ಕನ್ನಡಪ್ರಭ ವಾರ್ತೆ ಮಂಗಳೂರು
ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ ಶಾಸಕ ಹರೀಶ್ ಪೂಂಜಾ ಅವರು, ಒಂದು ಸಮುದಾಯವನ್ನು ಕೇಂದ್ರೀಕರಿಸಿ ರಾತ್ರಿ ಮನೆಗಳಿಗೆ ಪೊಲೀಸರು ತೆರಳಿ ತನಿಖೆ ನಡೆಸುವುದು ಸರಿಯಲ್ಲ. ಈ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ಮನವರಿಕೆ ಮಾಡಲಾಗಿದೆ. ಪೊಲೀಸರ ಅತಿರೇಕದ ಕ್ರಮ ಮುಂದುವರಿದರೆ ಹೋರಾಟ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.ಶಾಸಕ ಡಾ। ಭರತ್ ಶೆಟ್ಟಿ ಸುದ್ದಿಗಾರರಲ್ಲಿ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಅವರಿಗೆ ಬಿಜೆಪಿ ಸಹಕಾರ ನೀಡಲಿದೆ. ಕಾಂಗ್ರೆಸ್ ನಾಯಕರು ಪೊಲೀಸ್ ಠಾಣೆಗಳನ್ನು ಕಾಂಗ್ರೆಸ್ ಕಚೇರಿ ರೀತಿ ಬಳಸುತ್ತಿದ್ದಾರೆ. ಇಂಥವುಗಳಿಗೆ ಕಡಿವಾಣ ಹಾಕುವಂತೆ ಅಧಿಕಾರಿಗಳಿಗೆ ಹೇಳಿದ್ದೇವೆ. ಯಾವುದೇ ರಾಜಕೀಯ ಹಸ್ತಕ್ಷೇಪ ಇಲ್ಲದೇ ತನಿಖೆ ನಡೆಯಲಿ ಎಂದಿದ್ದೇವೆ ಎಂದರು.ನಡುರಾತ್ರಿಯಲ್ಲಿ ಕಾರ್ಯಕರ್ತರ ಮನೆಗೆ ಪೊಲೀಸರು ಹೋಗೋದನ್ನು ಒಪ್ಪಲು ಸಾಧ್ಯವಿಲ್ಲ. ಯಾವುದೇ ಕೇಸ್ ಇಲ್ಲದ ಹಿರಿಯರ ಮನೆಗಳಿಗೆ ಹೋಗುವುದು ಸರಿಯಲ್ಲ ಎಂದು ಪೊಲೀಸರಿಗೆ ಹೇಳಿದ್ದೇವೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ನೇತೃತ್ವದಲ್ಲಿ ಸಭೆ ನಡೆಸಿ ಶಾಸಕರ ನಿಯೋಗ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿ ಮನವರಿಕೆ ಮಾಡುವುದು ಎಂದು ತೀರ್ಮಾನಿಸಲಾಯಿತು.‘ತಾಕತ್ತು ಇದ್ದರೆ ಪುತ್ತಿಲರನ್ನು ಗಡಿಪಾರು ಮಾಡಿ ನೋಡಿ’ಅರುಣ್ ಕುಮಾರ್ ಪುತ್ತಿಲ ಸೇರಿ 36 ಜನರ ವಿರುದ್ಧ ಗಡಿಪಾರು ಮಾಡುವ ಕಾನೂನು ಪ್ರಕ್ರಿಯೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಚರ್ಚೆಗಳು ಶುರುವಾಗಿವೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸ್ ದೌರ್ಜನ್ಯದ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು. ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ರಾಜಕೀಯ ಒತ್ತಡದಡಿ ಪೊಲೀಸರು ಕೆಲಸ ಮಾಡುತ್ತಿದ್ದಾರೆ. ಹಿಂದೂ ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ತೊಂದರೆ ಕೊಡುತ್ತಿದ್ದಾರೆ. ರಾತ್ರಿ ಹೊತ್ತು ಈ ವ್ಯಕ್ತಿಗಳ ಮನೆಗಳಿಗೆ ಪೊಲೀಸರು ತೆರಳುತ್ತಿದ್ದು, ಅವರ ನಿವಾಸಗಳ ಫೋಟೋ ತೆಗೆದು, ಜಿಪಿಎಸ್ ಸ್ಥಳಾಂಕಗಳನ್ನು ಸಂಗ್ರಹಿಸುತ್ತಿದ್ದಾರೆ. ಈ ಎಲ್ಲವೂ ಯಾವುದೇ ಕಾನೂನಾತ್ಮಕ ವಾರಂಟ್ ಇಲ್ಲದೇ ಅಥವಾ ನ್ಯಾಯಸಮ್ಮತ ಕಾರಣವಿಲ್ಲದೆ ನಡೆಯುತ್ತಿದೆ.
