ಇವಿಎಂ ಮತ್ತು ಎಸ್‌ಐಆರ್ ಹೋರಾಟದಲ್ಲಿ ವಿಫಲವಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರ, ಹಾಲು, ಮೊಸರು ಹಾಗೂ ಬಸ್ ದರ ಏರಿಕೆ ಮೂಲಕ ಜನರ ಆಕ್ರೋಶಕ್ಕೆ ಗುರಿಯಾಗಿದೆ. ಇದರಿಂದ ಜನರ ಗಮನ ಬೇರೆಡೆ ಸೆಳೆಯಲು ಇದೀಗ ಎಥೆನಾಲ್ ವಿಚಾರದಲ್ಲಿ ಜನರನ್ನು ತಪ್ಪುದಾರಿಗೆ ಎಳೆಯುತ್ತಿದೆ.

 ಹುಬ್ಬಳ್ಳಿ : ಇವಿಎಂ ಮತ್ತು ಎಸ್‌ಐಆರ್ ಹೋರಾಟದಲ್ಲಿ ವಿಫಲವಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರ, ಹಾಲು, ಮೊಸರು ಹಾಗೂ ಬಸ್ ದರ ಏರಿಕೆ ಮೂಲಕ ಜನರ ಆಕ್ರೋಶಕ್ಕೆ ಗುರಿಯಾಗಿದೆ. ಇದರಿಂದ ಜನರ ಗಮನ ಬೇರೆಡೆ ಸೆಳೆಯಲು ಇದೀಗ ಎಥೆನಾಲ್ ವಿಚಾರದಲ್ಲಿ ಜನರನ್ನು ತಪ್ಪುದಾರಿಗೆ ಎಳೆಯುತ್ತಿದೆ. ಈ ವಿಚಾರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶತಮೂರ್ಖರಂತೆ ವರ್ತಿಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಾಗ್ದಾಳಿ ನಡೆಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೆಟ್ರೋಲ್‌ನಲ್ಲಿ ನಿಗದಿತ ಶೇ. 20ರ ಬದಲಿಗೆ ಶೇ. 26ರಿಂದ 31ರಷ್ಟು ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂಬ ರಾಜ್ಯ ಸರ್ಕಾರದ ಆರೋಪ ಹಾಸ್ಯಾಸ್ಪದ. ರಾಹುಲ್ ಗಾಂಧಿ ಟ್ವೀಟ್ ಮಾಡಿದ ಬೆನ್ನಲ್ಲೇ ರಾಜ್ಯ ಸರ್ಕಾರ ಪೆಟ್ರೋಲಿಯಂ ಕಂಪನಿಗಳಿಂದ ಮಾನ್ಯತೆ ಪಡೆಯದ ಪ್ರಯೋಗಾಲಯದಲ್ಲಿ ಪೆಟ್ರೋಲ್ ಪರೀಕ್ಷೆ ನಡೆಸಿ ವರದಿ ಬಿಡುಗಡೆ ಮಾಡಿದೆ. ಆದರೆ, ಆ ವರದಿಯಲ್ಲೇ ಹಲವು ಲೋಪಗಳಿದ್ದು, ಪರೀಕ್ಷಾ ಪ್ರಕ್ರಿಯೆ ಸಂಪೂರ್ಣ ಕಾನೂನುಬಾಹಿರವಾಗಿದೆ ಎಂದು ಆರೋಪಿಸಿದರು.

ರಾಜ್ಯ ಸರ್ಕಾರ 63 ಇಂಧನ ಮಾದರಿ ಸಂಗ್ರಹ

ರಾಜ್ಯ ಸರ್ಕಾರ 63 ಇಂಧನ ಮಾದರಿ ಸಂಗ್ರಹಿಸಿದ್ದರೂ, ಕೇವಲ 14 ಮಾದರಿಗಳ ವರದಿಯನ್ನಷ್ಟೇ ಬಹಿರಂಗಪಡಿಸಿದೆ. ಆದರೆ, ಅಕ್ಟೋಬರ್‌ನಲ್ಲಿ ದೇಶಾದ್ಯಂತ 893 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಅವುಗಳಲ್ಲಿ ಕರ್ನಾಟಕದ 56 ಮಾದರಿಗಳೂ ಸೇರಿವೆ. ಎಲ್ಲ ಮಾದರಿಗಳಲ್ಲೂ ಎಥೆನಾಲ್ ಪ್ರಮಾಣ ಶೇ.19ರಿಂದ 21ರ ಮಿತಿಯಲ್ಲಿದೆ ಎಂದು ಸ್ಪಷ್ಟಪಡಿಸಿದರು.

