ಕನ್ನಡಪ್ರಭ ವಾರ್ತೆ ಜಮಖಂಡಿ
ನಗರದ ಮೋರೆ ಪ್ಲಾಟ್‌ನಲ್ಲಿ ಮೂರು ಅಂತಸ್ಥಿನ ಮನೆಯೊಂದರಲ್ಲಿ ವಿದ್ಯುತ್ ಶಾರ್ಟಸರ್ಕಿಟ್‌ನಿಂದ ಬೆಂಕಿ ತಗುಲಿದ ಘಟನೆ ಭಾನುವಾರ ನಸುಕಿನ ಜಾವ ನಡೆದಿದ್ದು, ಸುಮಾರು 2 ಕೋಟಿ ರೂಪಾಯಿ ಬೆಲೆಬಾಳುವ ಸಾಮಗ್ರಿಗಳು ಅಗ್ನಿಗೆ ಆಹುತಿಯಾಗಿವೆ ಎಂದು ಗೊತ್ತಾಗಿದೆ.ನಗರದ ನಿವಾಸಿ ನ್ಯಾಯವಾದಿ ಪ್ರಕಾಶ ಚೌರಡ್ಡಿ ಎಂಬುವರಿಗೆ ಸೇರಿದ ಮನೆ. ಮನೆಯಲ್ಲಿದ್ದವರು ನಿದ್ರೆಯಲ್ಲಿದ್ದಾಗ ಅವಘಡ ಸಂಭವಿಸಿದ್ದು, ಭಾರಿ ಅನಾಹುತ ತಪ್ಪಿದಂತಾಗಿದೆ. ಸಮಯ ಪ್ರಜ್ಞೆಯಿಂದಾಗಿ ಮನೆಯಲ್ಲಿದ್ದ ಎಲ್ಲರೂ ಓಡಿ ಹೊರಕ್ಕೆ ಬಂದಿದ್ದಾರೆ. 3ನೇ ಅಂತಸ್ಥಿನಲ್ಲಿ ಮಲಗಿದ್ದ ಕೆಲಸದವನನ್ನು ಹರಸಾಹಸ ಪಟ್ಟು ಕೆಳಕ್ಕಿಳಿಸಲಾಗಿದೆ. ಮನೆಯಲ್ಲಿದ್ದ ಅಲಂಕಾರಿಕ ವಸ್ತುಗಳು, ಪೀಠೋಪಕರಣಗಳು ಬಟ್ಟೆ, ಹಾಸಿಗೆ ಎಲ್ಲವು ಸುಟ್ಟು ಭಸ್ಮವಾಗಿದ್ದು ಸುಮಾರು 2 ಕೋಟಿ ರೂ.ಗಳಷ್ಟು ಹಾನಿಯಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ನೆಲಮಹಡಿಯಲ್ಲಿ ಕಾಣಿಸಿಕೊಂಡ ಬೆಂಕಿ ನೋಡ ನೋಡುತ್ತಿದ್ದಂತೆ ಸಂಪೂರ್ಣ ಕಟ್ಟಡಕ್ಕೆ ಆವರಿಸಿಕೊಂಡಿದೆ ಎನ್ನಲಾಗಿದೆ. ಸುದ್ದಿ ತಿಳಿದಾಕ್ಷಣ ಅಗ್ನಿ ಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ಅಗ್ನಿಶಾಮಕದಳದ ಠಾಣಾ ಅಧಿಕಾರಿ ಎಂ.ಎಸ್.ಹೂಗಾರ, ಟಿ.ವೈ.ಭಂಡಾರಿ, ಎ.ಐ.ಹಣಮರಡ್ಡಿ, ವಿ.ಐ.ಇಮನ್ನದ, ಕೆ.ಆರ್.ದೊಡಮನಿ ಸೇರಿದಂತೆ ರಬಕವಿ-ಬನಹಟ್ಟಿ ಹಾಗೂ ಜಮಖಂಡಿ ತಾಲೂಕಿನ ಅಗ್ನಿಶಾಮಕ ದಳದ ಸಿಬ್ಬಂದಿ ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ.