ಬೆಂಗಳೂರು: ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ಭಾನುವಾರ ಸಂಜೆ ಗಣೇಶ ವಿಸರ್ಜನೆ ವೇಳೆ ನಡೆದ ಕೋಮು-ಸಂಘರ್ಷಕ್ಕೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರದ ಅಲ್ಪಸಂಖ್ಯಾತರ ಓಲೈಕೆ ರಾಜಕಾರಣದ ಪರಿಣಾಮವಿದು ಎಂದು ಕಿಡಿ ಕಾರಿದ್ದಾರೆ.
ದೆಹಲಿಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಕರ್ನಾಟಕದಲ್ಲಿ ಹಿಂದೂಗಳು ಅವಮಾನ ಅನುಭವಿಸುತ್ತಿದ್ದಾರೆ. ಹಿಂದೂ ಭಾವನೆಗೆ ಧಕ್ಕೆ ಆಗುತ್ತಿದೆ. ಹಿಂದೂಗಳ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಕಿಡಿ ಕಾಡಿದರು. ವಿಪಕ್ಷ ನಾಯಕ ಆರ್. ಅಶೋಕ್, ಸಂಕಷ್ಟ ನಿವಾರಕನಿಗೆ ಸಂಕಟ ಕೊಟ್ಟವರು ಕಾಂಗ್ರೆಸ್‌ನವರು.
ಕಾಂಗ್ರೆಸ್‌ನವರಿಗೆ ಹಿಂದೂಗಳೆಂದರೆ ದ್ವಿತೀಯ ದರ್ಜೆ ಆಗಿದ್ದಾರೆ. ಮತಾಂಧರ ಟೂಲ್ ಕಿಟ್ ಕಾಂಗ್ರೆಸ್ ಕಾಲದಲ್ಲಿ ಸಕ್ರಿಯರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಾರ್ವಜನಿಕ ರಸ್ತೆಗಳಲ್ಲಿ ಗಣಪತಿ ಹೋಗಬಾರದು ಎಂದರೆ ಏನು?, ನಾವೇನು ಪಾಕಿಸ್ತಾನದಲ್ಲಿ ಇದ್ದೀವಾ? ಎಂದು ಪ್ರಶ್ನಿಸಿದರು. ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ರಾಜ್ಯದಲ್ಲಿ ಓಲೈಕೆಯ ರಾಜಕಾರಣ ನಡೆಯುತ್ತಿದೆ. ಇದರ ಪರಿಣಾಮವಾಗಿ ಸಮಾಜಘಾತುಕದ ಶಕ್ತಿಗಳಿಗೆ ಕಾನೂನು, ಪೊಲೀಸರ ಭಯ ಇಲ್ಲ. ಮಂಡ್ಯದಲ್ಲಿ ಪ್ರತಿ ವರ್ಷ ಹೀಗೆಯೇ ಆಗುತ್ತಿದೆ. ಇದು ಪೊಲೀಸರ ವೈಫಲ್ಯ. ಇದಕ್ಕೆ ಕಾಂಗ್ರೆಸ್ ಸರ್ಕಾರ ನೇರ ಕಾರಣ ಎಂದರು.
ಮೈಸೂರು ಸಂಸದ ಯದುವೀರ್ ಒಡೆಯರ್ ಮಾತನಾಡಿ, ಹಲವಾರು ಹಿಂದೂ ಆಚರಣೆಗಳಿಗೆ ಧಕ್ಕೆಯಾಗುತ್ತಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಇಂತಹ ಘಟನೆ ಮಾಮೂಲಿ ಎನ್ನುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮದ್ದೂರಿನಲ್ಲಿ ಮಾತನಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ, ರಾಜ್ಯದಲ್ಲಿ ತಾಲಿಬಾನ್ ಸರ್ಕಾರ ಆಡಳಿತದಲ್ಲಿದೆ. ಅದರಿಂದಲೇ ಇವರು (ಮುಸ್ಲಿಮರು) ಬಾಲ ಬಿಚ್ಚಿದ್ದಾರೆ ಎಂದರು. ವಿಜಯಪುರದಲ್ಲಿ ಮಾತನಾಡಿದ ಉಚ್ಚಾಟಿತ ಬಿಜೆಪಿ ಶಾಸಕ ಬಸನಗೌಡ ಯತ್ನಾಳ, ಗಲಾಟೆ ಮಾಡಿದ ಮುಸಲ್ಮಾನ ಗೂಂಡಾಗಳನ್ನು ಒದ್ದು ಒಳಗೆ ಹಾಕಿ ಎಂದು ಕಿಡಿ ಕಾರಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಮದ್ದೂರಿನಲ್ಲಿ ಮತಾಂಧರಿಂದ ಕಲ್ಲು ತೂರಾಟ ನಡೆದಿದೆ. ಆದರೆ, ಇಲ್ಲಿ ಕಿಡಿಗೇಡಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ಶಾಂತಿಯಿಂದ ಪ್ರತಿಭಟನೆ ಮಾಡುತ್ತಿದ್ದವರ ಮೇಲೆ ಲಾಠಿಚಾರ್ಜ್ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದು ಸಣ್ಣ ಘಟನೆಯೇ?
ಮದ್ದೂರಿನಲ್ಲಿ ಹೆಣ್ಮಕ್ಕಳ ಮೇಲೆ ಲಾಠಿ ಚಾರ್ಜ್ ಮಾಡಿದ್ದು ಸಣ್ಣ ಘಟನೆ ಎಂದು ಸಿಎಂ ಹಾಗೂ ಗೃಹ ಸಚಿವರಿಗೆ ಅನಿಸುವುದಾದರೆ, ಇದು ರಾಜ್ಯ ಸರ್ಕಾರದ ಲಜ್ಜೆಗೆಟ್ಟ ವರ್ತನೆಯಲ್ಲವೇ?. ಮಹಿಳೆಯರ ಮೇಲೆ ಲಾಠಿ ಚಾರ್ಜ್ ಮಾಡಿದ್ದು ಸಣ್ಣಪುಟ್ಟ ಘಟನೆ ಆಗಲು ಸಾಧ್ಯವೇ?. ನಿಮ್ಮ ಮನೆಯ ಹೆಣ್ಮಕ್ಕಳ ಮೇಲೆ ಕಲ್ಲೆಸೆದರೆ, ಲಾಠಿಚಾರ್ಜ್ ಮಾಡಿದರೆ ಯಾವ ಪರಿಸ್ಥಿತಿ ಆಗಲಿದೆ?
- ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