2005ರ ಇಂಧನ ನಿಯಂತ್ರಣ ಆದೇಶದ ಪ್ರಕಾರ ಮಾದರಿ ಸಂಗ್ರಹ ಮತ್ತು ಪರೀಕ್ಷೆಗೆ ಕಟ್ಟುನಿಟ್ಟಿನ ನಿಯಮಗಳಿವೆ. ಸಾಮಾನ್ಯ ಬಾಟಲಿಗಳಲ್ಲಿ ಮಾದರಿ ಸಂಗ್ರಹಿಸಿ ಖಾಸಗಿ ಪ್ರಯೋಗಾಲಯದಲ್ಲಿ ಪರೀಕ್ಷಿಸುವಂತಿಲ್ಲ. ಸರ್ಕಾರದಿಂದ ಅಧಿಸೂಚಿತ ಪ್ರಯೋಗಾಲಯದಲ್ಲೇ ಪರೀಕ್ಷೆ ನಡೆಯಬೇಕು. ಕೇವಲ ಎನ್‌ಎಬಿಎಲ್ ಮಾನ್ಯತೆ ಇದ್ದರೆ ಸಾಲದು. ಆದರೂ, ರಾಜ್ಯ ಸರ್ಕಾರ ಶ್ರೀರಾಮ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನಲ್ಲಿ ಪರೀಕ್ಷೆ ನಡೆಸಿದ್ದು, ಅಲ್ಲಿ ಪೆಟ್ರೋಲ್ ತಪಾಸಣೆಗೆ ಅಗತ್ಯ ಸಾಧನಗಳೇ ಇಲ್ಲ ಎಂದು ದೂರಿದರು.

ಎಥೆನಾಲ್ ಪ್ರಮಾಣ ಹೆಚ್ಚಿದ್ದರೆ ಅದರ ಸಾಂಧ್ರತೆ (ಡೆನ್ಸಿಟಿ) ಹೆಚ್ಚಿರಬೇಕು

ಪೆಟ್ರೋಲ್‌ನಲ್ಲಿ ಎಥೆನಾಲ್ ಪ್ರಮಾಣ ಹೆಚ್ಚಿದ್ದರೆ ಅದರ ಸಾಂಧ್ರತೆ (ಡೆನ್ಸಿಟಿ) ಹೆಚ್ಚಿರಬೇಕು. ಆದರೆ, ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ವರದಿಯಲ್ಲೇ ಸಾಂಧ್ರತೆ ಕಡಿಮೆ ಇದೆ. ಇದಕ್ಕೆ ಸಂಬಂಧಿಸಿದಂತೆ ಸಚಿವರು ಸಮರ್ಪಕ ಉತ್ತರ ನೀಡಿಲ್ಲ. ಅಂದಾಜಿನ ಆಧಾರದಲ್ಲಿ ವರದಿ ಸಿದ್ಧಪಡಿಸಲಾಗಿದೆ ಎಂದು ಟೀಕಿಸಿದರು.

ತೆರಿಗೆ ಹೊರತುಪಡಿಸಿ ಒಂದು ಲೀಟರ್ ಶುದ್ಧ ಪೆಟ್ರೋಲ್ ಬೆಲೆ ₹53 ಇದೆ. ತೆರಿಗೆ, ಅಬಕಾರಿ ಸುಂಕ ಹಾಗೂ ಬಂಕ್ ಮಾಲೀಕರ ಕಮಿಷನ್ ಸೇರಿ ಸುಮಾರು ₹100ರ ಗಡಿ ದಾಟಿದೆ. ಇನ್ನು ಒಂದು ಲೀಟರ್ ಎಥೆನಾಲ್ ಬೆಲೆ ₹55.72 ಇದೆ. ರೈತರಿಂದ ಎಥೆನಾಲ್ ಖರೀದಿಸುವುದು ಆತ್ಮನಿರ್ಭರ ಯೋಜನೆಗೆ ಬಲ ನೀಡುವುದರ ಜತೆಗೆ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸಲು ಮತ್ತು ತೈಲ ಆಮದು ಪ್ರಮಾಣ ತಗ್ಗಿಸಲು ಸಹಕಾರಿಯಾಗಿದೆ ಎಂದರು.

ರಾಹುಲ್ ಗಾಂಧಿ ಈ ಹಿಂದೆಯೂ ಇ- 20 ಇಂಧನಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ರೈತರ ಹಿತಾಸಕ್ತಿಗೆ ವಿರುದ್ಧವಾದ ನಿಲುವು ಹೊಂದಿರುವ ಕಾಂಗ್ರೆಸ್ ಇದೀಗ ಎಥೆನಾಲ್ ಮಿಶ್ರಣದ ವಿರುದ್ಧ ಆಂದೋಲನ ನಡೆಸಲು ಮುಂದಾಗಿದೆ. ರೈತರು ಕಾಂಗ್ರೆಸ್‌ನ ಈ ರಾಜಕೀಯವನ್ನು ಅರ್ಥಮಾಡಿಕೊಳ್ಳಬೇಕು ಎಂದರು.