ಡಿಕೆಶಿ ಸಂವಿಧಾನ ಬದಲಾವಣೆ ಹೇಳಿಕೆಗೆ ಬಿಜೆಪಿ ಆಕ್ರೋಶ

KannadaprabhaNewsNetwork | Published : Mar 26, 2025 1:34 AM

ಸಾರಾಂಶ

ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು, ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇ. 4ರ ಮೀಸಲಾತಿ ಮತ್ತು ಇತ್ತೀಚೆಗೆ ಸದನದಿಂದ 18 ಬಿಜೆಪಿ ಶಾಸಕರನ್ನು ಅಮಾನತು ಮಾಡಿರುವುದು ಸಂವಿಧಾನಬಾಹಿರ ನಡೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಾವೇರಿ: ಮುಸ್ಲಿಮರಿಗೆ ಮೀಸಲಾತಿ ನೀಡುವ ಸಂಬಂಧ ಸಂವಿಧಾನ ಬದಲಾವಣೆ ಮಾಡಲು ಸಿದ್ಧ ಎಂಬ ಡಿಸಿಎಂ ಡಿ.ಕೆ. ಶಿವಕುಮಾರ ಹೇಳಿಕೆ ಖಂಡಿಸಿ, ಕೂಡಲೇ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿ ಬಿಜೆಪಿ ಜಿಲ್ಲಾ ಘಟಕದಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.ಇಲ್ಲಿನ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು, ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇ. 4ರ ಮೀಸಲಾತಿ ಮತ್ತು ಇತ್ತೀಚೆಗೆ ಸದನದಿಂದ 18 ಬಿಜೆಪಿ ಶಾಸಕರನ್ನು ಅಮಾನತು ಮಾಡಿರುವುದು ಸಂವಿಧಾನಬಾಹಿರ ನಡೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ ಮಾತನಾಡಿ, ಡಿ.ಕೆ. ಶಿವಕುಮಾರ ಸಂವಿಧಾನವನ್ನು ಬದಲಾವಣೆ ಮಾಡುತ್ತೇನೆ ಎಂಬ ಹೇಳಿಕೆ ಖಂಡನೀಯ. ಹನಿ ಟ್ರ್ಯಾಪ್ ಪಿತಾಮಹ ಡಿಕೆಶಿ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಸದನದಿಂದ 18 ಜನ ಬಿಜೆಪಿ ಶಾಸಕರನ್ನು ಅಮಾನತು ಮಾಡಿರುವುದು ಅಸಂವಿಧಾನಿಕವಾಗಿದೆ. ಸರ್ಕಾರ ಎಸ್ಸಿ, ಎಸ್ಟಿ ಹಣ ದುರ್ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿದರು.ಸಿಎಂ ಸಿದ್ದರಾಮಯ್ಯಗೆ ಮತ್ತು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನೈತಿಕತೆ ಇದ್ದರೆ ಕೂಡಲೇ ಡಿಸಿಎಂ ಸ್ಥಾನದಿಂದ ಡಿಕೆಶಿ ಅವರನ್ನು ಕಿತ್ತೊಗೆಯಬೇಕು. ಅಲ್ಲದೇ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಡಿಕೆಶಿ ಅವರನ್ನು ಖರ್ಗೆಯವರು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಅಹಿಂದ ಹೆಸರಿನ ಮೇಲೆ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಿದ್ದಾರೆ. ರಾಜ್ಯದ ಇತಿಹಾಸದಲ್ಲಿ ದೊಡ್ಡ ಬಜೆಟ್ ಮಂಡಿಸಿದ್ದು, ಹಿಂದುಳಿದ ಸಮಾಜಕ್ಕೆ ಏನೂ ಕೊಡುಗೆ ಕೊಟ್ಟಿಲ್ಲ. ಕೇವಲ ಮುಸ್ಲಿಮರ ಓಲೈಕೆಗೆ ಅನುದಾನ ಕೊಟ್ಟಿದ್ದಾರೆ. ಯಾವ ನಿಗಮಕ್ಕೂ ಬಿಡಿಗಾಸು ಕೊಟ್ಟಿಲ್ಲ. ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇ. 4ರಷ್ಟು ಮೀಸಲಾತಿ ಕೊಡುತ್ತಿರಿ. ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಕೊಡುವುದಾಗಿ ಅಧಿಕಾರಕ್ಕೆ ಬಂದು ತುಷ್ಟೀಕರಣದ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದಿರಿ. ಸಂವಿಧಾನ ಬದಲಾಯಿಸುವುದಾಗಿ ಹೇಳಿಕೆ ನೀಡಿರುವ ಡಿಸಿಎಂ ಅವರನ್ನು ವಿಧಾನಸಭೆಯಿಂದ ಹೊರಗೆ ಹಾಕಬೇಕು. ಮುಸ್ಲಿಮರಿಂದ ಮಸ್ಲಿಮರಿಗಾಗಿ, ಮುಸಲ್ಮಾನರಿಗೋಸ್ಕರ ಕಾಂಗ್ರೆಸ್ ಸರ್ಕಾರ ಇದೆ ಎಂದು ಕಿಡಿಕಾರಿದರು.ರಾಜ್ಯ ಉಪಾಧ್ಯಕ್ಷ ಡಾ. ಬಸವರಾಜ ಕೆಲಗಾರ, ಮುಖಂಡರಾದ ಗವಿಸಿದ್ದಪ್ಪ ದ್ಯಾಮಣ್ಣನವರ, ಪಾಲಾಕ್ಷಗೌಡ ಪಾಟೀಲ, ಮಂಜುನಾಥ ಓಲೇಕಾರ, ಕೆ. ಶಿವಲಿಂಗಪ್ಪ ಮಾತನಾಡಿದರು. ಪ್ರತಿಭಟನೆಯಲ್ಲಿ ಜಿಪಂ ಮಾಜಿ ಸದಸ್ಯ ವಿರೂಪಾಕ್ಷಪ್ಪ ಕಡ್ಲಿ, ಮುರಿಗೆಪ್ಪ ಶೆಟ್ಟರ್, ಕೆ.ಸಿ. ಕೋರಿ, ಗಿರೀಶ ತುಪ್ಪದ, ನಂಜುಂಡೇಶ ಕಳ್ಳೇರ, ಮೃತ್ಯುಂಜಯ ಮುಷ್ಠಿ, ಪ್ರಭು ಹಿಟ್ನಳ್ಳಿ, ಸುಶಿಲ್ ನಾಡಗೇರ, ಶಿವಕುಮಾರ ತಿಪ್ಪಶೆಟ್ಟಿ, ಜಗದೀಶ ಮಲಗೋಡ, ಮಂಜುನಾಥ ಗಾಣಿಗೇರ, ಸಂತೋಷ ಆಲದಕಟ್ಟಿ, ಕಲ್ಯಾಣಕುಮಾರ ಶೆಟ್ಟರ, ಅಭಿಷೇಕ ಗುಡಗೂರ, ಗುಡ್ಡಪ್ಪ ಭರಡಿ, ಪ್ರಕಾಶ ಉಜ್ಜನಿಕೊಪ್ಪ, ನಿಖಿಲ್ ಡೊಗ್ಗಲ್ಲ, ಸಿದ್ದು ಚಿಕ್ಕಬಿದರಿ, ಶಂಭು ಹತ್ತಿ, ಮಂಜುನಾಥ ಮಡಿವಾಳರ, ವಿಜಯಕುಮಾರ ಕೂಡ್ಲಪ್ಪನವರ, ಶಿವಯೋಗಿ ಹುಲಿಕಂತಿಮಠ, ಭಾರತಿ ಜಂಬಗಿ, ರೋಹಿಣಿ ಪಾಟೀಲ, ಲಲಿತಾ ಗುಂಡೆನಹಳ್ಳಿ, ಪುಷ್ಪಾ ಚಕ್ರಸಾಲಿ ಇತರರು ಇದ್ದರು.

