ಬಿಜೆಪಿಗರಿಗೆ ಗುಡ್ಡಗಳ ಮೇಲೆ ಪ್ರೀತಿ, ಕಾಂಗ್ರೆಸಿಗರಿಗೆ ಬಡವರ ಮೇಲೆ ಪ್ರೀತಿ

KannadaprabhaNewsNetwork | Published : Nov 7, 2024 11:49 PM

ಸಾರಾಂಶ

ಬಿಜೆಪಿಯವರು ಕ್ಷೇತ್ರಕ್ಕೆ ಬಂದು ನಮ್ಮನ್ನು ಬಯ್ಯುತ್ತಾರೆ.

ಸಂಡೂರು: ಬಿಜೆಪಿಯವರಿಗೆ ಇಲ್ಲಿನ ಗುಡ್ಡಗಳ ಮೇಲೆ ಪ್ರೀತಿ. ಆದರೆ, ಕಾಂಗ್ರೆಸ್‌ಗೆ ಬಡವರ ಮೇಲೆ ಪ್ರೀತಿ ಇದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.

ತಾಲೂಕಿನ ವಿವಿಧ ಗ್ರಾಮಗಳಲ್ಲಿ ಗುರುವಾರ ಕಾಂಗ್ರೆಸ್‌ನಿಂದ ಹಮ್ಮಿಕೊಂಡಿದ್ದ ಬಹಿರಂಗ ಪ್ರಚಾರ ಸಭೆಗಳಲ್ಲಿ ಅವರು ಮಾತನಾಡಿದರು. ಬಿಜೆಪಿಯ ಜನಾರ್ದನ ರೆಡ್ಡಿ, ಶ್ರೀರಾಮುಲು, ಕರುಣಾಕರ ರೆಡ್ಡಿ ಮಂತ್ರಿಗಳಾಗಿದ್ದರು. ಶಾಂತಕ್ಕ, ಫಕ್ಕೀರಪ್ಪ, ದೇವೇಂದ್ರಪ್ಪ ಸಂಸದರಾಗಿದ್ದರು. ಕ್ಷೇತ್ರದ ಅಭಿವೃದ್ಧಿಗೆ ಅವರ ಕೊಡುಗೆ ಏನೂ ಇಲ್ಲ. ಅವರಿಂದ ಒಂದು ಬಲ್ಬ್ ಇಲ್ಲ, ಗುಡಿ ಇಲ್ಲ, ಅದಕ್ಕೆ ಸುಣ್ಣವಿಲ್ಲ ಎಂದರು.

ಬಿಜೆಪಿಯವರು ಕ್ಷೇತ್ರಕ್ಕೆ ಬಂದು ನಮ್ಮನ್ನು ಬಯ್ಯುತ್ತಾರೆ. ಅವರು ನಮ್ಮನ್ನು ಬಯ್ಯಲಿ. ಅವರ ಜತೆ ನಮ್ಮ ಅಣ್ಣನೂ ಸೇರಿಕೊಂಡಿದ್ದಾನೆ. ಅವರನ್ನು ಪ್ರೀತಿಯಿಂದ ಸ್ವಾಗತಿಸಿ. ನಮ್ಮನ್ನು ಬಯ್ಯುವ ಅವರಿಗೆ ಲಡ್ಡು ಕೊಡಿ. ಮತವನ್ನು ಈ. ಅನ್ನಪೂರ್ಣಾ ತುಕಾರಾಂ ಅವರಿಗೆ ನೀಡಿ ಎಂದು ಮನವಿ ಮಾಡಿದರು.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನೀಡಿದ್ದ ೧೬೫ ಭರವಸೆಗಳಲ್ಲಿ ೧೬೨ ಭರವಸೆಗಳನ್ನು ಈಡೇರಿಸಿದೆ. ಗ್ಯಾರಂಟಿ ಯೋಜನೆಗಳಿಗಾಗಿ ವಾರ್ಷಿಕ ₹೬೦ ಸಾವಿರ ಕೋಟಿಯಂತೆ ೫ ವರ್ಷಕ್ಕೆ ₹೩ ಲಕ್ಷ ಕೋಟಿ ಖರ್ಚು ಮಾಡುತ್ತಿದೆ. ೨೦೦೪ರ ಹಿಂದೆ ಈ ಕ್ಷೇತ್ರ ಅತಿ ಹಿಂದುಳಿದ ಕ್ಷೇತ್ರವೆನಿಸಿತ್ತು. ಇಂದು ಅಭಿವೃದ್ಧಿ ಹೊಂದಿದ ಕ್ಷೇತ್ರವಾಗಿದೆ ಎಂದರು.

ತುಂಗಭದ್ರಾ ನದಿ ನೀರನ್ನು ಪೂರೈಸಲು ಕ್ರಮಕೈಗೊಳ್ಳಲಾಗಿದೆ. ಕ್ಷೇತ್ರದಲ್ಲಿನ ೫೯೦ ಕಿ.ಮೀ. ರಸ್ತೆ ಅಭಿವೃದ್ಧಿ ಪಡಿಸಲಾಗಿದೆ. ಇಲ್ಲಿ ೧೧ ವಸತಿ ಶಾಲೆಗಳು, ೩ ಐಟಿಐ ಹಾಗೂ ಒಂದು ಸರ್ಕಾರಿ ಪಾಲಿಟೆಕ್ನಿಕ್ ಆರಂಭಿಸಲಾಗಿದೆ. ೨೦೦ ಬೆಡ್ ಆಸ್ಪತ್ರೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಕ್ಷೇತ್ರದಲ್ಲಿ ೧೩ ಆ್ಯಂಬುಲೆನ್ಸ್ ವಾಹನಗಳ ಮೂಲಕ ಆರಂಭಿಸಲಾಗಿರುವ ಕ್ಲಿನಿಕ್ ಆನ್ ವೀಲ್ಸ್ ಪ್ರಯೋಜನವನ್ನು ೭ ಲಕ್ಷಕ್ಕೂ ಹೆಚ್ಚು ಜನರು ಪಡೆದುಕೊಂಡಿದ್ದಾರೆ ಎಂದರು.

ಕಾರ್ಮಿಕ ಸಚಿವ ಸಂತೋಷ್ ಲಾಡ್ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣಾ ತುಕಾರಾಂ ಪರ ಪ್ರಚಾರ ನಡೆಸಿದರು.

Share this article