ಡಿಕೆಶಿ ಕರಿ ಟೋಪಿ ಹೇಳಿಕೆಗೆ ಬಿಜೆಪಿ ಆಕ್ರೋಶ

KannadaprabhaNewsNetwork |  
Published : Oct 13, 2025, 02:01 AM ISTUpdated : Oct 13, 2025, 05:46 AM IST
DK Shivakumar Munirathna controversy

ಸಾರಾಂಶ

ಕನಿಷ್ಠ ಸೌಜನ್ಯವೂ ಇಲ್ಲದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅಪಮಾನ ಮಾಡಿದ್ದು ಮುನಿರತ್ನ ಅವರಿಗಲ್ಲ, ಬದಲಾಗಿ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಮತದಾರರಿಗೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿಶ್ಲೇಷಿಸಿದ್ದಾರೆ

 ಬೆಂಗಳೂರು :  ಕನಿಷ್ಠ ಸೌಜನ್ಯವೂ ಇಲ್ಲದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅಪಮಾನ ಮಾಡಿದ್ದು ಮುನಿರತ್ನ ಅವರಿಗಲ್ಲ, ಬದಲಾಗಿ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಮತದಾರರಿಗೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿಶ್ಲೇಷಿಸಿದ್ದಾರೆ.

ಭಾನುವಾರ ಮಾಧ್ಯಮಗಳ ಜತೆ ಮಾತನಾಡಿ, ಮುಂಬರುವ ದಿನದಲ್ಲಿ ಡಿ.ಕೆ.ಶಿವಕುಮಾರ್ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಕರಿಟೋಪಿ ಬೆಲೆ ಏನೆಂದು ತೋರಿಸುತ್ತೇವೆ. ಉಪ ಮುಖ್ಯಮಂತ್ರಿ, ಜವಾಬ್ದಾರಿಯುತ ಸಚಿವರಾಗಿ ಸಾರ್ವಜನಿಕ ಸ್ಥಳದಲ್ಲಿ ಹಾಗೂ ಒಬ್ಬ ಜನಪ್ರತಿನಿಧಿ ಬಗ್ಗೆ ಹೇಗೆ ನಡೆದುಕೊಳ್ಳಬೇಕು ಎಂಬುದು ಗೊತ್ತಿಲ್ಲವೆ? ಎಂದು ಆಕ್ಷೇಪಿಸಿದರು.

ಅಧಿಕಾರ ಎಂಬುದು ಶಾಶ್ವತ ಅಲ್ಲ, ಡಿ.ಕೆ.ಶಿವಕುಮಾರ್ ಅವರ ನಡವಳಿಕೆ, ಮಾತಿನ ಧಾಟಿ, ಒಬ್ಬ ಚುನಾಯಿತ ಪ್ರತಿನಿಧಿಗೆ ಮಾಡಿದ ಅಪಮಾನದ ವಿರುದ್ಧ ಸಾರ್ವಜನಿಕರು ಮಾತನಾಡುತ್ತಿದ್ದಾರೆ ಎಂದರು.

ಈಚೆಗೆ ಮೈಸೂರಿನಲ್ಲಿ ಮುಖ್ಯಮಂತ್ರಿಗಳ ಶಕ್ತಿ ಪ್ರದರ್ಶನ ಏರ್ಪಡಿಸಲಾಗಿತ್ತು. ಡಿ.ಕೆ.ಶಿವಕುಮಾರ್ ಅವರು ಹೇಳದೆ ಕೇಳದೆ ಸಿಡಿದು, ದೆಹಲಿಗೆ ದೌಡಾಯಿಸಿದ್ದು ಮಾಧ್ಯಮಗಳಲ್ಲಿ ವರದಿ ಆಗಿದೆ. ಮತ್ತೊಂದು ಕಡೆ ಸಿದ್ದರಾಮಯ್ಯ ಅವರು ಕ್ಯಾಬಿನೆಟ್ ವಿಸ್ತರಣೆಯ ದಾಳ ಬಿಟ್ಟಿದ್ದಾರೆ. ಮುಖ್ಯಮಂತ್ರಿ ಆಗಬೇಕೆಂಬ ಪ್ರಯತ್ನ ಡಿ.ಕೆ.ಶಿವಕುಮಾರ್ ನಡೆಸುತ್ತಿದ್ದಾರೆ ಎಂದು ವಿಜಯೇಂದ್ರ ಪ್ರತಿಕ್ರಿಯಿಸಿದರು. 

ಮುಸ್ಲಿಂ ಟೋಪಿಯನ್ನು ಜಾಲರಿ ಟೋಪಿ ಅಂತಾರಾ?: ಜೋಶಿಆರ್‌ಎಸ್‌ಎಸ್ ಟೋಪಿ ಬಗ್ಗೆ ಮಾತನಾಡುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಮುಸ್ಲಿಮರು ಟೋಪಿ ಹಾಕಿಕೊಂಡು ಬಂದಾಗ ಇದೇ ಮಾದರಿಯಲ್ಲಿ ಕರೆಯುತ್ತಾರೆಯೇ? ಧೈರ್ಯ ಇದ್ದರೆ, ಅವರು ಹಾಕುವ ಟೋಪಿಗೆ ಜಾಲರಿ ಟೋಪಿ ಎಂದು ಕರೆಯಲಿ ನೋಡೋಣ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸವಾಲು ಹಾಕಿದ್ದಾರೆ.  

ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಚಿವ ಸಂಪುಟದಲ್ಲಿ ಸ್ಥಾನ ಪಡೆದುಕೊಳ್ಳಲು ಹಾಗೂ ಇರುವ ಸ್ಥಾನ ಉಳಿಸಿಕೊಳ್ಳಲು ಶಾಸಕರು- ಸಚಿವರು ಪರಸ್ಪರ ಬಡಿದಾಡಿಕೊಳ್ಳುವ ಪರಿಸ್ಥಿತಿಗೆ ಬಂದಿದೆ. ಪಕ್ಷದಲ್ಲಿನ ಈ ಗೊಂದಲದಿಂದಾಗಿ ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ ಎಂದು ಆರೋಪಿಸಿದರು. ಸಿದ್ದರಾಮಯ್ಯ ಅವರು ತಮಗೆ ಬೇಕಾದ ಸಚಿವರನ್ನು ಮಾತ್ರ ಕರೆದು ಔತಣಕೂಟ ಏರ್ಪಡಿಸುವ ಮೂಲಕ ಕಾಂಗ್ರೆಸ್‌ನಲ್ಲಿ ಆಂತರಿಕ ತಿಕ್ಕಾಟವಿದೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ ಎಂದರು.

ಪೊಲೀಸ್ ಇಲಾಖೆಯಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು, ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹಳಿತಪ್ಪಿದೆ. ಅತ್ಯಾಚಾರ, ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಅತಿವೃಷ್ಟಿಯಿಂದ ರೈತರು ಬೀದಿಗೆ ಬಂದಿದ್ದಾರೆ. ಅವರಿಗೆ ಈ ವರೆಗೂ ಪರಿಹಾರ ನೀಡಿಲ್ಲ. ಕೇರಳದ ವಯಾನಾಡಿನಲ್ಲಿ ಆನೆ ತುಳಿತಕ್ಕೆ ವ್ಯಕ್ತಿ ಸತ್ತರೆ ಪರಿಹಾರ ನೀಡುತ್ತಾರೆ. ಆದರೆ, ಕರ್ನಾಟಕದಲ್ಲಿ ಆನೆ ತುಳಿತದಿಂದ ಅಸು ನೀಗಿದವರ ಕುಟುಂಬಕ್ಕೆ ರಾಜ್ಯ ಸರ್ಕಾರ ಪರಿಹಾರ ನೀಡಿಲ್ಲ. ರಾಜ್ಯದಲ್ಲಿ ಗುಂಡಿಗಳನ್ನು ಮುಚ್ಚುವ ಕೆಲಸ ಸಹ ಸರಿಯಾಗಿ ಮಾಡುತ್ತಿಲ್ಲ. ರಾಜ್ಯ ಸರ್ಕಾರ ಹು-ಧಾ ಮಹಾನಗರ ಪಾಲಿಕೆಯ ₹350 ಕೋಟಿ ಬಾಕಿ ಉಳಿಸಿಕೊಂಡಿದೆ. ಪಾಲಿಕೆಯು ಹಲವು ಬಾರಿ ಮನವಿ ಮಾಡಿದರೂ ನೀಡಿಲ್ಲ. ಒಟ್ಟಿನಲ್ಲಿ ರಾಜ್ಯ ಸರ್ಕಾರ ದಿವಾಳಿಯಾಗಿದ್ದು, ಮುಂದಿನ ದಿನಗಳಲ್ಲಿ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದರು. 

ಅಂದು ಗಾಂಧಿ ಟೋಪಿಗೆ, ಇಂದು ಆರೆಸ್ಸೆಸ್‌ ಟೋಪಿಗೆ ಕೈ ಅವಮಾನ: ಬೊಮ್ಮಾಯಿ

ಶಾಸಕ ಮುನಿರತ್ನ ಅವರು ಧರಿಸಿದ್ದ ಆರ್‌ಎಸ್‌ಎಸ್ ಟೋಪಿಯ ಬಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಆಡಿರುವ ಮಾತು ಕಾಂಗ್ರೆಸ್‌ನವರ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ. ಹಾವೇರಿ ಜಿಲ್ಲೆ ಬಂಕಾಪುರದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಗಾಂಧಿ ಟೋಪಿಯನ್ನು ಕಾಂಗ್ರೆಸ್ ಟೋಪಿಯನ್ನಾಗಿ ಮಾಡಿಕೊಂಡು ಅದಕ್ಕೆ ಅವಮಾನ ಮಾಡಿದ್ದರು. ಈಗ ಆರ್‌ಎಸ್‌ಎಸ್ ಟೋಪಿಗೆ ಅವಮಾನ ಮಾಡಿದ್ದಾರೆ. ಅದು ಅವರ ಮನಸ್ಥಿತಿ ತೋರಿಸುತ್ತದೆ ಎಂದರು.

PREV
Read more Articles on

Recommended Stories

ಬಂಡಿಗಣಿಯಲ್ಲಿಂದು ಸರ್ವಧರ್ಮ ಮಹಾಸಂಗಮ: ಸಿಎಂ ಭಾಗಿ
ಆರೆಸ್ಸೆಸ್‌ ಬೆಳವಣಿಗೆ ಕೆಲ ಶಕ್ತಿ, ಸಂಘಟನೆಗಳಿಗೆ ಸಹಿಸಲಾಗ್ತಿಲ್ಲ: ಅರುಣಕುಮಾರ