ಡಿಕೆಶಿ ಪ್ರತಿಕೃತಿ ದಹಿಸಿ ಬಿಜೆಪಿ ಆಕ್ರೋಶ

KannadaprabhaNewsNetwork | Published : Mar 26, 2025 1:31 AM

ಸಾರಾಂಶ

ಡಿಸಿಎಂ ಡಿ.ಕೆ.ಶಿವಕುಮಾರ ಹೇಳಿಕೆ ಖಂಡಿಸಿ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ನೇತೃತ್ವದಲ್ಲಿ ಮಂಗಳವಾರ ಇಲ್ಲಿಯ ಹೆದ್ದಾರಿ ಪಕ್ಕದ ಚನ್ನಮ್ಮಾಜಿಯ ವರ್ತುಳದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಡಿಕೆಶಿ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು

ಡಿಸಿಎಂ ಡಿ.ಕೆ.ಶಿವಕುಮಾರ ಹೇಳಿಕೆ ಖಂಡಿಸಿ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ನೇತೃತ್ವದಲ್ಲಿ ಮಂಗಳವಾರ ಇಲ್ಲಿಯ ಹೆದ್ದಾರಿ ಪಕ್ಕದ ಚನ್ನಮ್ಮಾಜಿಯ ವರ್ತುಳದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಡಿಕೆಶಿ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಮಾತನಾಡಿ, ಸಂವಿಧಾನವನ್ನು ಬದಲಿಸಿ ಮುಸ್ಲಿಂರಿಗೆ ಶೇ.4 ಮೀಸಲಾತಿ ಕಲ್ಪಿಸುವಂತಹ ಕೆಲಸಕ್ಕೆ ಮುಂದಾಗಿರುವ ಈ ಕಾಂಗ್ರೆಸ್ ಪಕ್ಷ ಉದ್ದೇಶ ಏನೆಂದು ರಾಜ್ಯದ ಜನರಿಗೆ ಅರ್ಥವಾಗುತ್ತಿದೆ. ಸಂವಿಧಾನಕ್ಕೆ ಕಳಂಕ ತರುವ ಪಕ್ಷ ಯಾವುದಾದರೂ ಇದ್ದರೇ ಅದು ಕಾಂಗ್ರೆಸ್ ಪಕ್ಷ , ಕಾಯ್ದೆಯನ್ನು ತಿದ್ದುಪಡಿ ಮಾಡಿ ಮುಸ್ಲಿಂರನ್ನು ತುಷ್ಟೀಕರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಡಾ.ಬಿ.ಆರ್.ಅಂಬೇಡ್ಕರ್‌ ಅವರು ರಚಿಸಿರುವ ಸಂವಿಧಾನಕ್ಕೆ ಅಗೌರವ ತರುವಂತ ಕೆಲಸಕ್ಕೆ ಕಾಂಗ್ರೆಸ್ ಮುಂದಾಗಿರುವುದು ಸರಿಯಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಈ ಕೂಡಲೇ ರಾಜೀನಾಮೆ ನೀಡಬೇಕು. ಕಾಂಗ್ರೆಸ್ ಪಕ್ಷಕ್ಕೆ ಸಂವಿಧಾನದ ಮೇಲೆ ಗೌರವ ಇದ್ದರೆ ಕೂಡಲೇ ಡಿಕೆಶಿ ಅವರ ರಾಜೀನಾಮೆ ಪಡೆಯಲು ಕ್ರಮ ತೆಗೆದುಕೊಳ್ಳಬೇಕು. ಮುಂಬರುವ ದಿನಗಳಲ್ಲಿ ಜನರೇ ಈ ನಿರ್ಣಯಕ್ಕೆ ತಕ್ಕ ಉತ್ತರ ಕೊಡುತ್ತಾರೆ ಎಂದು ಎಚ್ಚರಿಕೆ ನೀಡಿದರು.