ಬೆಂಗಳೂರು : ಅಗ್ನಿ ಅನಾಹುತಗಳು ಸಂಭವಿಸಿದಾಗ ತುರ್ತಾಗಿ ಅಗ್ನಿ ನಂದಿಸಲು ನೆರವಾಗುವ ‘ಫೈರ್ ಹೈಡ್ರೆಂಟ್’ ವ್ಯವಸ್ಥೆ ಇರುವ ನಗರದ ಮೊದಲ ನೂತನ ವೈಟ್ ಟಾಪಿಂಗ್ ರಸ್ತೆ ರಂಗಸ್ವಾಮಿ ಟೆಂಪಲ್ ರಸ್ತೆ (ಆರ್.ಟಿ.ಸ್ಟ್ರೀಟ್) ಹಾಗೂ ಮೆಜೆಸ್ಟಿಕ್ ಟ್ಯಾಂಕ್ ಬಂಡ್ ರಸ್ತೆಯನ್ನು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಸೋಮವಾರ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಆರ್.ಟಿ ಸ್ಟ್ರೀಟ್ ಅತ್ಯಂತ ಕಿರಿದಾದ ರಸ್ತೆಯಾಗಿದೆ. ಅಗ್ನಿ ಅನಾಹುತಗಳು ಸಂಭವಿಸಿದಾಗ ಅಗ್ನಿಶಾಮಕ ವಾಹನಗಳು ಪ್ರವೇಶಿಸಲು ಆಗುವುದಿಲ್ಲ. ಹೀಗಾಗಿ, ಫೈರ್ ಹೈಡ್ರೆಂಟ್ ಅಳಡಿಸಲಾಗಿದೆ. ಬೆಂಗಳೂರಿನ ರಸ್ತೆಗಳಲ್ಲಿ ಇಂತಹ ಮೂಲಸೌಕರ್ಯವನ್ನು ಅಳವಡಿಸುತ್ತಿರುವುದು ಇದೇ ಮೊದಲು ಎಂದರು.

₹3,000 ಕೋಟಿ ವೆಚ್ಚದಲ್ಲಿ 250 ಕಿ.ಮೀ. ವೈಟ್ ಟಾಪಿಂಗ್: \Bನಗರದಲ್ಲಿ 196 ಕಿ.ಮೀ. ವೈಟ್ ಟಾಪಿಂಗ್ ರಸ್ತೆ ನಿರ್ಮಿಸಲಾಗಿದೆ. 2ನೇ ಹಂತದ 120 ಕಿ.ಮೀ. ಉದ್ದದ ರಸ್ತೆಗಳ ಪೈಕಿ 60 ಕಿ.ಮೀ ಮುಗಿದಿದ್ದು, ಬಾಕಿ 60 ಕಿ.ಮೀ. ಕಾಮಗಾರಿಯನ್ನು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು. ಮೂರನೇ ಹಂತದಲ್ಲಿ ₹3,000 ಕೋಟಿ ವೆಚ್ಚದಲ್ಲಿ 250 ಕಿ.ಮೀ. ಉದ್ದದ ವೈಟ್ ಟಾಪಿಂಗ್ ರಸ್ತೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಡಿಸೆಂಬರ್ ವೇಳೆಗೆ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಶಾಸಕ ದಿನೇಶ್ ಗುಂಡೂರಾವ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಕೇಂದ್ರ ನಗರ ಪಾಲಿಕೆ ಆಯುಕ್ತ ಜಿ. ಜಗದೀಶ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.


ನೂತನ ಶೌಚಗೃಹ ಉದ್ಘಾಟನೆ

ಟ್ಯಾಂಕ್ ಬಂಡ್ ರಸ್ತೆಯಲ್ಲಿ ಘನತ್ಯಾಜ್ಯ ನಿರ್ವಹಣೆ ಸಂಸ್ಥೆಯಿಂದ ನಿರ್ಮಿಸಿರುವ ಸಾರ್ವಜನಿಕ ಶೌಚಗೃಹ ಸಂಕೀರ್ಣವನ್ನು ಸಚಿವರು ಉದ್ಘಾಟಿಸಿದರು.

ವೈಟ್ ಟಾಪಿಂಗ್ ರಸ್ತೆಗಳ ವಿವರ

ಉಪ್ಪಾರಪೇಟೆ ಪೊಲೀಸ್ ಠಾಣೆಯಿಂದ ಶಾಂತಲಾ ಜಂಕ್ಷನ್‌ವರೆಗಿನ 10.5 ಮೀಟರ್ ಅಗಲ, 418 ಮೀ. ರಸ್ತೆಯನ್ನು 8.74 ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇನ್ನು ಶ್ರೀನಿವಾಸ ಮಂದಿರ ರಸ್ತೆಯಿಂದ ಅವೆನ್ಯೂ ರಸ್ತೆವರೆಗಿನ 3 ಮೀ.ಅಗಲ, 645 ಮೀ.ಉದ್ದದ ರಸ್ತೆಯನ್ನು 2.52 ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ರಸ್ತೆಯ ಅಂದವನ್ನು ಹೆಚ್ಚಿಸಲು ಬೂದು ಮತ್ತು ಕೆಂಪು ಬಣ್ಣದ ಜಿಗ್-ಜಾಗ್ ಪೇವರ್‌ ಬ್ಲಾಕ್‌ಗಳನ್ನು ಬಳಸಿ ಬಫರ್ ವಲಯವನ್ನು ನಿರ್ಮಿಸಲಾಗಿದೆ. ಈ ಎರಡೂ ರಸ್ತೆಗಳಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ ಪುರಾತನ ಶೈಲಿಯ ಎಲ್‌.ಇ.ಡಿ ಬೀದಿ ದೀಪಗಳು ಮತ್ತು ಥರ್ಮೋಪ್ಲಾಸ್ಟಿಕ್ ರಸ್ತೆ ಗುರುತುಗಳನ್ನು ಅಳವಡಿಸಲಾಗಿದೆ.