ಹಳಿಯಾಳ: ರೈತ ವರ್ಗ ಎದುರಿಸುತ್ತಿರುವ ವಿವಿಧ ಸಮಸ್ಯೆಗಳಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ಹಳಿಯಾಳ ಬಿಜೆಪಿ ರೈತ ಮೋರ್ಚಾ ವತಿಯಿಂದ ಶನಿವಾರ ಪ್ರತಿಭಟನಾ ಮೆರವಣಿಗೆ ನಡೆಸಿ, ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಆಡಳಿತ ಸೌಧಕ್ಕೆ ತೆರಳಿ ತಹಸೀಲ್ದಾರ್ ಆರ್. ಭಾಗವಾನ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ರೈತ ವಿರೋಧಿ ಸರ್ಕಾರ: ನಮ್ಮ ರಾಜ್ಯವು ಕಳೆದ ವರ್ಷ ಬರಗಾಲದಿಂದ ತತ್ತರಿಸಿದ್ದು, ರಾಜ್ಯದ ರೈತರ ಆರ್ಥಿಕ ಸ್ಥಿತಿ ಚಿಂತಾಜನಕವಾಗಿದೆ. ಇಂತಹ ವಿಷಮ ಸ್ಥಿತಿಯಲ್ಲಿ ರಾಜ್ಯ ಸರ್ಕಾರವು ಬಿತ್ತನೆ ಬೀಜದ ದರವನ್ನು ಶೇ. 50ರಿಂದ ಶೇ. 60ರಷ್ಟು ಏರಿಸಿದೆ. ಸರ್ಕಾರದ ಈ ಧೋರಣೆಯಿಂದಾಗಿ ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಬಿತ್ತನೆ ಬೀಜದ ದರ ಹೆಚ್ಚಿಸಿದ್ದರಿಂದ ಬಡರೈತರು ಈ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಲಾಗದೇ ಸಾಲದ ಸುಳಿಯಲ್ಲಿ ಸಿಲುಕುವಂತಾಗಿದೆ. ಕೃಷಿ ಭೂಮಿಯಲ್ಲಿ ಬಿತ್ತದೇ ಬಂಜರು ಬಿಡುವುದರಿಂದ ರಾಜ್ಯ ಮತ್ತು ದೇಶದ ಆರ್ಥಿಕ ಸ್ಥಿತಿಗೆ ಹಾನಿ ಸಂಭವಿಸಬಹುದು. ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಬಂದ ಮೇಲೆ ಹಾಲು ಉತ್ಪಾದಕ ರೈತರಿಗೆ ಪ್ರೋತ್ಸಾಹ ಧನ ಸಹ ಈ ವರೆಗೂ ನೀಡಲ್ಲ. ಆದುದರಿಂದ ರಾಜ್ಯ ಸರ್ಕಾರ ತಕ್ಷಣ ಬಿತ್ತನೆ ಬೀಜದ ದರ ಕಡಿಮೆ ಮಾಡಬೇಕು. ಕಳೆದ ಬಜೆಟ್‌ನಲ್ಲಿ ಘೋಷಿಸಿದಂತೆ ರಾಜ್ಯ ಸರ್ಕಾರ ರೈತರಿಗೆ ₹5 ಲಕ್ಷದ ವರೆಗೆ ಬೆಳೆಸಾಲ ಮತ್ತು ₹15 ಲಕ್ಷದ ವರೆಗೆ ಮಾಧ್ಯಮಿಕ ಸಾಲವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.ಉಗ್ರ ಹೋರಾಟದ ಎಚ್ಚರಿಕೆ: ಬಿಜೆಪಿ ಮಂಡಿಸಿದ ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ಬಿಜೆಪಿಯ ರೈತ ಮೋರ್ಚಾದಿಂದ ಉಗ್ರ ಹೋರಾಟ ನಡೆಸಲಾಗುವುದೆಂದು ಮನವಿಯಲ್ಲಿ ಎಚ್ಚರಿಸಲಾಗಿದೆ. ಮನವಿಯ ಪ್ರತಿಯನ್ನು ಜಿಲ್ಲಾ ಉಸ್ತುವಾರಿ ಸಚಿವ, ಕೃಷಿ ಸಚಿವ, ಜಿಲ್ಲಾಧಿಕಾರಿ ಹಾಗೂ ಕೃಷಿ ಇಲಾಖೆಯ ನಿರ್ದೇಶಕರಿಗೆ ರವಾನಿಸಲಾಯಿತು.