ಬಿಜೆಪಿ ಮುಖಂಡರಾದ ಲಕ್ಷ್ಮೀ ಇನಾಮದಾರ ಮಾತನಾಡಿ, ಕಾಂಗ್ರೆಸ್ ಪಕ್ಷ ಜನರಲ್ಲಿಯೇ ಜಗಳ ಹಚ್ಚುವಂತಹ ಕೆಲಸ ಮಾಡುತ್ತಿದೆ. ಉನ್ನತ ಸ್ಥಾನದಲ್ಲಿರುವ ಜವಾಬ್ದಾರಿ ನಾಯಕರು ಎಲ್ಲರನ್ನು ಒಗ್ಗಟ್ಟಿನಿಂದ ನೋಡಬೇಕು. ಆದರೆ, ಒಂದು ಸಮಾಜದ ಓಲೈಕೆಗಾಗಿ ಸಂವಿಧಾನ ತಿದ್ದುಪಡಿಗೆ ಮುಂದಾಗಿರುವ ಕಾಂಗ್ರೆಸ್ ಪಕ್ಷದ ವಿರುದ್ಧ ನಾವೆಲ್ಲ ಒಗ್ಗಟ್ಟಾಗಿ ಹೋರಾಟ ಮಾಡೋಣ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.ಬಿಜೆಪಿ ಮಂಡಲ ಅಧ್ಯಕ್ಷ ಶ್ರೀಕರ ಕುಲಕರ್ಣಿ ಮಾತನಾಡಿ, ಮುಸ್ಲಿಂರ ಮತ ಸೆಳೆಯುವ ಉದ್ದೇಶದಿಂದ ಮುಸ್ಲಿಂರಿಗೆ ಮೀಸಲಾತಿ ನೀಡುವ ಮೂಲಕ ಹಿಂದುಗಳಿಗೆ ಅನ್ಯಾಯ ಮಾಡಿಲಾಗುತ್ತಿದೆ ಎಂದು ಆರೋಪಿಸಿದರು. ಮಂಡಲದ ಮಾಜಿ ಅಧ್ಯಕ್ಷ ಡಾ.ಬಸವರಾಜ ಪರವಣ್ಣನವರ ಮಾತನಾಡಿ, ಕಾಂಗ್ರೆಸ್ ಪಕ್ಷದಿಂದ ಅಭಿವೃದ್ಧಿ ಕೆಲಸಗಳು ಮಾಡಲು ಸಾಧ್ಯವಾಗುತ್ತಿಲ್ಲ. ಇದರ ಬದಲಾಗಿ ಈ ಪಕ್ಷ ವೋಟ್ ಬ್ಯಾಂಕ್ ನಿರ್ಮಾಣ ಮಾಡಿಕೊಳ್ಳುತ್ತಿದೆ, ಮೊದಲು ಹಿಂದುಳಿದ ಸಮಾಜದ ಜನರಿಗೆ ಮರಳು ಮಾಡುವಂತಹ ಕೆಲಸಕ್ಕೆ ಮುಂದಾಗಿದ್ದರು. ಈಗ ನೇರವಾಗಿ ಮುಸ್ಲಿಂ ಸಮಾಜದ ಗುತ್ತಿಗೆದಾರರಿಗೆ ಮೀಸಲಾತಿ ನೀಡುವ ಮೂಲಕ ಅವರನ್ನು ಮರಳು ಮಾಡುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ ಎಂದು ತಿಳಿಸಿದರು.ಮುಖಂಡರಾದ ಉಳವಪ್ಪ ಉಳ್ಳೆಗಡ್ಡಿ, ಸಂದೀಪ ದೇಶಪಾಂಡೆ, ಅಪ್ಪಣ್ಣ ಪಾಗಾದ, ಶಿವಾನಂದ ಹನುಮಸಾಗರ, ಬಸವರಾಜ ಮಾತನವರ, ರವಿರಾಜ ಇನಾಮದಾರ, ರಮೇಶ ಉಗರಖೋಡ್, ಸಿದ್ದು ಬೋಳನ್ನವರ, ದಿನೇಶ ವಳಸಂಗ ಹಾಗೂ ಬಿಜೆಪಿಯ ಪಪಂ ಸದ್ಯಸರು, ಕಾರ್ಯಕರ್ತರು ಸೇರಿದಂತೆ ಇತರರಿದ್ದರು.

Share this article