ಬಿಜೆಪಿ ಪ್ರಣಾಳಿಕೆ, ಬೊಮ್ಮಾಯಿ ಹಳೆಯ ವಿಡಿಯೋ ಬಳಸಿ ಸಿಎಂ ವಕ್ಫ್‌ ತಿರುಗೇಟು

KannadaprabhaNewsNetwork |  
Published : Nov 05, 2024, 12:48 AM IST
ಬಸವರಾಜ ಬೊಮ್ಮಾಯಿ | Kannada Prabha

ಸಾರಾಂಶ

ಮುಡಾ ಪ್ರಕರಣದಲ್ಲಿ ತಮ್ಮ ಕುಟುಂಬ ನ್ಯಾಯಾಲಯದ ಮೆಟ್ಟಿಲೇರುವಂತೆ ಮಾಡಿರುವ ಹಾಗೂ ವಕ್ಫ್‌ ವಿಚಾರ ಮುಂದಿಟ್ಟು ಹೋರಾಡುತ್ತಿರುವ ಬಿಜೆಪಿಗೆ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಕ್ಫ್‌ ಆಸ್ತಿ ಕುರಿತು ಮಾತನಾಡಿರುವ ಹಳೆ ವಿಡಿಯೋವೊಂದನ್ನು ಬಿಡುಗಡೆ ಮಾಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ, ಬೆಂಗಳೂರು

ಮುಡಾ ಪ್ರಕರಣದಲ್ಲಿ ತಮ್ಮ ಕುಟುಂಬ ನ್ಯಾಯಾಲಯದ ಮೆಟ್ಟಿಲೇರುವಂತೆ ಮಾಡಿರುವ ಹಾಗೂ ವಕ್ಫ್‌ ವಿಚಾರ ಮುಂದಿಟ್ಟು ಹೋರಾಡುತ್ತಿರುವ ಬಿಜೆಪಿಗೆ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಕ್ಫ್‌ ಆಸ್ತಿ ಕುರಿತು ಮಾತನಾಡಿರುವ ಹಳೆ ವಿಡಿಯೋವೊಂದನ್ನು ಬಿಡುಗಡೆ ಮಾಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಇದರ ಜೊತೆಗೆ, 2014ರ ಲೋಕಸಭೆ ಚುನಾವಣೆ ವೇಳೆ ವಕ್ಫ್‌ ಆಸ್ತಿ ಒತ್ತುವರಿ ತೆರವುಗೊಳಿಸುವುದಾಗಿ ಬಿಜೆಪಿ ನೀಡಿದ್ದ ಚುನಾವಣಾ ಭರವಸೆಯ ಪ್ರಣಾಳಿಕೆ ಪ್ರತಿ ಬಿಡುಗಡೆ ಮೂಲಕ ವಿಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ಮಾಡಿದ್ದಾರೆ.

ಇದು ಸಿದ್ದರಾಮಯ್ಯ ವಿರುದ್ಧ ಮುಡಾ ಪ್ರಕರಣ ಮತ್ತು ಕಾಂಗ್ರೆಸ್‌ ವಿರುದ್ಧ ವಕ್ಫ್‌ ಆಸ್ತಿ ದಾಳಿ ಉರುಳಿಸಲು ಮುಂದಾಗಿದ್ದ ಬಿಜೆಪಿಗೆ ಭಾರೀ ಮುಜುಗರ ತಂದಿದೆ.

ಈ ವಿಡಿಯೋವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಧ್ಯಮ ತಂಡ ಬಿಡುಗಡೆ ಮಾಡಿದೆ. ತನ್ಮೂಲಕ ವಕ್ಫ್‌ ಆಸ್ತಿಗಳ ಕುರಿತು ನೋಟಿಸ್‌ ನೀಡಿದ್ದ ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದ ಬಿಜೆಪಿಗೆ ಮುಖ್ಯಮಂತ್ರಿಯವರ ಮಾಧ್ಯಮ ತಂಡ ತೀಕ್ಷ್ಣ ತಿರುಗೇಟು ನೀಡಿದೆ.

ಹಳೆ ವಿಡಿಯೋ:

ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಮುಸ್ಲಿಂ ಧಾರ್ಮಿಕ ಮುಖಂಡರು, ಸಾರ್ವಜನಿಕರನ್ನು ಉದ್ದೇಶಿಸಿ ಸಾರ್ವಜನಿಕ ಸಭೆಯಲ್ಲಿ ಮಾತನಾಡುವ ವೇಳೆ, ‘ರಾಜ್ಯದಲ್ಲಿ 2,000 ಕೋಟಿ ರು. ಮೌಲ್ಯದ ವಕ್ಫ್‌ ಆಸ್ತಿಗಳು ಕಬಳಿಕೆ ಆಗಿದ್ದು, ಒಂದೊಂದು ಇಂಚು ವಕ್ಫ್‌ ಆಸ್ತಿಯೂ ವಕ್ಫ್‌ ಮಂಡಳಿಗೆ ವಾಪಸು ಬರಬೇಕು. ಅಲ್ಲಿಯವರೆಗೆ ನಾವೂ ಸುಮ್ಮನೆ ಇರಲ್ಲ, ನೀವೂ ಸುಮ್ಮನಿರಬೇಡಿ’ ಎಂದು ಮುಸ್ಲಿಂ ಧಾರ್ಮಿಕ ಮುಖಂಡರಿಗೆ ಕರೆ ನೀಡಿರುವ ಅಂಶ ವಿಡಿಯೋದಲ್ಲಿದೆ.

