ಕುರುಬ ಸಮುದಾಯದ ಅಭಿವೃದ್ಧಿಯಲ್ಲಿ ಬಿಜೆಪಿ ಪಾತ್ರ ದೊಡ್ಡದು-ಮಾಜಿ ಸಚಿವ ವಿಶ್ವನಾಥ

KannadaprabhaNewsNetwork |  
Published : May 06, 2024, 12:35 AM IST
5ಎಚ್‌ವಿಆರ್‌3 | Kannada Prabha

ಸಾರಾಂಶ

ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರವು ಬಿ.ಎಸ್. ಯಡಿಯೂರಪ್ಪ ಅವರ ಕಾಲದಲ್ಲಿ ಜಾರಿಗೆ ಬಂತು. ಕುರುಬ ಸಮುದಾಯದ ಅಭಿವೃದ್ಧಿಯಲ್ಲಿ ಬಿಜೆಪಿ ಪಾತ್ರ ದೊಡ್ಡದಿದ್ದು, ಸಮುದಾಯದ ಬಾಂಧವರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಬೇಕು ಎಂದು ವಿಧಾನಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌ ಮನವಿ ಮಾಡಿದರು.

ಹಾವೇರಿ:ಕನಕದಾಸರಿಗೆ ಸಂಬಂಧಿಸಿದ ಕಾಗಿನೆಲೆ ಮತ್ತು ಬಾಡ ಸ್ಥಳಗಳು ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಭಿವೃದ್ಧಿಗೊಂಡವು. ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರವು ಬಿ.ಎಸ್. ಯಡಿಯೂರಪ್ಪ ಅವರ ಕಾಲದಲ್ಲಿ ಜಾರಿಗೆ ಬಂತು. ಕುರುಬ ಸಮುದಾಯದ ಅಭಿವೃದ್ಧಿಯಲ್ಲಿ ಬಿಜೆಪಿ ಪಾತ್ರ ದೊಡ್ಡದಿದ್ದು, ಸಮುದಾಯದ ಬಾಂಧವರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಬೇಕು ಎಂದು ವಿಧಾನಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌ ಮನವಿ ಮಾಡಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಯಾಗಿದ್ದ ಕೆಂಗಲ್ ಹನುಮಂತಯ್ಯ ಅವರು ನಂತರ ಲೋಕಸಭಾ ಚುನಾವಣೆಯಲ್ಲಿ ಗೆದ್ದು ರೈಲ್ವೆ ಮಂತ್ರಿಯಾದರು. ವೀರಪ್ಪ ಮೊಯ್ಲಿ ಗೆದ್ದು ಪೆಟ್ರೋಲಿಯಂ ಸಚಿವರಾದರು, ಸದಾನಂದ ಗೌಡರು ರಸಗೊಬ್ಬರ ಸಚಿವರಾದರು. ಹೀಗೆ ರಾಜ್ಯದಲ್ಲಿ ಮುಖ್ಯಮಂತ್ರಿಯಾದವರು ಕೇಂದ್ರ ಸರ್ಕಾರದಲ್ಲಿ ಸಚಿವರಾಗಿರುವ ಪರಂಪರೆ ಇದೆ. ಅದೇ ರೀತಿ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರು ಕೂಡ ಈ ಬಾರಿ ಗೆದ್ದರೆ ಕೇಂದ್ರದಲ್ಲಿ ಮಂತ್ರಿಯಾಗುವ ಯೋಗವಿದೆ ಎಂದರು. ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಕುರಿಗಾರರಿಗೆ ₹300 ಕೋಟಿ ಯೋಜನೆ ರೂಪಿಸಿ, 20 ಸಾವಿರ ಕುಟುಂಬಗಳಿಗೆ ನೆರವು ನೀಡಲು ಕ್ರಮ ಕೈಗೊಂಡಿದ್ದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಆ ಯೋಜನೆ ಸ್ಥಗಿತಗೊಂಡಿದೆ ಎಂದು ಟೀಕಿಸಿದರು.

ದೇಶದ 145 ಕೋಟಿ ಜನರ ಬದುಕಿನ ಜನತಂತ್ರ ವ್ಯವಸ್ಥೆಯ ಚುನಾವಣೆ ಇದಾಗಿದೆ. ಭಾರತದ ಸಂರಕ್ಷಣೆಯ ಚುನಾವಣೆಯಾಗಿದೆ. ಬೊಮ್ಮಾಯಿ ಅವರಿಗೆ ಸಹನೆ, ಸೌಮ್ಯತೆ, ಜನರನ್ನು ಪ್ರೀತಿಸುವ ಗುಣವಿದೆ. ರಾಜ್ಯದ ಅಭಿವೃದ್ಧಿ ಬಗ್ಗೆ ಅವರ ಧ್ವನಿ ಸಂಸತ್‌ನಲ್ಲಿ ಪ್ರತಿಧ್ವನಿಸಬೇಕಾಗಿದೆ. ಹಾವೇರಿ ಲೋಕಸಭಾ ಕ್ಷೇತ್ರ ಸಮಗ್ರ ಅಭಿವೃದ್ಧಿಯಾಗಬೇಕಿದೆ. ಹೀಗಾಗಿ ಬೊಮ್ಮಾಯಿ ಅವರನ್ನು ಮತದಾರರು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಎಸ್ಟಿ ಮೀಸಲಾತಿಗೆ ಪ್ರಸ್ತಾವ: ಕುರುಬ ಸಮುದಾಯದವರಿಗೆ ಬಿಜೆಪಿಯವರು ಈ ಬಾರಿ ಟಿಕೆಟ್ ನೀಡಿಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ, ಎಲ್ಲ ಸಮುದಾಯಗಳಿಗೂ ಕೆಲವೊಮ್ಮೆ ಟಿಕೆಟ್ ನೀಡಲು ಸಾಧ್ಯವಾಗುವುದಿಲ್ಲ. ಆದರೆ, ಕುರುಬ ಸಮುದಾಯದ ಅಭಿವೃದ್ಧಿಗೆ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದ ಶ್ರೇಯ ಬಿಜೆಪಿಗೆ ಸಲ್ಲುತ್ತದೆ. ಕಾಗಿನೆಲೆ ಶ್ರೀಗಳು ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಕಾಗಿನೆಲೆಯಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡಿದ್ದರು. ಆಗ ಬೊಮ್ಮಾಯಿ ಅವರು ಕುಲಶಾಸ್ತ್ರೀಯ ಅಧ್ಯಯನ ಮಾಡಿಸಿ ಕೇಂದ್ರಕ್ಕೆ ಪ್ರಸ್ತಾವ ಕಳುಹಿಸಿಕೊಟ್ಟಿದ್ದಾರೆ. ಬೊಮ್ಮಾಯಿ ಸಂಸದರಾದರೆ, ಎಸ್‌.ಟಿ. ಮೀಸಲಾತಿ ಸಿಗುವ ವಿಶ್ವಾಸವಿದೆ ಎಂದರು.

ಮುಖಂಡರಾದ ಭೋಜರಾಜ ಕರೂದಿ, ಬಸವರಾಜ ಮತ್ತೂರು, ನೀಲಪ್ಪ ಚಾವಡಿ, ಮಲ್ಲೇಶ ಬಣಕಾರ ಇದ್ದರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