ರಾಜಧಾನಿಯ ಸಂಚಾರ ದಟ್ಟಣೆ ನಿವಾರಣೆಗೆ ಸರ್ಕಾರ ಕೈಗೊಳ್ಳುತ್ತಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಕೆಲವರು ಅನಗತ್ಯವಾಗಿ ಅಡ್ಡಿಪಡಿಸುತ್ತಿದ್ದು, ನಾವೇನು ಮಾಡಿದರೂ ವಿರೋಧಿಸುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದರು.
-ನಮ್ಮನ್ನ ವಿರೋಧಿಸುವುದೇ ಕೆಲವರಿಗೆ ಕಾಯಕವಾಗಿದೆ: ಮುಖ್ಯಮಂತ್ರಿ-ಮೇಖ್ರಿ ಹೆಬ್ಬಾಳ ಇಂಟಿಗ್ರೇಟೆಡ್ ಕಾರಿಡಾರ್ ಯೋಜನೆ ಕೆಲಸ ಪರಿಶೀಲನೆಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜಧಾನಿಯ ಸಂಚಾರ ದಟ್ಟಣೆ ನಿವಾರಣೆಗೆ ಸರ್ಕಾರ ಕೈಗೊಳ್ಳುತ್ತಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಕೆಲವರು ಅನಗತ್ಯವಾಗಿ ಅಡ್ಡಿಪಡಿಸುತ್ತಿದ್ದು, ನಾವೇನು ಮಾಡಿದರೂ ವಿರೋಧಿಸುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದರು.ಸೋಮವಾರ ಮೇಖ್ರಿ ಹೆಬ್ಬಾಳ ಇಂಟಿಗ್ರೇಟೆಡ್ ಕಾರಿಡಾರ್ ಯೋಜನೆ ಕಾಮಗಾರಿ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಪರ್ಯಾಯ ಮಾರ್ಗಗಳು ಅನಿವಾರ್ಯವಾಗಿದೆ. ಕೆಲವರು ಸುರಂಗ ರಸ್ತೆ ಮಾಡಿದರೂ ಅಪಾದನೆ ಮಾಡ್ತಾರೆ, ಎಲಿವೇಟೆಡ್ ಕಾರಿಡಾರ್ ನಿರ್ಮಿಸಿದರೂ ದೂರುತ್ತಾರೆ. ಎಲ್ಲದರಲ್ಲೂ ಬರೀ ನೆಗೆಟಿವ್ ಯೋಚನೆ ಮಾಡುವುದೇ ಕೆಲವರಿಗೆ ಅಭ್ಯಾಸವಾಗಿಬಿಟ್ಟಿದೆ. ಹಾಗಾದರೆ ವಾಹನ ಸವಾರರು ಎಲ್ಲಿ ಹೋಗಬೇಕು? ರಸ್ತೆಗಳನ್ನು ಅಗಲೀಕರಣ ಮಾಡಲು ಕಟ್ಟಡಗಳನ್ನು ಕೆಡವಲು ಸಾಧ್ಯವೇ? ಇಲ್ಲವೇ ಮೇಲ್ಸೇತುವೆ ಮಾಡಬೇಕು ಅಥವಾ ಭೂಮಿಯ ಒಳಗೆ ಮಾರ್ಗ ನಿರ್ಮಿಸಬೇಕಷ್ಟೆ ಎಂದು ಹೇಳಿದರು.
ಮೇಖ್ರಿ ಸರ್ಕಲ್‌ನಲ್ಲಿ ಸಂಚಾರ ಸುಗಮಗೊಳಿಸಲು ಮೇಲ್ಭಾಗದಲ್ಲಿ ರೋಟರಿ (ರಿಂಗ್) ಸರ್ಕಲ್ ಮಾದರಿಯ ವ್ಯವಸ್ಥೆ ನಿರ್ಮಿಸಲು ಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಯೋಜನೆಗೆ ಅಗತ್ಯವಿರುವ ಕಾರ್ನರ್ ಜಾಗವನ್ನು ನೀಡುವಂತೆ ಈಗಾಗಲೇ ರಕ್ಷಣಾ ಸಚಿವರಿಗೆ ಮನವಿ ಮಾಡಲಾಗಿದ್ದು, ಅವರು ಜಾಗ ಬಿಟ್ಟುಕೊಡುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.ಕಾಮಗಾರಿ ಸಂದರ್ಭದಲ್ಲಿ ನಗರದ ಸಾಮಾನ್ಯ ಸಂಚಾರವನ್ನು ಎಲ್ಲಿಯೂ ಸ್ಥಗಿತಗೊಳಿಸುವುದಿಲ್ಲ. ನಿರ್ಮಾಣ ಕಾರ್ಯದ ವೇಳೆ ಸರಕು ಸಾಗಣೆ ವಾಹನಗಳನ್ನು ಮಾತ್ರ ಕೆಲ ಸಮಯ ನಿರ್ಬಂಧಿಸಲಾಗುವುದು. ಸಾರ್ವಜನಿಕರಿಗೆ ತೊಂದರೆಯಾಗದಂತೆ 9 ಕೋಟಿ ರು. ವೆಚ್ಚದಲ್ಲಿ ಅಕ್ಕಪಕ್ಕದ ಪರ್ಯಾಯ ರಸ್ತೆಗಳನ್ನು ಸಿದ್ಧಪಡಿಸುವ ಜವಾಬ್ದಾರಿಯನ್ನು ಬಿಡಿಎಗೆ ವಹಿಸಲಾಗಿದೆ ಎಂದು ಹೇಳಿದರು.
