ಧಾರವಾಡ:
ಪೆಟ್ರೋಲ್-ಡೀಸೆಲ್ ಬೆಲೆ ಏರಿಸಿದ ಕಾಂಗ್ರೆಸ್ ಸರ್ಕಾರದ ನಡೆ ಖಂಡಿಸಿ ಹು-ಧಾ ಬಿಜೆಪಿ ಮಹಾನಗರ ಮತ್ತು ಗ್ರಾಮಾಂತರ ಜಿಲ್ಲಾ ಘಟಕದ ನೇತೃತ್ವದಲ್ಲಿ ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದರು.ಖಾಲಿ ಬೈಕ್ ತಳ್ಳುವ ಜತೆ ತೆಂಗಿನ ಚಿಪ್ಪು ಪ್ರದರ್ಶಿಸಿದ ಕಾರ್ಯಕರ್ತರು, ಚಿಪ್ಪು ಸುಟ್ಟು ಒಂದು ಗಂಟೆಗೂ ಅಧಿಕ ಹೊತ್ತು ಪ್ರತಿಭಟಿಸಿದರು. ಅಲ್ಲದೇ, ಸರ್ಕಾರದ ವಿರುದ್ಧ ಘೋಷಣೆಗಳು ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ, ಕಳೆದ ಕೆಲವು ದಿನಗಳ ಹಿಂದೆ ಬಿತ್ತನೆ ಬೀಜ ದರ ಏರಿಸಿದ ರಾಜ್ಯ ಸರ್ಕಾರ, ಇದೀಗ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಮಾಡಿದೆ. ಸರ್ಕಾರದ ಬೆಲೆ ಏರಿಕೆ ನೀತಿ ಜನರಿಗೆ ಆರ್ಥಿಕ ಹೊರೆ ಉಂಟು ಮಾಡುತ್ತಿದೆ. ಇದರಿಂದ ಬಡ ಹಾಗೂ ಮಧ್ಯಮ ವರ್ಗದ ಜನರ ಬದುಕು ದುಸ್ತರಗೊಳ್ಳಲಿದೆ. ಭವಿಷ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಕನಸಿನ ಮಾತು ಎಂದು ಕುಟುಕಿದರು.ಗ್ಯಾರಂಟಿ ಘೋಷಿಸಿದ ಸಿದ್ದರಾಮಯ್ಯ ರಾಜ್ಯದ ಬೊಕ್ಕಸ ಖಾಲಿ ಮಾಡಿದ್ದು, ಅಭಿವೃದ್ಧಿಗೆ ಹಣ ಇಲ್ಲವಾಗಿದೆ. ಹೀಗಾಗಿ ಬೊಕ್ಕಸ ತುಂಬಿಸಲು ತೈಲ ಬೆಲೆ ಏರಿಸಿ, ಜನರ ಜೇಬಿಗೆ ಕತ್ತರಿ ಹಾಕಿದ್ದಾರೆ ಎಂದು ಆರೋಪಿಸಿದರು. ತಕ್ಷಣವೇ ಪೆಟ್ರೋಲ್ ಹಾಗೂ ಡೀಸೆಲ್ ದರ ಇಳಿಸಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಬಿಜೆಪಿ ನೇತೃತ್ವದಲ್ಲಿ ತಾಲೂಕು ಮತ್ತು ಗ್ರಾಮೀಣ ಭಾಗದಲ್ಲೂ ಸರ್ಕಾರದ ವಿರುದ್ಧ ಆಂದೋಲನ ರೂಪಿಸುವುದಾಗಿ ಎಚ್ಚರಿಕೆ ನೀಡಿದರು.
ಮಾಜಿ ಶಾಸಕಿ ಸೀಮಾ ಮಸೂತಿ ಮಾತನಾಡಿ, ಗ್ಯಾರಂಟಿ ಮೋಡಿ ಮಾಡಿದ ಕಾಂಗ್ರೆಸ್ ಜನರ ದಿಕ್ಕು ತಪ್ಪಿಸುತ್ತಿದೆ. ದಿನಬಳಕೆ, ಅಡುಗೆ ಅನಿಲ, ತೈಲ ಬೆಲೆ ಹೀಗೆ ಅಗತ್ಯ ವಸ್ತುಗಳ ಬೆಲೆ ಏರಿಸಿ, ಜನರ ಜೇಬಿಗೆ ಕತ್ತರಿ ಹಾಕಿದ್ದಾಗಿ ದೂರಿದರು.ಸರ್ಕಾರದ ಜನವಿರೋಧಿ ಬೆಲೆ ಏರಿಕೆ ನಿರ್ಧಾರ ಹಿಂಪಡೆಯಲು ಸರ್ಕಾರಕ್ಕೆ ಆದೇಶಿಸಬೇಕೆಂದು ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಮೋಹನ ರಾಮದುರ್ಗ, ಆನಂದ ಯಾವಗಲ್ಲ, ಸುರೇಶ ಬೆದರೆ, ಶಂಕರ ಶೇಳಕೆ, ಬಸವರಾಜ ಗರಗ, ಶಿವು ಮೆಣಸಿನಕಾಯಿ, ಅಶ್ವಿನಿ ವೀರಾಪೂರ, ರೂಪಾ ಚೌದರಿ, ಸುವರ್ಣ ವಾಲಿ ಪಾಲ್ಗೊಂಡಿದ್ದರು.