ಈ ರೀತಿಯ ಕ್ರಮಗಳು ಭಾರತೀಯ ಸಂವಿಧಾನದಡಿಯಲ್ಲಿ ಕಾನೂನುಬಾಹಿರ. ಆರ್ಟಿಕಲ್ 21ರಡಿಯಲ್ಲಿ ಜೀವಿತದ ಹಕ್ಕು ಹಾಗೂ ಗೌಪ್ಯತೆಗಿರುವ ಹಕ್ಕು ಮತ್ತು ಆರ್ಟಿಕಲ್ 14ರಡಿಯಲ್ಲಿ ಸಮಾನತೆಯ ಹಕ್ಕುಗಳನ್ನು ಉಲ್ಲಂಘಿಸುತ್ತವೆ. ಮಂಗಳೂರಿನಲ್ಲಿ ಪೊಲೀಸ್ ಅಧಿಕಾರಿಗಳ ಬದಲಾವಣೆ ನಂತರ ಈ ಕ್ರಮಗಳಾಗುತ್ತಿವೆ. ಹಿಂದೂ ಸಮುದಾಯದ ಸದಸ್ಯರನ್ನೇ ಗುರಿಯಾಗಿಸಿಕೊಂಡಿದ್ದಾರೆ. ಈ ರೀತಿ ತೊಂದರೆಗೆ ಒಳಗಾಗಿರುವವರು ಯಾವುದೇ ಅಪರಾಧ ಹಿನ್ನೆಲೆ ಇಲ್ಲದವರಾಗಿದ್ದು, ಯಾವುದೇ ದುಷ್ಕೃತ್ಯದಲ್ಲಿ ಭಾಗಿಯಾಗಿಲ್ಲ. ಈ ಕ್ರಮಗಳು ಪೊಲೀಸ್ ವ್ಯವಸ್ಥೆಯನ್ನು ರಾಜಕೀಯ ಪ್ರತೀಕಾರದ ಅಸ್ತ್ರವಾಗಿ ಬಳಸುವ ಆತಂಕವಿದೆ. ಹೀಗಾಗಿ, ಈ ಕಾನೂನು ವಿರೋಧಿ ಕ್ರಮಗಳನ್ನು ತಡೆಗಟ್ಟಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.ಇದರಲ್ಲಿ ಭಾಗಿಯಾದ ಪೊಲೀಸ್ ಅಧಿಕಾರಿಗಳ ವಿರುದ್ಧ ನ್ಯಾಯಸಮ್ಮತವಾಗಿ ಮತ್ತು ಪಕ್ಷಪಾತವಿಲ್ಲದೆ ತನಿಖೆ ನಡೆಯಬೇಕು. ಸಂವಿಧಾನಾತ್ಮಕ ಮೌಲ್ಯಗಳು ಮತ್ತು ನಾಗರಿಕರ ಹಕ್ಕುಗಳನ್ನು ಉಲ್ಲಂಘಿಸಿದವರನ್ನು ಹೊಣೆಯಾಗಿ ಪರಿಗಣಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.