ಅಭಿವೃದ್ಧಿ ಯೋಜನೆಗಳಿಗೆ ವಿರೋಧ ವ್ಯಕ್ತವಾಗುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಸರ್ಕಾರ ಕೈಗೆತ್ತಿಕೊಳ್ಳುವ ಪ್ರತಿಯೊಂದು ಕೆಲಸವನ್ನೂ ವಿರೋಧಿಸಲೆಂದೇ ವಿಪಕ್ಷಗಳು ಒಂದು ಗುಂಪನ್ನು ನೇಮಿಸಿಕೊಂಡಿವೆ. ಈ ಹಿಂದೆ ಬಿಜೆಪಿ ಹಾಗೂ ಜೆಡಿಎಸ್ ಆಡಳಿತ ಅವಧಿಯಲ್ಲಿ ನಗರದ ಮೂಲಸೌಕರ್ಯಕ್ಕಾಗಿ ಇಂತಹ ಯಾವುದಾದರೂ ಮಹತ್ವದ ಕೆಲಸಗಳನ್ನು ಮಾಡಿದ್ದಾರೆಯೇ? ನಮ್ಮ ಸರ್ಕಾರದ ಅಭಿವೃದ್ಧಿಯ ವೇಗವನ್ನು ಅರಗಿಸಿಕೊಳ್ಳಲು ವಿರೋಧ ಪಕ್ಷದವರಿಗೆ ಆಗುತ್ತಿಲ್ಲ ಎಂದು ಲೇವಡಿ ಮಾಡಿದರು.ಇತ್ತೀಚೆಗೆ ಹೆಲಿಕಾಪ್ಟರ್‌ನಲ್ಲಿ ಸಂಚರಿಸುವಾಗ ಸುರಂಗ ಮಾರ್ಗದ ಯೋಜನೆಗೆ ಸಂಬಂಧಿಸಿದ ಸ್ಥಳವನ್ನು ಪರಿಶೀಲಿಸಿದ್ದೇನೆ. ಲಾಲ್‌ಬಾಗ್ ಬಳಿ ಸುರಂಗ ಮಾರ್ಗ ಹಾದುಹೋಗುವ ಪ್ರದೇಶದಲ್ಲಿ ದೊಡ್ಡ ಹಳ್ಳವಿದ್ದು, ಬಂಡೆ ಇರುವ ಸ್ಥಳಕ್ಕೂ ಸುರಂಗ ಹೊರಬರುವ ಸ್ಥಳಕ್ಕೂ ವ್ಯತ್ಯಾಸವಿದೆ. ಈ ಹಿನ್ನೆಲೆಯಲ್ಲಿ ಯಾವುದೇ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ರೂಪಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಫೋಟೋ ಕ್ಯಾಪ್ಷನ್ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬಳ್ಳಾರಿ ರಸ್ತೆಯಲ್ಲಿ ನಡೆಯುತ್ತಿರುವ ಮೇಖ್ರಿ ಹೆಬ್ಬಾಳ ಇಂಟಿಗ್ರೇಟೆಡ್ ಕಾರಿಡಾರ್ ಯೋಜನೆಯನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಬಿಡಿಎ ಅಧ್ಯಕ್ಷ ಎನ್.ಎ.ಹ್ಯಾರಿಸ್, ಆಯುಕ್ತ ಮಣಿವಣ್ಣನ್ ಸೇರಿದಂತೆ ಇತರರರು ಇದ್ದರು.
ಫೋಟೋ 2ಮೇಖ್ರಿ ಹೆಬ್ಬಾಳ ಇಂಟಿಗ್ರೇಟೆಡ್ ಕಾರಿಡಾರ್ ಯೋಜನೆ ನಕ್ಷೆ