ಜೊತೆಗೆ, ‘ವಕ್ಫ್‌ ಆಸ್ತಿ ನಿಮ್ಮ ದೇವರ (ಅಲ್ಲಾಹು) ಆಸ್ತಿ. ಈಗ ಆಸ್ತಿ ಕಬಳಿಕೆ ಮಾಡಿರುವವರು ನೀವು ಹೋಗಿ ಚಿಕ್ಕ ಮಸೀದಿ ಕಟ್ಟುತ್ತೇವೆ ಎಂದರೆ ಬಿಡುತ್ತಾರಾ? ಹೀಗಾಗಿ ಯಾವುದೇ ಕಾರಣಕ್ಕೂ ವಕ್ಫ್‌ ಆಸ್ತಿಗಳನ್ನು ವಾಪಸು ಪಡೆಯದೆ ಬಿಡಬಾರದು’ ಎಂದು ಹೇಳಿರುವ ಅಂಶಗಳೂ ವಿಡಿಯೋದಲ್ಲಿದೆ.

ಬೊಮ್ಮಾಯಿ ಹೇಳಿರುವುದೇನು?:

ವಿಡಿಯೋದಲ್ಲಿ ಕನ್ನಡ ಹಾಗೂ ಉರ್ದು ಎರಡೂ ಭಾಷೆಗಳಲ್ಲಿ ಮಾತನಾಡಿರುವ ಬಸವರಾಜ ಬೊಮ್ಮಾಯಿ, ‘ಇಲ್ಲಿ ವಕ್ಫ್‌ ಸಮಿತಿ ಅಧ್ಯಕ್ಷರಿದ್ದಾರೆ. ನಿಮ್ಮ ಕರ್ತವ್ಯ ವಕ್ಫ್‌ ಆಸ್ತಿ ಕಾಪಾಡುವುದು. ಇದರಲ್ಲಿ ಯಾವುದೇ ಕಾರಣಕ್ಕೂ ರಾಜಿ ಆಗಬಾರದು. ಒಂದು ವೇಳೆ ರಾಜಿ ಆದರೆ ನಾವು ಏನೂ ಮಾಡಲಾಗದಿರಬಹುದು. ಆದರೆ ಮೇಲಿರುವವನು ನಿಮ್ಮನ್ನು ನೋಡುತ್ತಿರುತ್ತಾನೆ. ಅದು ದೇವರ ಆಸ್ತಿ. ದೇವರ ಆಸ್ತಿ ಲೂಟಿ ಆಗುತ್ತಿದ್ದರೂ ನೀವು ಕಣ್ಣು ಮುಚ್ಚಿ ಕುಳಿತರೆ ಲೂಟಿ ಆದವನಿಗೆ ಹೆಚ್ಚು ಸಮಸ್ಯೆ ಆಗದಿರಬಹುದು. ಆದರೆ ಸುಮ್ಮನೆ ಕೂತ ನಿಮಗೆ ಒಳ್ಳೆಯದಾಗಲ್ಲ. ನಿಮಗೆ ತುಂಬಾ ಅದೃಷ್ಟ ಇದ್ದರೆ ಮಾತ್ರ ದೇವರ ಆಸ್ತಿ ಕಾಪಾಡುವ ಜವಾಬ್ದಾರಿ ಸಿಕ್ಕಿರುತ್ತದೆ.

ರಾಜ್ಯದಲ್ಲಿ 2,000 ಸಾವಿರ ಕೋಟಿ ರು. ಮೌಲ್ಯದ ವಕ್ಫ್‌ ಆಸ್ತಿ ಖಾಸಗಿಯವರ ಹೆಸರಿಗೆ ಆಗಿಬಿಟ್ಟಿದೆ. ಒತ್ತುವರಿ ಅಲ್ಲ ಅವರ ಹೆಸರಿಗೇ ಆಗಿಬಿಟ್ಟಿದೆ. ಅಲ್ಲಿ ಹೋಗಿ ನೀವು ಚಿಕ್ಕ ಮಸೀದಿ ಕಟ್ಟುತ್ತೇವೆ ಎಂದರೆ ಬಿಡುತ್ತಾರಾ? ಪೂರ್ಣ ವಕ್ಫ್‌ ಆಸ್ತಿ ವಾಪಸು ಬರಬೇಕು. ಒಂದೊಂದು ಇಂಚು ವಕ್ಫ್‌ ಆಸ್ತಿಯೂ ವಾಪಸು ಬರಬೇಕು. ಅಲ್ಲಿಯವರೆಗೆ ನಾವೂ ಸುಮ್ಮನೆ ಕೂರಲ್ಲ ನೀವೂ ಸುಮ್ಮನೆ ಕೂರಬೇಡಿ’ ಎಂದು ಹೇಳಿದ್ದಾರೆ.

--

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