಾಟಿ ಸವಾಲಿಗೆ ಒಳಪಡಿಸಲು ತನಗೆ ಅನುಮತಿ ನೀಡಲು ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶಿಸುವಂತೆ ಕೋರಿ ರಾಜ್ಯ ಸರ್ಕಾರ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಮುಂದಿನ ಮಂಗಳವಾರಕ್ಕೆ‌ ಮುಂದೂಡಿತು.

ಪ್ರಾಸಿಕ್ಯೂಷನ್‌ (ರಾಜ್ಯ ಸರ್ಕಾರ) ಸಲ್ಲಿಸಿರುವ ಅರ್ಜಿ

ಈ ಕುರಿತಂತೆ ಪ್ರಾಸಿಕ್ಯೂಷನ್‌ (ರಾಜ್ಯ ಸರ್ಕಾರ) ಸಲ್ಲಿಸಿರುವ ಅರ್ಜಿ, ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠದ ಮುಂದೆ ಗುರುವಾರ ವಿಚಾರಣೆಗೆ ಬಂದಿತ್ತು.

ವಿಚಾರಣೆ ವೇಳೆ ಆರೋಪಿಗಳಾದ ದರ್ಶನ್‌, ಲಕ್ಷ್ಮಣ್‌ ಮತ್ತು ನಾಗರಾಜ್‌ ಪರ ವಕೀಲ ಎಸ್‌.ಸುನಿಲ್‌ ಕುಮಾರ್,‌ ಈ ಅರ್ಜಿ ಸಂಬಂಧ ಹಾಜರಾಗಲು ನನಗೆ ದರ್ಶನ್ ಮತ್ತಿತರ ಆರೋಪಿಗಳು ಯಾವುದೇ ಸೂಚನೆ ನೀಡಿಲ್ಲ. ಈ ಪ್ರಕರಣದಲ್ಲಿ ನಾನು ದರ್ಶನ್‌ ಮತ್ತಿತರ ವಕಾಲತ್ತಿನಿಂದ ನಿವೃತ್ತಿ ಪಡೆಯಲು ಬಯಸಿದ್ದೇನೆ‌. ಹೀಗಾಗಿ,‌ ವಿಚಾರಣೆಯನ್ನು‌ ಮುಂದೂಡಬೇಕು ಎಂದು ಕೋರಿದರು.


ಅದಕ್ಕೆ ಪ್ರತಿಯಾಗಿ ಪ್ರಕರಣದ ವಿಶೇಷ ಪ್ರಾಸಿಕ್ಯೂಟರ್‌ ಪಿ.ಪ್ರಸನ್ನ ಕುಮಾರ್, ‌ಇವರ ಈ ಹೇಳಿಕೆ ವಿಚಾರಣೆಯನ್ನು ವಿಳಂಬಿಸುವ ಸೂತ್ರ. ಪ್ರಕರಣದ ವಿಚಾರಣೆಯನ್ನು ನಿಗದಿತ ಮಿತಿಯಲ್ಲಿ ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್‌ ನಿರ್ದೇಶನವಿದೆ. ಈ ಆದೇಶವನ್ನು ದರ್ಶನ್‌ ಅವರೇ ಸುಪ್ರೀಂ ಕೋರ್ಟ್‌ಗೆ ಹೋಗಿ ಪಡೆದುಕೊಂಡು ಬಂದಿದ್ದಾರೆ. ಆದರೆ, ವಿಚಾರಣೆಯಲ್ಲಿ ಈಗ ಪ್ರತಿಯೊಂದಕ್ಕೂ ತಕರಾರು ತೆಗೆದು ವಿಳಂಬಗೊಳಿಸಲಾಗುತ್ತಿದೆ ಎಂದು ಆಕ್ಷೇಪಿಸಿದರು.

ಇದನ್ನು ಅಲ್ಲಗಳೆದ ಸುನಿಲ್‌ ಕುಮಾರ್, ನಮ್ಮ ಕಕ್ಷಿದಾರರಿಗೆ ಜೈಲಿನಲ್ಲಿ ಮನೆ ಊಟ ನೀಡಲು ಮತ್ತು ಸೂಕ್ತವಾದ ಸೌಲಭ್ಯ ಒದಗಿಸಲು ಮತ್ತು ತ್ವರಿತಗತಿಯಲ್ಲಿ ವಿಚಾರಣೆ ನಡೆಯುತ್ತಿಲ್ಲವಾದ ಕಾರಣ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದ್ದೆವು. ವಿಚಾರಣೆ ಬೇಗ ಮುಗಿಸಿ ಎಂದು ನಾವು ಸುಪ್ರೀಂ ಕೋರ್ಟ್‌ಗೆ ವಿಶೇಷ ಮೇಲ್ಮನವಿ ಸಲ್ಲಿಸಿರಲಿಲ್ಲ.‌ ಈ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ ವಿಚಾರಣೆಗೆ ಕಾಲಮಿತಿ ವಿಧಿಸಿ ನಿರ್ದೇಶಿಸಿದೆ ಎಂದು ಸಮಜಾಯಿಷಿ ನೀಡಿದರು.

ಅಂತಿಮವಾಗಿ ನ್ಯಾಯಪೀಠ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿತು.