ಕನ್ನಡಪ್ರಭ ವಾರ್ತೆ ವಿಧಾನಸಭೆ
ಈ ನಡುವೆ ಭೋಜನ ವಿರಾಮದ ವೇಳೆಯಲ್ಲೂ ಪ್ರತಿಪಕ್ಷ ನಾಯಕರ ಭಾಷಣ ಪ್ರಸಾರವಾಗದಿರುವುದನ್ನು ಗಂಭೀರವಾಗಿ ಪರಿಗಣಿಸಿದ ಸಭಾಧ್ಯಕ್ಷ ಯು.ಟಿ.ಖಾದರ್, ಈ ಬಗ್ಗೆ ತನಿಖೆ ಕೈಗೊಂಡು ಸಂಬಂಧಪಟ್ಟ ಮುಖ್ಯಸ್ಥರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್, ಸಂಬಂಧಪಟ್ಟ ಅಧಿಕಾರಿಯನ್ನು ಅಮಾನತುಗೊಳಿಸಿ ಕ್ರಮ ಕೈಗೊಳ್ಳುವುದಾಗಿ ಅಶ್ವಾಸನೆ ನೀಡಿದರು. ಇದಕ್ಕೆ ಬಿಜೆಪಿ ಸದಸ್ಯರು, ಕಿರಿಯ ಸಿಬ್ಬಂದಿ ವಿರುದ್ಧ ಕೈಗೊಳ್ಳದೆ ಹಿರಿಯ ಅಧಿಕಾರಿ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಮಂಗಳವಾರ ಪ್ರತಿಪಕ್ಷ ನಾಯಕ ಆರ್.ಅಶೋಕ್, ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯ ಅವಾಂತರ ಮತ್ತು ನೇಮಕಾತಿಯಲ್ಲಿ ಅಕ್ರಮ ಕುರಿತು ನಿಲುವಳಿ ಸೂಚನೆ ಸಂಬಂಧ ಪ್ರಸ್ತಾಪಿಸಿ ಮಾತನಾಡುತ್ತಿದ್ದರು. ಈ ವೇಳೆ ಪ್ರತಿಪಕ್ಷ ಉಪನಾಯಕ ಅರವಿಂದ್ ಬೆಲ್ಲದ್, ಸದನದ ಕಾರ್ಯಕಲಾಪದ ನೇರ ಪ್ರಸಾರವಾಗುತ್ತಿದೆಯಾದರೂ ಪ್ರತಿಪಕ್ಷ ನಾಯಕರು ಮಾತನಾಡುತ್ತಿರುವುದು ಸದನದ ಟಿವಿಗಳಲ್ಲಿ ಬರುತ್ತಿಲ್ಲ. ಕೇವಲ ಸಭಾಧ್ಯಕ್ಷರು ಮತ್ತು ಆಡಳಿತಾರೂಢ ಸದಸ್ಯರನ್ನು ಮಾತ್ರ ತೋರಿಸಲಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲದೆ, ಈ ಹಿಂದೆ ವಾರ್ತಾ ಇಲಾಖೆ ಕಲಾಪವನ್ನು ನೇರ ಪ್ರಸಾರ ಮಾಡುತ್ತಿದ್ದು, ಅದನ್ನು ಈಗ ಕಾಂಗ್ರೆಸ್ ಕಾರ್ಯಕರ್ತರಿಗೆ ಯಾಕೆ ಕೊಡಲಾಗಿದೆ? ಎಂದು ಹೇಳಿದರು.ಇದಕ್ಕೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅಕ್ಷೇಪ ವ್ಯಕ್ತಪಡಿಸಿ, ಅರವಿಂದ ಬೆಲ್ಲದ್ ಹೇಳಿಕೆಯನ್ನು ಕಟುವಾಗಿ ಟೀಕಿಸಿದರು. ಆಗ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವಿನ ಮಾತಿನ ಚಕಮಕಿ, ಆರೋಪ ಮತ್ತು ಪ್ರತ್ಯಾರೋಪಕ್ಕೆ ಎಡೆಮಾಡಿಕೊಟ್ಟಿತು. ಮಧ್ಯಪ್ರವೇಶಿಸಿದ ಸಭಾಧ್ಯಕ್ಷ ಯು.ಟಿ.ಖಾದರ್, ತಾಂತ್ರಿಕ ಸಮಸ್ಯೆಯಾಗಿರಬೇಕು. ಅದನ್ನು ಸರಿಪಡಿಸಲು ಸೂಚಿಸಲಾಗಿದೆ ಎಂದರು.
