ಜಿಲ್ಲಾ ಬಿಜೆಪಿ ಅಧ್ಯಕ್ಷ ಓಂಶಕ್ತಿ ಚಲಪತಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾರ್ಯಕರ್ತರು ಎತ್ತಿನಬಂಡಿಯಲ್ಲಿ ಸರ್ಕಾರದ ಅಣಕು ಶವಯಾತ್ರೆ ನಡೆಸಲು ಮುಂದಾದರು.
ಬಸ್ ಪ್ರಯಾಣ ದರ, ಹಾಲಿನ ದರ ಏರಿಕೆಗೆ ಖಂಡನೆ । ಅಣಕು ಶವಯಾತ್ರೆಗೆ ಪೊಲೀಸರ ವಿರೋಧ ತೀವ್ರ ವಾಗ್ವಾದ, ನೂಕಾಟ
ಕನ್ನಡಪ್ರಭ ವಾರ್ತೆ ಕೋಲಾರ
ಬಸ್ ದರ ಹಾಗೂ ಹಾಲಿನ ದರ ಏರಿಕೆ ಖಂಡಿಸಿ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.
ಪ್ರತಿಕೃತಿ ದಹನ ಹಾಗೂ ಅಣಕು ಶವಯಾತ್ರೆಗೆ ಪೊಲೀಸರು ಅವಕಾಶ ನೀಡದ ಹಿನ್ನೆಲೆಯಲ್ಲಿ ಪ್ರತಿಭಟನಾ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿ, ಬಿಜೆಪಿ ಮುಖಂಡರು ಹಾಗೂ ಪೊಲೀಸರ ನಡುವೆ ತೀವ್ರ ವಾಗ್ವಾದ, ನೂಕಾಟ ನಡೆಯಿತು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಓಂಶಕ್ತಿ ಚಲಪತಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾರ್ಯಕರ್ತರು ಎತ್ತಿನಬಂಡಿಯಲ್ಲಿ ಸರ್ಕಾರದ ಅಣಕು ಶವಯಾತ್ರೆ ನಡೆಸಲು ಮುಂದಾದರು. ಮೆಕ್ಕೆ ವೃತ್ತದಲ್ಲಿ ಸರ್ಕಾರದ ಪ್ರತಿಕೃತಿ ದಹಿಸಲು ಕಟ್ಟಿಗೆ, ಭತ್ತದ ಹುಲ್ಲು ತಂದಿದ್ದರು. ಪ್ರತಿಕೃತಿ ದಹನ ಹಾಗೂ ಅಣಕು ಶವಯಾತ್ರೆಗೆ ಪೊಲೀಸರು ವಿರೋಧ ವ್ಯಕ್ತಪಡಿಸಿದರು.
ಪ್ರತಿಭಟನೆ ಆರಂಭಕ್ಕೂ ಮೊದಲೇ ವಾಗ್ವಾದ ಶುರುವಾಯಿತು. ಕಾಂಗ್ರೆಸ್ ಪ್ರತಿಭಟನೆಯಲ್ಲಿ ಪ್ರತಿಕೃತಿ ದಹನಕ್ಕೆ ಅವಕಾಶ ನೀಡುತ್ತೀರಿ, ನಮಗೆ ಏಕೆ ಇಲ್ಲ ಎಂದು ಬಿಜೆಪಿ ಮುಖಂಡರು ಪೊಲೀಸರ ಮೇಲೆ ಮುಗಿಬಿದ್ದರು. ಅಣಕು ಶವಯಾತ್ರೆಗೆ ತಂದಿದ್ದ ಕಟ್ಟಿಗೆ, ಹುಲ್ಲು ತೆಗೆದುಕೊಳ್ಳಲು ಪೊಲೀಸರು ಮುಂದಾದಾಗ ಜಿಲ್ಲಾಧ್ಯಕ್ಷ ಚಲಪತಿ ಹಾಗೂ ಸರ್ಕಲ್ ಇನ್‌ಸ್ಪೆಕ್ಟರ್ ಲೋಕೇಶ್ ನಡುವೆ ವಾಗ್ವಾದ ನಡೆಯಿತು.
