ಬಿಜೆಪಿ ಕಾರ್ಯಕರ್ತರ ಮೇಲೆ ಲಾಠಿ ಪ್ರಹಾರ

KannadaprabhaNewsNetwork |  
Published : Feb 08, 2024, 01:30 AM ISTUpdated : Feb 08, 2024, 08:07 AM IST
ಕಾಂಗ್ರೆಸ್‌ ಭವನಕ್ಕೆ ನುಗ್ಗಲು ಯತ್ನಿಸುತ್ತಿರುವ ಬಿಜೆಪಿ ಕಾರ್ಯಕರ್ತರನ್ನು ತಡೆಯುತ್ತಿರುವ ಪೊಲೀಸರು | Kannada Prabha

ಸಾರಾಂಶ

ಕಾಂಗ್ರೆಸ್‌ ಭವನಕ್ಕೆ ನುಗ್ಗಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಪ್ರಹಾರ ಮಾಡಿ, ಪ್ರತಿಭಟನಾನಿರತ ಬಿಜೆಪಿ ಕಾರ್ಯಕರ್ತರನ್ನು ತಮ್ಮ ವಶಕ್ಕೆ ಪಡೆದ ಘಟನೆ ಬುಧವಾರ ನಡೆಯಿತು.

ಕನ್ನಡಪ್ರಭ ವಾರ್ತೆ ಬೆಳಗಾವಿ

ರೈತರಿಗೆ ಹಾಲಿನ ಪ್ರೋತ್ಸಾಹ ಧನ ನೀಡುವುದು ಸೇರಿದಂತೆ ಮತ್ತಿತರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಸರ್ಕಾರದ ವಿರುದ್ಧ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿ, ಕಾಂಗ್ರೆಸ್‌ ಭವನಕ್ಕೆ ನುಗ್ಗಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಪ್ರಹಾರ ಮಾಡಿ, ಪ್ರತಿಭಟನಾನಿರತ ಬಿಜೆಪಿ ಕಾರ್ಯಕರ್ತರನ್ನು ತಮ್ಮ ವಶಕ್ಕೆ ಪಡೆದ ಘಟನೆ ಬುಧವಾರ ನಡೆಯಿತು.

ನಗರದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಜಾನುವಾರುಗಳ ಸಮೇತ ರಸ್ತೆಗಿಳಿದು ಪ್ರತಿಭಟಿಸಿದ ಬಿಜೆಪಿ ಕಾರ್ಯಕರ್ತರು, ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಮೂಲಕ ಆಗಮಿಸಿ, ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. 

ಕೇಂದ್ರದ ಕಿಸಾನ ಸಮ್ಮಾನದ ಜತೆ ₹ 4 ಸಾವಿರ ರದ್ದುಗೊಳಿಸಿರುವುದು ಹಾಗೂ ರೈತರ ವಹಿವಾಟಕ್ಕೆ ಮುದ್ರಾಂಕ ಶುಲ್ಕ ದುಪ್ಪಟ್ಟು ಮಾಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿಯನ್ನು ತೀವ್ರವಾಗಿ ಖಂಡಿಸಿದರು.

ಬಳಿಕ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿಯಿರುವ ಕಾಂಗ್ರೆಸ್‌ ಭವನದವರೆಗೆ ಪ್ರತಿಭಟನೆ ಮೂಲಕ ತೆರಳಿದ ಬಿಜೆಪಿಗರು ಭವನದ ಒಳಗೆ ನುಗ್ಗಲು ಯತ್ನಿಸಿದರು. ಈ ವೇಳೆ ಸಂಸದ ಡಿ.ಕೆ.ಸುರೇಶ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿದರು. 

ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್‌ ಭವನದಲ್ಲಿದ್ದ ಕಾಂಗ್ರೆಸ್‌ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆ ಹಾಕಿದರು. ಇದರಿಂದ ಕೆರಳಿದ ಪ್ರತಿಭಟನಾನಿರತ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‌ ಭವನಕ್ಕೆ ನುಗ್ಗಲು ಯತ್ನಿಸಿದರು. 

ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾನಿರತ ಬಿಜೆಪಿ ಕಾರ್ಯಕರ್ತರೊಂದಿಗೆ ತಳ್ಳಾಟ, ನೂಕಾಟದ ಜೊತೆಗೆ ವಾಗ್ವಾದವೂ ನಡೆಯಿತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿ, ಕಾರ್ಯಕರ್ತರನ್ನು ತಮ್ಮ ವಶಕ್ಕೆ ಪಡೆದರು.

ರೈತರಿಗೆ ಹಾಲಿನ ಪ್ರೋತ್ಸಾಹ ಧನ ಕೂಡಲೆ ಪಾವತಿಸಬೇಕು. ಕಿಸಾನ ಸಮ್ಮಾನದ ₹ 4ಸಾವಿರ ಪುನರಾಂಭಿಸಬೇಕು. ದುಪ್ಪಟ್ಟು ಮಾಡಿರುವ ಮುದ್ರಾಂಕ ಶುಲ್ಕ ರದ್ದುಗೊಳಿಸಬೇಕು. ಇಲ್ಲದಿದ್ದರೆ ಜಾನುವಾರುಗಳ ಸಮೇತ ಬೀದಿಗಿಳಿದು ಉಗ್ರ ಹೋರಾಟ ಮಾಡಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಅನಿಲ ಬೆನಕೆ, ಮುರಘೇಂದ್ರಗೌಡ ಪಾಟೀಲ, ರುದ್ರಣ್ಣ ಚಂದರಗಿ ಮೊದಲಾದವರು ಪಾಲ್ಗೊಂಡಿದ್ದರು.

ಕಾಂಗ್ರೆಸ್‌ ಕಾರ್ಯಕರ್ತರಿಂದ ಧರಣಿ:  ಕಾಂಗ್ರೆಸ್‌ ಭವನಕ್ಕೆ ನುಗ್ಗಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಬೇಕೆಂದು ಆಗ್ರಹಿಸಿ ಕಾಂಗ್ರೆಸ್‌ ಕಾರ್ಯಕರ್ತರು ಸಂಗೊಳ್ಳಿರಾಯಣ್ಣ ವೃತ್ತದ ಬಳಿ ರಸ್ತೆಯ ಮೇಲೆ ಕುಳಿತು ಧರಣಿ ನಡೆಸಿ, ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 

ಕೆಪಿಸಿಸಿ ಸದಸ್ಯೆ ಆಯಿಷಾ ಸನದಿ ನೇತೃತ್ವದಲ್ಲಿ ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಿದ ಕಾಂಗ್ರೆಸ್‌ ಕಾರ್ಯಕರ್ತರು, ಬಿಜೆಪಿ ಕಾರ್ಯಕರ್ತರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು. ಈ ಘಟನೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಭವನದ ಬಳಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದೆ.

PREV

Recommended Stories

ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್‌
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