ಅಷ್ಟಕ್ಕೇ ಸುಮನಾಗದ ಬಿಜೆಪಿ ಶಾಸಕರು ಎದ್ದುನಿಂತು ಮಾತನಾಡುತ್ತಿದ್ದರು. ಪ್ರತಿಯಾಗಿ ಕಾಂಗ್ರೆಸ್ ಶಾಸಕರು ಮಾತನಾಡುತ್ತಿದ್ದಾಗ ಸದನದಲ್ಲಿ ಗದ್ದಲದ ವಾತಾವರಣ ಉಂಟಾಯಿತು. 10 ನಿಮಿಷ ಕಳೆದರೂ ಪ್ರತಿಪಕ್ಷ ನಾಯಕರು ಮಾತನಾಡುವುದನ್ನು ತೋರಿಸದಿದ್ದಾಗ ಮತ್ತಷ್ಟು ವಾಗ್ವಾದ ನಡೆಯಿತು. ಕಲಾಪ ಹತೋಟಿಗೆ ಬಾರದ ಕಾರಣ 10 ನಿಮಿಷ ಕಾಲ ಮುಂದೂಡಿಕೆ ಮಾಡಲಾಯಿತು. ಬಳಿಕ ಸದನ ಸೇರಿದಾಗ ಸಭಾಧ್ಯಕ್ಷರು, ಸಮಸ್ಯೆ ಸರಿಪಡಿಸುವಂತೆ ತಂತ್ರಜ್ಞರಿಗೆ ತಿಳಿಸಲಾಗಿದೆ. ಮಧ್ಯಾಹ್ನದ ವೇಳೆ ಸರಿಹೋಗಲಿದೆ ಎಂದು ಹೇಳಿ ಭೋಜನ ವಿರಾಮಕ್ಕೆ ಕಲಾಪ ಮುಂದೂಡಿದರು.ತನಿಖೆ, ಅಮಾನತು: ಭೋಜನ ವಿರಾಮದ ಬಳಿಕವೂ ಆಡಳಿತ ಪಕ್ಷದ ಸದಸ್ಯರು ಮತ್ತು ಸಭಾಧ್ಯಕ್ಷರನ್ನು ಮಾತ್ರ ತೋರಿಸಲಾಗುತ್ತಿತ್ತು. ಇದನ್ನು ಗಮನಿಸಿದ ಯು.ಟಿ.ಖಾದರ್ ಈ ಬಗ್ಗೆ ಸಂಬಂಧಪಟ್ಟ ಮುಖ್ಯಸ್ಥರ ವಿರುದ್ಧ ತನಿಖೆ ಕೈಗೊಂಡು ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ಸಚಿವ ಎಚ್.ಕೆ.ಪಾಟೀಲ್, ಸಂಬಂಧಪಟ್ಟವರನ್ನು ಅಮಾನತುಗೊಳಿಸಿ ಕ್ರಮ ಕೈಗೊಳ್ಳಲಾಗುವುದು. ಪ್ರತಿಪಕ್ಷದವರನ್ನು ಸಹ ಟಿವಿಯಲ್ಲಿ ತೋರಿಸಬೇಕು. ಇದರಲ್ಲಿ ಯಾವುದೇ ಮುಲಾಜಿಲ್ಲ ಎಂದು ಹೇಳಿದರು. ಆದರೆ, ಬಿಜೆಪಿ ಸದಸ್ಯರು ಕೆಳಹಂತದವರನ್ನು ಅಮಾನತುಗೊಳಿಸುವ ಬದಲು ಹಿರಿಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಸಭಾಧ್ಯಕ್ಷರ ಸೂಚನೆಗೆ ಬಿಜೆಪಿ ಸದಸ್ಯರು ಅಭಿನಂದನೆ ಸಲ್ಲಿಸಿದರು.