ಪೊಲೀಸರು ಬಲವಂತವಾಗಿ ಭತ್ತದ ಹುಲ್ಲು ಕಿತ್ತುಕೊಂಡಾಗ ನೂಕಾಟ, ತಳ್ಳಾಟವಾಯಿತು. ಇದರಿಂದ ಆಕ್ರೋಶಗೊಂಡ ಕಾರ್ಯಕರ್ತರು ಕೆಎಸ್‌ಆರ್‌ಟಿಸಿ ಬಸ್ ತಡೆದು ರಸ್ತೆ ಮಧ್ಯೆ ಕುಳಿತು ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆ ವಿರುದ್ಧ ಘೋಷಣೆ ಕೂಗಿದರು. ಕಾಂಗ್ರೆಸ್ ಪರವಾಗಿ ಪೊಲೀಸರು ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಮಾತನಾಡಿ, ರಾಜ್ಯದಲ್ಲಿ ನಂಬರ್ ಒನ್ ಮುಖ್ಯಮಂತ್ರಿಯಾಗಬೇಕೆಂದು ಹೊರಟಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನಂಬರ್ ಒನ್ ಬೆಲೆ ಏರಿಕೆ ಹಾಗೂ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಬಸ್ ದರ ಮತ್ತು ಹಾಲಿನ ದರ ಏರಿಕೆ ಮಾಡುವ ಮೂಲಕ ಮಧ್ಯಮ ವರ್ಗ ಹಾಗೂ ಬಡವರಿಗೆ ಸರ್ಕಾರ ದೀಪಾವಳಿ ಉಡುಗೊರೆ ನೀಡಿದೆ ಎಂದು ವ್ಯಂಗ್ಯವಾಡಿದರು.
ಗೃಹಲಕ್ಷ್ಮಿ ಸೇರಿದಂತೆ ಗ್ಯಾರಂಟಿ ಯೋಜನೆಗಳಲ್ಲಿ ಹಣ ದುರುಪಯೋಗವಾಗುತ್ತಿದೆ. ಸರ್ಕಾರದಲ್ಲಿ ಡೀಸೆಲ್‌ಗೆ ಹಣವಿಲ್ಲದೆ ಬಸ್‌ಗಳನ್ನು ನಿಲ್ಲಿಸಲಾಗಿದೆ. ಹಣದ ಕೊರತೆ ಇದೆ ಎಂಬುದನ್ನು ಸರ್ಕಾರವೇ ಒಪ್ಪಿಕೊಂಡಂತಾಗಿದೆ ಎಂದರು.
ಹಾಲು ಉತ್ಪಾದಕರಿಗೆ ಹೆಚ್ಚಿನ ಹಣ ನೀಡುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಹಾಲಿನ ದರ ಹೆಚ್ಚಿಸಿ ಗ್ರಾಹಕರಿಗೆ ತೊಂದರೆ ಮಾಡಲಾಗಿದೆ. ಬಸ್ ದರವನ್ನು ಶೇ.೩೫ರಷ್ಟು ಹೆಚ್ಚಿಸಿ ಸಾರ್ವಜನಿಕರಿಗೆ ತೊಂದರೆ ಮಾಡಲಾಗಿದೆ. ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ಕಿತ್ತುಕೊಳ್ಳುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಇದರ ವಿರುದ್ಧ ಬಿಜೆಪಿ ಬೃಹತ್ ಹೋರಾಟ ನಡೆಸಲಿದೆ ಎಂದರು.
ಕೇಂದ್ರ ಸರ್ಕಾರ ಡೀಸೆಲ್, ಪೆಟ್ರೋಲ್ ಬೆಲೆಯನ್ನು ೧ ರು. ಏರಿಕೆ ಮಾಡಿದ್ದಕ್ಕೆ ಕಾಂಗ್ರೆಸ್ಸಿಗರು ಪ್ರತಿಭಟನೆ ಮಾಡಿದ್ದರು. ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೂರುವರೆ ವರ್ಷಗಳಲ್ಲಿ ಏಳೆಂಟು ಬಾರಿ ಬಸ್ ದರ ಏರಿಕೆ ಮಾಡಿದೆ ಎಂದು ಖಂಡಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.