ಹೊಸಪೇಟೆ: ವಿಜಯನಗರ ಕ್ಷೇತ್ರಕ್ಕೆ ಪ್ರಸಕ್ತ ಸಾಲಿನಲ್ಲಿ ತಾವು ತಂದಿರುವ ಅನುದಾನ, ಸರ್ಕಾರದಿಂದ ಬಿಡುಗಡೆ ಮಾಡಿರುವ ಅನುದಾನ ಹಾಗೂ ಕ್ಷೇತ್ರದಲ್ಲಿ ತಾವು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ವಿವರ ಒದಗಿಸಬೇಕು ಎಂದು ಬಿಜೆಪಿ ವಿಜಯನಗರ ಕ್ಷೇತ್ರದ ಮಂಡಳದ ವತಿಯಿಂದ ಶಾಸಕ ಎಚ್.ಆರ್. ಗವಿಯಪ್ಪ ಅವರ ಕಚೇರಿಗೆ ಶನಿವಾರ ಪತ್ರ ಸಲ್ಲಿಸಲಾಯಿತು.
ಮಂಡಳ ಅಧ್ಯಕ್ಷ ಶಂಕರ ಮೇಟಿ ಮಾತನಾಡಿ, ಕ್ಷೇತ್ರದ ಮತದಾರರು ಅಭಿವೃದ್ಧಿ ಬಯಸುತ್ತಿದ್ದಾರೆ. ಹಾಗಾಗಿ ಜನತೆಯ ಪರವಾಗಿ ನಾವು ಧ್ವನಿ ಎತ್ತಿದ್ದೇವೆ. ತಾವು ಶಾಸಕರಾದ ನಂತರ ಕ್ಷೇತ್ರಕ್ಕೆ ತಂದ ಅನುದಾನ ಎಷ್ಟು? ಇದುವರೆಗೂ ಬಿಡುಗಡೆಯಾದ ಅನುದಾನ ಎಷ್ಟು? ಅನುದಾನ ಬಿಡುಗಡೆಗೊಂಡಿದ್ದರೆ, ಅದರಿಂದ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಯಾವುವು? ಕ್ಷೇತ್ರದ ಅಭಿವೃದ್ಧಿಗಾಗಿ ತಾವು ರೂಪಿಸಿರುವ ಹಾಗೂ ಚುನಾವಣಾ ಸಂದರ್ಭದಲ್ಲಿ ತಾವು ಕೊಟ್ಟ ಭರವಸೆಗಳಿಗನುಗುಣವಾಗಿ ರೂಪಿಸಿರುವ ಯೋಜನೆ ಹಾಗೂ ಅದು ಅನುಷ್ಠಾನದಲ್ಲಿದ್ದರೆ ಅದರ ವಿವರ ಕೊಡಿ ಎಂದು ಆಗ್ರಹಿಸಿದರು.
ಕ್ಷೇತ್ರದಲ್ಲಿ ಬರಗಾಲದಿಂದ ತತ್ತರಿಸಿರುವ ರೈತರಿಗೆ ಸರ್ಕಾರದಿಂದ ಬಿಡುಗಡೆ ಮಾಡಿಸಿರುವ ಪರಿಹಾರ ಎಷ್ಟು? ಪರಿಹಾರ ಒದಗಿಸಿಕೊಟ್ಟಿದ್ದರೆ ಅದರ ವಿವರ ಒದಗಿಸಬೇಕು. ಕ್ಷೇತ್ರದಲ್ಲಿ ನಿರುದ್ಯೋಗ ನಿರ್ಮೂಲನೆಗೆ ಸೃಷ್ಟಿಸಿರುವ ಉದ್ಯೋಗ ವಿವರ. ಶೈಕ್ಷಣಿಕ ಅಭಿವೃದ್ಧಿಗಾಗಿ ಕೈಗೊಂಡ ಕ್ರಮಗಳೇನು? ಕ್ಷೇತ್ರದಲ್ಲಿ ಬಡವರಿಗಾಗಿ ಆರೋಗ್ಯ ಸೇವೆ ಒದಗಿಸಲು ರೂಪಿಸಿರುವ ಯೋಜನೆ, ಕ್ಷೇತ್ರದಲ್ಲಿ ಹೊಸದಾಗಿ ಎಷ್ಟು ಕಿ.ಮೀ. ರಸ್ತೆ ನಿರ್ಮಿಸಲಾಗಿದೆ. ಕುಡಿಯುವ ನೀರು ಹಾಗೂ ಒಳಚರಂಡಿ ವ್ಯವಸ್ಥೆ ಪೂರ್ಣಗೊಳಿಸಲು ಹೊಸದಾಗಿ ಕೈಗೊಂಡ ಕಾಮಗಾರಿಗಳ ವಿವರ ಕೊಡಿ, ಅನಂತಶಯನಗುಡಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ಸ್ಥಗಿತಗೊಂಡಿದ್ದು, ಕ್ರಮವಹಿಸಬೇಕು. ಜೋಳದರಾಶಿ ಗುಡ್ದದ ಕಾಮಗಾರಿ ಸ್ಥಗಿತವಾಗಿದ್ದು ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.ಬಿಜೆಪಿ ಮುಖಂಡರಾದ ಮನೋಹರ್ ಗುಪ್ತಾ, ಆರ್. ನಾಗರಾಜ, ಚಂದ್ರು ದೇವಲಾಪುರ, ಬಿ. ಶ್ರೀನಿವಾಸ್, ಎಂ.ಬಿ. ಉಮಾ, ವೆಂಕಟೇಶ್, ಗೌತಮ್ಮ, ಅನುರಾಧಾ ಮತ್ತಿತರರಿದ್ದರು.