ನಾಲಿಗೆ ಹರಿಬಿಟ್ಟ ಜಿಲ್ಲಾಧ್ಯಕ್ಷ ಪೂಜಾರಬಿಜೆಪಿ ಪ್ರತಿಭಟನೆ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಅರುಣಕುಮಾರ ಪೂಜಾರ ಡಿಕೆಶಿ ವಿರುದ್ಧ ಮಾತನಾಡುವ ಭರದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ತೀರಾ ಕೆಳಮಟ್ಟದ ಭಾಷೆ ಬಳಸಿ ನಿಂದಿಸಿದ್ದು, ಅವರು ಮಾತನಾಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಕಾಂಗ್ರೆಸ್ ಕಾರ್ಯಕರ್ತರು ಕಿಡಿಕಾರಿದ್ದಾರೆ.

ಕೂಡಲೇ ಕ್ಷಮೆಯಾಚಿಸಬೇಕು...ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ ಕುರಿತು ಬಿಜೆಪಿ ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ ಅವಾಚ್ಯ ಶಬ್ದ ಬಳಸಿರುವುದನ್ನು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ ಖಂಡಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಇಂತಹ ಶಬ್ದಗಳನ್ನು ಉಪಯೋಗಿಸಿರುವ ಪೂಜಾರ ಅವರ ಕೀಳರಿಮೆ ಹಾಗೂ ಕೊಳಕು ಮನಸ್ಥಿತಿಯನ್ನು ತೋರಿಸುತ್ತದೆ. ಈಗಾಗಲೇ ಡಿ.ಕೆ. ಶಿವಕುಮಾರ್ ಅವರು ಸಂವಿಧಾನದ ಕುರಿತು ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಆದರೂ ಸಹಿತ ನಮ್ಮಪಕ್ಷದ ರಾಜ್ಯಾಧ್ಯಕ್ಷರಿಗೆ ಅವಾಚ್ಯ ಶಬ್ದ ಬಳಸಿರುವ ಬಿಜೆಪಿ ಜಿಲ್ಲಾಧ್ಯಕ್ಷರು ಕೂಡಲೇ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಅವರ ವಿರುದ್ಧ ಜಿಲ್ಲಾದ್ಯಂತ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

Share this article